ಬೆಂಗಳೂರು: ವಿಮಾ ಅವಧಿಯಲ್ಲಿ ಅಪಘಾತಕ್ಕೆ ಒಳಗಾದ ಲಾರಿಯೊಂದರ ಪರ್ಮಿಟ್ ಅವಧಿ ಮುಕ್ತಾಯಗೊಂಡ ಸಬೂಬು ಹೇಳಿ ವಿಮೆ ನೀಡಲು ನಿರಾಕರಿಸಿದ ವಿಮಾ ಕಂಪನಿಗೆ ಗ್ರಾಹಕ ವ್ಯಾಜ್ಯ ನ್ಯಾಯಾಲಯವು ದೂರುದಾರನಿಗೆ ಒಟ್ಟು 14.76 ಲಕ್ಷ ರೂ. ಪಾವತಿಸುವಂತೆ ಆದೇಶಿಸಿದೆ.
ಬೆಂಗಳೂರು ಮೂಲದ ಉದ್ಯಮಿಯೊಬ್ಬರ ಲಾರಿಯೊಂದು 2022ರ ಏ. 1ರಂದು ಬೆಂಗಳೂರು ಹೈದ್ರಾಬಾದ್ ಮಾರ್ಗದ ಮಧ್ಯೆ ಲಾರಿ ಡ್ರೈವರ್ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಯಾವುದೇ ಇಂಡಿಕೇಟರ್ ಹಾಕದೆ ನಿಲುಗಡೆ ಮಾಡಿದ್ದರು. ಈ ವೇಳೆ ಬಸ್ಸೊಂದು ಲಾರಿಗೆ ಡಿಕ್ಕಿ ಹೊಡೆದಿದ್ದು, ಲಾರಿ ಹಾಗೂ ಬಸ್ ಚಾಲಕರು ಸ್ಥಳದಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಲಾರಿ ಮಾಲೀಕ ಏ.11ರಂದು ವಿಮಾ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು.
ಈ ನಡುವೆ ವಿಮಾ ಕಂಪನಿಯು ಏ. 28ರಂದು ವಾಹನದ ಪರ್ಮಿಟ್ ಅವಧಿ ಮುಕ್ತವಾಗಿದೆ ಅರ್ಜಿ ತಿರಸ್ಕರಿಸಿದೆ. ಆದರೆ ವಾಹನ ಪರ್ಮಿಟ್ ಅ. 12ವರೆಗೆ ಊರ್ಜಿತವಾದ ಹಿನ್ನೆಲೆ ದೂರುದಾರ ಪರಿಹಾರ ಹಣ ಪಾವತಿಗೆ ಲೀಗಲ್ ನೋಟಿಸ್ ಕಳುಹಿಸಿದೆ. ಸಂಸ್ಥೆ ವಿಮಾ ಪರಿಹಾರಕ್ಕೆ ನಿರಕಾರಿಸಿ ಗ್ರಾಹಕ ಸೇವೆಯಲ್ಲಿ ವ್ಯತ್ಯಯವಾಗಿರುವುದನ್ನು ಉಲ್ಲೇಖೀಸಿ ಬೆಂಗಳೂರು ಗ್ರಾಹಕ ವ್ಯಾಜ್ಯ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ಕೋರಿದ್ದು 14 ಲಕ್ಷ !: ವಾಹನದ ಮೌಲ್ಯ 11.60 ಲಕ್ಷ, ಪರಿಹಾರವಾಗಿ 1ಲಕ್ಷ, ಆದಾಯಕ್ಕೆ ನಷ್ಟಕ್ಕೆ 1ಲಕ್ಷ ರೂ. ಪರಿಹಾರ ಹಾಗೂ ವ್ಯಾಜ್ಯ ಸಂಬಂದ ಒಟ್ಟು 14ಲಕ್ಷ ರೂ. ಪರಿಹಾರವನ್ನು ಕೋರಿ ಗ್ರಾಹಕ ವ್ಯಾಜ್ಯ ನ್ಯಾಯಾಲಯಕ್ಕೆ ದೂರು ನೀಡಿದ್ದರು.
ಇಬ್ಬರ ವಾದವೇನು?: ವಿಮಾ ಸಂಸ್ಥೆಯು ಕ್ಲೈಮ್ ಅವಧಿಯಲ್ಲಿನ ತಪಾಸಣೆ ಸಂದರ್ಭದಲ್ಲಿ ದಾಖಲೆ ಪರಿಶೀಲಿಸಿದಾಗ ವಾಹನದ ಪರ್ಮಿಟ್ 2021ರ ಅ. 11ರಂದು ಮುಕ್ತಾಯವಾಗಿತ್ತು. ಅಪಘಾತದ ಅವಧಿಯಲ್ಲಿ ಅಂದರೆ 2022ರ ಏ.1ರ ಮುಂಜಾನೆ 2.45ಕ್ಕೆ ಅಪಘಾತ ಸಂಭವಿಸಿದ್ದು, ಅದೇ ದಿನ ಸಂಜೆ 5.31ಕ್ಕೆ ವಾಹನದ ಪರ್ಮಿಟ್ ನವೀಕರಣ ಮಾಡ ಲಾಗಿದೆ. ಇದರಿಂದ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದ್ದಾರೆ. ಈ ವೇಳೆ ದೂರು ದಾರರು ತಮ್ಮ ಲಾರಿಯ ನ್ಯಾಷನಲ್ ಪರ್ಮಿಟ್ 2017ರ ಅ.13ರಿಂದ 2022ರ ಅ. 12ವರೆಗೆ ಊರ್ಜಿತವಾಗಿದೆ ಎಂದಿದ್ದಾರೆ. ಜತಗೆ 2021ರ ಅ.5ರಿಂದ 2022ರ ಅ.4ವರೆಗೆ ವಿಮಾ ಅವಧಿಯ ಎಲ್ಲ ದಾಖಲೆಗಳನ್ನು ನೀಡಿದ್ದಾರೆ.
ತೀರ್ಪು ಏನು?: ವಾದ ಆಲಿಸಿದ ನ್ಯಾಯಾಧೀಶರು ದಾಖಲೆಗಳಿದ್ದರೂ, ವಾಹನ ಪರಿಹಾರ ನೀಡುವಲ್ಲಿ ವಿಮಾ ಸಂಸ್ಥೆ ಹಿಂದೇಟು ಹಾಕಿದೆ. ಇದರಿಂದ ಗ್ರಾಹಕ ಸೇವೆಯಲ್ಲಿ ವ್ಯತ್ಯಯ ವಾಗಿದೆ. ಈ ಹಿನ್ನೆಲೆಯಲ್ಲಿ ವಿಮಾ ಸಂಸ್ಥೆಯು ಲಾರಿಯ ಮೌಲ್ಯ 11.60ಲಕ್ಷಕ್ಕೆ ಶೇ.10ರ ಬಡ್ಡಿದರದಲ್ಲಿ 12.76ಲಕ್ಷ ರೂ., ಟೋವಿಂಗ್ ಶುಲ್ಕ 40,000 ರೂ., 1 ಲಕ್ಷ ಪರಿಹಾರ, 50,000ರೂ. ಆದಾಯಕ್ಕೆ ಹೊಡೆತ, 10,000 ರೂ. ವ್ಯಾಜ್ಯ ಬಾಬ್ತು ಸೇರಿದಂತೆ ಒಟ್ಟು 14.76ಲಕ್ಷ ರೂ. ಪರಿಹಾರ ಪಾವತಿಸಲು ಆದೇಶಿಸಿದೆ.