ಬೆಂಗಳೂರು: ಕಂದಾಯ ಇಲಾಖೆಯ ದಾಖಲೆಗಳಲ್ಲಿ ಹೆದ್ದಾರಿ ಎಂದು ನಮೂದು ಆಗಿ, ಸದ್ಯ ನಗರದ ಮಧ್ಯ ಭಾಗದಲ್ಲಿ ಸೇರಿಕೊಂಡಿರುವ ರಸ್ತೆಗಳಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್‌ಗಳ ಪರವಾನಿಗೆ ನವೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಗುರುವಾರ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಹೆದ್ದಾರಿ ವ್ಯಾಪ್ತಿಗೆ ಒಳಪಟ್ಟಿದೆ ಎಂಬ ಕಾರಣಕ್ಕೆ ನಗರದ ಎಂಜಿ ರಸ್ತೆ, ರೆಸಿಡೆನ್ಸಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳ ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರವಾನಗಿ ನವೀಕರಣ ಮಾಡಲು ನಿರಾಕರಿಸಿರುವ ರಾಜ್ಯ ಅಬಕಾರಿ ಇಲಾಖೆಯ ಕ್ರಮ ಪ್ರಶ್ನಿಸಿ, ಬ್ರಿಗೇಡ್ ರಸ್ತೆಯ “ಫ್ಯೂಷನ್ ಲಾಂಜ್ ಆ್ಯಂಡ್ ರೆಸ್ಟೋರೆಂಟ್’ ಸೇರಿದಂತೆ 20ಕ್ಕೂ ಹೆಚ್ಚು ಬಾರ್ ಮಾಲೀಕರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠ, “ರಸ್ತೆಗಳನ್ನು ಡಿನೋಟಿಫಿಕೇಷನ್ ಮಾಡಲು ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದ್ದರೂ, ಈವರೆಗೆ ಕ್ರಮ ಏಕೆ ಜರುಗಿಸಿಲ್ಲ,’ ಎಂದು ಪ್ರಶ್ನಿಸಿತು.
“ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ,’ ಎಂದು ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಅಸಮಾಧಾನಗೊಂಡ ನ್ಯಾಯಮೂರ್ತಿಗಳು, “ಕೇವಲ ಪತ್ರ ಬರೆದರೆ ನಿಮ್ಮ ಕೆಲಸ ಮುಗಿತು ಎಂದು ಅರ್ಥವೇ? ಕೇಂದ್ರ ಸರ್ಕಾರದ ಮೇಲೆ ಜವಾಬ್ದಾರಿ ಹಾಕಿ ನುಣಚಿಕೊಳ್ಳುವುದು ಸರಿಯಲ್ಲ,’ ಎಂದು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ “ಕರ್ನಾಟಕ ಸರ್ಕಾರ ಪತ್ರ ಬರೆದು ಒಂದು ತಿಂಗಳಾದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ,’ ಎಂದು ಕೇಂದ್ರ ಸರ್ಕಾರದ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು.
ಇದಕ್ಕೂ ಮೊದಲು ವಾದ ಮಂಡಿಸಿದ ಹೆಚ್ಚುವರಿ ಅಡ್ವೋಕೇಟ್ ಜನರಲ್, “ನಗರ ಪ್ರದೇಶಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಬೈಪಾಸ್‌ಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಡಿನೋಟಿಫೈ ಮಾಡಿದೆ. ಇನ್ನು ಸ್ಥಳೀಯ ಪ್ರಾಧಿಕಾರಿಗಳು ಅಭಿವೃದ್ಧಿ ಹಾಗೂ ನಿರ್ವಹಣೆ ಮಾಡುತ್ತಿರುವ ರಸ್ತೆಗಳನ್ನು ರಾಜ್ಯ ಸರ್ಕಾರ ಡಿನೋಟಿಫೈ ಮಾಡಿದೆ. ಆದರೆ, ಅರ್ಜಿದಾರರ ಬಾರ್‌ಗಳು ಇರುವ ರಾಷ್ಟ್ರೀಯ ಹೆದ್ದಾರಿ-4 ಹಾಗೂ ರಾಷ್ಟ್ರೀಯ ಹೆದ್ದಾರಿ-7ಳನ್ನು ಕೇಂದ್ರ ಸರ್ಕಾರ ಡಿನೋಟಿಫೈ ಮಾಡಿ ಹೊರಡಿಸಿರುವ ಅಧಿಸೂಚನೆಯಲ್ಲಿ ಉಲ್ಲೇಖೀಸಲಾಗಿಲ್ಲ.
ಈ ರಸ್ತೆಗಳನ್ನು ಡಿನೋಟಿಫೈ ಮಾಡಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಹೀಗಾಗಿ ಈ ರಸ್ತೆಗಳಲ್ಲಿರುವ ಬಾರ್ ಮತ್ತು ರೆಸ್ಟೊರೆಂಟ್‌ಗಳ ಪರವಾನಗಿಯನ್ನು ನವೀಕರಿಸಲಾಗಿಲ್ಲ. ಆದ್ದರಿಂದ ಕಳೆದ ಜೂ. 15ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ರಾ.ಹೆ-4 ಹಾಗೂ ರಾ.ಹೆ-7ರ 77 ಕಿ.ಮಿ ಅಂತರದ ರಸ್ತೆಯನ್ನು ಡಿನೋಟಿಫೈ ಮಾಡುವಂತೆ ಮನವಿ ಮಾಡಲಾಗಿದೆ,’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.