ಮಂಗಳೂರು: ಕಂಕನಾಡಿ ಬೈಪಾಸ್ ರಸ್ತೆಯಲ್ಲಿರುವ ಹೊಟೇಲೊಂದರ ಕ್ಯಾಶ್ ಕೌಂಟರ್‌ನಲ್ಲಿದ್ದ ಕಾಣಿಕೆ ಡಬ್ಬವನ್ನು ಕಳವು ಮಾಡಿದ ಪ್ರಕರಣದಲ್ಲಿ ಮೊಹಮ್ಮದ್ ಆಸಿಫ್ ಕುಕ್ಕಾಜೆ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2ನೇ ಸಿ.ಜೆ.ಎಂ. ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ಮತ್ತು 2 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.
2021ರ ಮಾ. 15ರಂದು ನಗರದ ಕಂಕನಾಡಿ ಬೈಪಾಸ್ ರಸ್ತೆಯುಲ್ಲಿರುವ ನವೀನ್ ಮಾಲಕತ್ವದ ಐಸಿರಿ ಹೊಟೇಲ್‌ನ ಕ್ಯಾಶ್ ಕೌಂಟರ್‌ನ ಮೇಲೆ ಇಟ್ಟಿದ್ದ ಕಂಕನಾಡಿ ಪಡುಮಲೆ ಕಲ್ಲುರ್ಟಿ ದೈವಸ್ಥಾನದ ಕಾಣಿಕೆ ಡಬ್ಬವನ್ನು ಇರಾ ಕುಕ್ಕಾಜೆಬೈಲು ಮೊಹಮ್ಮದ್ ಆಸೀಫ್ ಕುಕ್ಕಾಜೆ (28) ಮತ್ತು ಇರಾ ಮಂಚಿಕಟ್ಟೆ ಮಹಮ್ಮದ್ ಇಲಿಯಾಸ್ ಯಾನೇ ಆಳಿಯಾರ್ (30) ಕಳವು ಮಾಡಿದ್ದರು.
ಹೊಟೇಲ್ ಮಾಲಕರ ದೂರಿನಂತೆ ಪೂರ್ವ ಪೊಲೀಸ್ ಠಾಣೆಯ ಅಂದಿನ ಪೊಲೀಸ್ ಉಪನಿರೀಕ್ಷಕ ಜ್ಞಾನ ಶೇಖರ್ ಪ್ರಕರಣದ ತನಿಖೆ ನಡೆಸಿ ಆರೋಪಿಗಳಿಂದ ಕಳವು ಮಾಡಿದ ಕಾಣಿಕೆ ಡಬ್ಬ ಹಾಗೂ 705.50 ರೂ. ನಗದನ್ನು ವಶಪಡಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿ ವಾದ-ಪ್ರತಿವಾದವನ್ನು ಆಲಿಸಿದ 2ನೇ ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶ ಮಧುಕರ ಪಿ. ಭಾಗವತ್ ಕೆ. ಅವರು ನ. 23ರಂದು 1ನೇ ಆರೋಪಿ ಮೊಹಮ್ಮದ್ ಆಸೀಫ್ ಕುಕ್ಕಾಜೆ ತಪ್ಪಿತಸ್ಥನೆಂದು ನಿರ್ಣಯಿಸಿ 1 ವರ್ಷ ಜೈಲು ಶಿಕ್ಷೆ ಮತ್ತು 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ 10 ದಿನಗಳ ಸಾಮಾನ್ಯ ಸೆರೆಮನೆ ವಾಸ ಅನುಭವಿಸಬೇಕು ಎಂದು ಆದೇಶದಲ್ಲಿ ವಿವರಿಸಿದ್ದಾರೆ.
ಪ್ರಕರಣದಲ್ಲಿ 2ನೇ ಆರೋಪಿ ಮಹಮ್ಮದ್ ಇಲಿಯಾಸ್‌ನನ್ನು ಸಾಕ್ಷ್ಯಾಧಾರದ ಕೊರತೆಯಿಂದ ನ್ಯಾಯಾಲಯ ಬಿಡುಗಡೆಗೊಳಿಸಿದೆ. ಸರಕಾರದ ಪರ 2ನೇ ಸಿಜೆಎಂ ನ್ಯಾಯಾಲಯದ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದ ಮಂಡಿಸಿದ್ದರು.