ಹುಬ್ಬಳ್ಳಿ:ಗಲಭೆ ಪ್ರಕರಣದಲ್ಲಿಬಂಧನಕ್ಕೊಳಗಾಗಿದ್ದ ಕರಸೇವಕ ಶ್ರೀಕಾಂತ್ ಪೂಜಾರಿ ಅವರಿಗೆ ಶುಕ್ರವಾರ ಜಿಲ್ಲಾ 1 ನೇ ಸತ್ರ ನ್ಯಾಯಾಲಯ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
ಇಂದು ಸಂಜೆ 6 ಗಂಟೆಯ ಒಳಗೆ ಜಾಮೀನು ಮಂಜೂರಾದ ಆದೇಶ ಪ್ರತಿ ಜೈಲಾಧಿಕಾರಿಯ ಕೈ ಸೇರಬೇಕಾಗಿದ್ದು, ತಡವಾಗುವ ಸಾಧ್ಯತೆ ಇರುವ ಕಾರಣ ನಾಳೆ (ಶನಿವಾರ)ಬೆಳಗ್ಗೆ ಶ್ರೀಕಾಂತ್ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಶ್ರೀಕಾಂತ್ ಪೂಜಾರಿ ಪರ ವಕೀಲರಾದ ಸಂಜಯ ಬಡಸ್ಕರ, ಅಶೋಕ ಅಣ್ವೇಕರ ವಾದ ಮಂಡಿಸಿದ್ದರು. ಸರಕಾರದ ಪರವಾಗಿ ಅಮರಾವತಿ ಬಿ.ಎನ್. ವಾದ ಮಂಡಿಸಿದ್ದರು.
1992 ರಲ್ಲಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಒಟ್ಟು 13 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪೈಕಿ ಐವರು ವಿಚಾರಣೆ ಎದುರಿಸಿ ಕೇಸ್ ಖುಲಾಸೆ ಮಾಡಿಕೊಂಡಿದ್ದರು. ಪ್ರಕರಣದಲ್ಲಿ ಉಳಿದ 8 ಜನರಲ್ಲಿ ಐವರು ಮೃತಪಟ್ಟಿದ್ದು, ಇನ್ನುಳಿದ ಮೂವರ ವಿರುದ್ಧ ಪೊಲೀಸರು ಇದೀಗ ಕ್ರಮಕ್ಕೆ ಮುಂದಾಗಿದ್ದರು .ಡಿ.18ರಂದು ಒಬ್ಬರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜಾಮೀನು ಮೇಲೆ ಬಿಡುಗಡೆ ಮಾಡಲಾಗಿತ್ತು.
ಡಿ.29ರಂದು ಶ್ರೀಕಾಂತ ಪೂಜಾರಿ ಅವರನ್ನು ಬಂಧಿಸಲಾಗಿತ್ತು. ಜಾಮೀನು ದೊರೆಯದ ಹಿನ್ನಲೆಯಲ್ಲಿ ನ್ಯಾಯಾಂಗ ವಶದಲ್ಲಿ ಇರಿಸಲಾಗಿತ್ತು. ಶ್ರೀಕಾಂತ್ ಪೂಜಾರಿ ಬಂಧನ ದೇಶಾದ್ಯಂತ ಬಿಜೆಪಿ ಸೇರಿ ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು.