ಬಂಗಾರಪೇಟೆ: ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿಗದಿ ಆಗಿದ್ದ ನಿವೇಶನಕ್ಕೆ ಖಾಸಗಿ ವ್ಯಕ್ತಿಗಳು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದು, ತಾಲೂಕು ಆಡಳಿತ ಸೂಕ್ತ ದಾಖಲಾತಿ ಸಲ್ಲಿಸುವ ಮೂಲಕ ತೆರವು ಮಾಡಿಸಲು ಪ್ರಯತ್ನ ನಡೆಸಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಭವನ ನಿರ್ಮಾಣ ಸಮಿತಿ ಮುಖಂಡ ಸೂಲಿಕುಂಟೆ ರಮೇಶ್ ಎಚ್ಚರಿಕೆ ನೀಡಿದರು.
ಪಟ್ಟಣದ ಒಬ್ಬಟ್ಲು ಕೆರೆಯ ಬಳಿ ಸಮಿತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 40 ವರ್ಷದಿಂದಲೂ ಪಟ್ಟಣದ ಹೃದಯಾಭಾಗದಲ್ಲಿರುವ ಒಬ್ಬಟ್ಲು ಕೆರೆಯಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕನ್ನಡ ಭವನ, ತೋಟಗಾರಿಕೆ ಇಲಾಖೆ ಕಟ್ಟಡ, ಬಾಲಕಿಯರ ಹಾಸ್ಟೆಲ್ ನಿರ್ಮಿಸಲಾಗಿದೆ. ದುರುದ್ದೇಶದಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವುದು ಸಮಾಜ ವಿರೋಧಿ ಕೆಲಸ ಎಂದು ಆರೋಪಿಸಿದರು.
ದಾಖಲಾತಿ ಸಲ್ಲಿಸುವಲ್ಲಿ ವಿಫಲ: 10 ವರ್ಷ ನಿರಂತರ ಹೋರಾಟದ ಫಲವಾಗಿ ಒಬ್ಬಟ್ಲು ಕೆರೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಗುರುತಿಸಿದ್ದ ನಿವೇಶನವು ತೋಟಗಾರಿಕೆ ಇಲಾಖೆಯ ಅಧೀನದಲ್ಲಿದೆ. ಕೆರೆಯು ತನ್ನ ಆಕಾರವನ್ನು ಕಳೆದುಕೊಂಡ ಪರಿಣಾಮ ಪುರಸಭೆಯ ವ್ಯಾಪ್ತಿಗೆ ಬರುತ್ತದೆ. ಪುರಸಭೆಯಿಂದ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆ ಆಗಿ ಸರ್ಕಾರದಿಂದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುಮೋದನೆ ಪಡೆದುಕೊಂಡು, ಪುರಸಭೆಯಿಂದ ನಿವೇಶನಕ್ಕೆ ಇ- ಖಾತೆ ಆಗ್ತಿದೆ. ಇಷ್ಟೆಲ್ಲ ದಾಖಲೆಗಳನ್ನು ತಹಶೀಲ್ದಾರ್, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಅಧಿಕಾರಿಗಳು ಕೋರ್ಟ್‌ಗೆ ನೀಡುವುದರಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಮುಖಂಡ ಹುಣಸನಹಳ್ಳಿ ವೆಂಕಟೇಶ್ ಮಾತನಾಡಿ, ತಾಲೂಕಿನಲ್ಲಿ 45 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆಯನ್ನು ದಲಿತ ಸಮುದಾಯ ಹೊಂದಿದೆ. ಒಬ್ಬಟ್ಲು ಕೆರೆಯು ತನ್ನ ಅಸ್ತಿತ್ವ ಕಳೆದುಕೊಂಡ ಕಾರಣ 50 ವರ್ಷ ಸರ್ವೆ ನಂಬರ್‌ಗೆ ಮಾರ್ಪಾಡು ಮಾಡಲಾಗಿದೆ. ಆದರೆ, ಕಂದಾಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಂದಿಗೂ ಪಹಣಿಯಲ್ಲಿ ಕೆರೆ ಎಂದು ನಮೂದಿಸಲಾಗಿದೆ. ಇದರ ಪರಿಣಾಮ ಕೆಲ ಪಟ್ಟಭದ್ರ ಹಿತಾಸಕ್ತಿಗಳು, ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಉದ್ದೇಶದಿಂದ ನ್ಯಾಯಾಲಯದಿಂದ ತಾತ್ಕಾಲಿಕ ತಡೆ ತಂದಿದ್ದಾರೆ ಎಂದು ದೂರಿದರು.
ಈ ನಿವೇಶನದಲ್ಲಿ ಮದರಸ, ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯ, ಕನ್ನಡ ಭವನ, ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯ ನಿರ್ಮಿಸಲಾಗಿದೆ. ಈ ಕಟ್ಟಡ ಗಳನ್ನು ನಿರ್ಮಿಸುವಾಗ ಯಾವುದೇ ಅಡ್ಡಿ ಒಳಪಡಿ ಸದ ಕೆಲವರು, ಈಗ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತಡೆಯಾಜ್ಞೆ ತಂದಿರುವುದು ದುರಂತ. ಅಧಿಕಾರಿಗಳು ಸಮರ್ಪಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸದೆ ಹೋದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದೇ ಆದಲ್ಲಿ ಬಂಗಾರಪೇಟೆ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಮುಖಂಡ ಚಿಕ್ಕನಾರಾಯಣ ಮಾತನಾಡಿ, ಪಟ್ಟಣದ ಸರ್ವೆ ನಂಬರ್ 137ರಲ್ಲಿ ಒಟ್ಟು 4.15 ಎಕರೆ ಒಬ್ಬಟ್ಲು ಕೆರೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಸರ್ಕಾರ ಈಗಾಗಲೇ ಅನುದಾನ ಬಿಡುಗಡೆ ಮಾಡಿದೆ. ಆದರೆ, ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ತನ್ನ ಸಹಚರರಾದ ಶಂಕರ್, ಗಣೇಶ್, ಮುರುಗೇಶ್, ಮುನಿವೆಂಕಟಪ್ಪನವರ ಸಹಯೋಗದಲ್ಲಿ ನ್ಯಾಯಾಲಯಕ್ಕೆ ಮೊರೆ ಹೋಗಿ ತಡೆಯಾಜ್ಞೆ ತಂದಿರುವುದು ಸಮಂಜಸವಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ದಲಿತ ಮುಖಂಡರಾದ ಕೆ. ಮದಿವಣ್ಣನ್, ಕಲಾವಿದ ಯಲ್ಲಪ್ಪ, ಚಿಕ್ಕನಾರಾಯಣ, ಜೀವಿಕ ರಾಮಚಂದ್ರ, ಪಿವಿಸಿ ಮಣಿ, ಪ್ರಭಾವತಿ, ದೇಶಿಹಳ್ಳಿ ಲಕ್ಷ್ಮಮ್ಮ, ಕದಿರೇನಹಳ್ಳಿ ಕುಮಾರ್, ಮುನಿರಾಜು, ಗೌತಮ್‌ನಗರ ಶ್ರೀನಿವಾಸ್, ಜಿ.ರಾಮಚಂದ್ರ, ಆರ್.ರಘುನಾಥ್, ರವಿ, ಗುಟ್ಟಹಳ್ಳಿ ಶ್ರೀನಿವಾಸ್, ತಿಪ್ಪಯ್ಯ, ಕೀಲುಕೊಪ್ಪ ಶ್ರೀನಿವಾಸ್, ಪ್ರಸಾದ್, ವಿಜಿಕುಮಾರ್, ನವೀನ್‌ಕುಮಾರ್, ಡಿಕ್ಕಾ ವೆಂಕಟೇಶ್, ಪಿಳ್ಳಪ್ಪ, ಬಿ.ರಾಜಪ್ಪ ಮುಂತಾದವರಿದ್ದರು.