ಬೆಂಗಳೂರು: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜೆಡಿಎಸ್ ನಾಯಕ, ಶಾಸಕ ಎಚ್.ಡಿ. ರೇವಣ್ಣ ಅವರಿಗೆ ನೀಡಲಾಗಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ಶುಕ್ರವಾರ 42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ (ACMM) ಮೇ 20ರವರೆಗೆ ವಿಸ್ತರಿಸಿ ಆದೇಶವನ್ನು ಕಾಯ್ದಿರಿಸಿದೆ.
ಮನೆಯ 47 ವರ್ಷದ ಸಹಾಯಕಿಯ ಮೇಲೆ ಮಾಡಲಾದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿ ರೇವಣ್ಣ ಮತ್ತು ಅವರ ಪುತ್ರ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 28 ರಂದು ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ.
ರೇವಣ್ಣ ಮತ್ತು ಪ್ರಜ್ವಲ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರುದಾರೆ ಹೇಳಿಕೊಂಡಿದ್ದು, ದೌರ್ಜನ್ಯ ಆರೋಪ ಮತ್ತು ಸಂಬಂಧಿತ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ ರೇವಣ್ಣ ಅವರರನ್ನು ಕಸ್ಟಡಿಗೆ ಕೋರಿತ್ತು. ರೇವಣ್ಣ ಪರ ವಕೀಲರು ನಿರೀಕ್ಷಣಾ ಜಾಮೀನು ಕೋರಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ರೇವಣ್ಣ ಮತ್ತು ಪ್ರಜ್ವಲ್‌ಗೆ ಎಸ್‌ಐಟಿ ಎರಡು ನೋಟಿಸ್‌ಗಳನ್ನು ಕಳುಹಿಸಿತ್ತು ಆದರೆ ಇಬ್ಬರೂ ಹಾಜರಾಗಿರಲಿಲ್ಲ.
ಗುರುವಾರ ರೇವಣ್ಣ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಎಸ್‌ಐಟಿ ಆಕ್ಷೇಪ ವ್ಯಕ್ತಪಡಿಸಿ ಎಸ್‌ಐಟಿ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ ಶುಕ್ರವಾರ ಮತ್ತೆ ವಿಚಾರಣೆ ನಡೆಸಲು ನಿರ್ಧರಿಸಿ ಅಲ್ಲಿಯವರೆಗೆ ರೇವಣ್ಣ ಅವರಿಗೆ ರಿಲೀಫ್ ನೀಡಿತ್ತು. ಇಂದು ಮತ್ತೆ ವಿಚಾರಣೆ ಆರಂಭಿಸಿದ ನ್ಯಾಯಾಲಯ, ಎರಡೂ ಕಡೆಯ ವಾದವನ್ನು ಆಲಿಸಿದ ಬಳಿಕ ಜಾಮೀನು ಅರ್ಜಿಯ ಆದೇಶವನ್ನು ಸೋಮವಾರಕ್ಕೆ ಕಾಯ್ದಿರಿಸಿದ್ದು, ಅಲ್ಲಿಯವರೆಗೆ ಮಧ್ಯಂತರ ಜಾಮೀನು ವಿಸ್ತರಿಸಿದೆ.
ರೇವಣ್ಣ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿತ್ತು. ಮಹಿಳೆಯ ಅಪಹರಣದ ಆರೋಪದ ಪ್ರಕರಣದಲ್ಲಿ ಮೇ 4 ರಂದು ಎಸ್‌ಐಟಿ ಅವರನ್ನು ಬಂಧಿಸಿತ್ತು.