Advertisement

ಸಾವಿರಾರು ವಜ್ರದ ಹರಳು ಕೊಡಲೊಪ್ಪದ ಕೋರ್ಟ್‌

11:31 AM Oct 04, 2018 | |

ಬೆಂಗಳೂರು: ಕಟ್ಟಡ ನೆಲಸಮಗೊಳಿಸುವಾಗ ಗೋಡೆಯಲ್ಲಿ ಪತ್ತೆಯಾಗಿದ್ದ ಸಾವಿರಾರು ವಜ್ರದ ಹರಳುಗಳನ್ನು ತಮಗೆ ನೀಡುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಹೈಕೋರ್ಟ್‌ ವಜಾಗೊಳಿಸಿತು.

Advertisement

ಸುಮಾರು ಮೂರು ದಶಕಗಳ ಹಿಂದಿನ ಪ್ರಕರಣ ಇದಾಗಿದ್ದು, 1988ರಲ್ಲಿ ಕೆ.ಎಚ್‌.ರಸ್ತೆಯ ಹಳೆ ಕಟ್ಟಡವೊಂದನ್ನು ನೆಲಸಮಗೊಳಿಸುತ್ತಿದ್ದಾಗ ಗೋಡೆಯೊಂದರಲ್ಲಿ 1,385 ವಜ್ರದ ಹರಳುಗಳು ಸಿಕ್ಕಿದ್ದವು. ಅವುಗಳನ್ನು ತಮ್ಮ ವಶಕ್ಕೆ ನೀಡುವಂತೆ ಚಕ್ರವರ್ತಿ ಎಂಬುವವರ ಪತ್ನಿ ಉಮಾ ಅರ್ಜಿ ಸಲ್ಲಿಸಿದ್ದರು. ಬುಧವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್‌. ದೇವದಾಸ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಾದ ಮಂಡಿಸಿದ ಸರ್ಕಾರಿ ವಕೀಲರು “ನಿಯಮಗಳ ಪ್ರಕಾರ ನಿಧಿ ದೊರೆತ ಸ್ಥಳದ ಮಾಲೀಕರು ಅಥವಾ ನಿಧಿ ಪತ್ತೆ ಹಚ್ಚಿದವರಿಗೆ ಮಾತ್ರ ಸಿಕ್ಕ ನಿಧಿಯಲ್ಲಿ ಪಾಲು ಕೊಡಬೇಕು. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು ಜಾಗದ ಮಾಲೀಕರೂ ಅಲ್ಲ, ನಿಧಿ ಪತ್ತೆ ಹಚ್ಚಿದವರೂ ಅಲ್ಲ. ಹಾಗಾಗಿ, ಅರ್ಜಿದಾರರಿಗೆ ವಜ್ರದ ಹರಳುಗಳನ್ನು ನೀಡಲು ಅವಕಾಶವಿಲ್ಲ ಎಂದು ವಾದಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿತು.

ಏನಿದು ಪ್ರಕರಣ?: ನಗರದ ಕೆ.ಎಚ್‌.ರಸ್ತೆಯಲ್ಲಿ 1988ರಲ್ಲಿ ಹಳೆಯ ಕಟ್ಟಡವೊಂದನ್ನು ನೆಲಸಮಗೊಳಿಸಲಾಗಿತ್ತು. ಆಗ ಕಟ್ಟಡದ ಗೋಡೆಯನ್ನು ಕಡೆವಿದಾಗ ಕೂಲಿಕಾರ ರಾಜು ಎಂಬುವರಿಗೆ 1,385 ವಜ್ರದ ಹರಳುಗಳು ಸಿಕ್ಕಿದ್ದವು. ಆತ ಅದನ್ನು ಚಕ್ರವರ್ತಿ ಎಂಬುವರಿಗೆ ಮಾರಿದ್ದ. ಈ ಸಂಬಂಧ ಕಟ್ಟಡ ನೆಲಸಮ ಗುತ್ತಿಗೆದಾರ ಮೊಹಮ್ಮದ್‌ ವಾಸಿಂ ಪೊಲೀಸರಿಗೆ ದೂರು ಕೊಟ್ಟಿದ್ದ. ಇದನ್ನು ಆಧರಿಸಿ ಪೊಲೀಸರು ಚಕ್ರವರ್ತಿಯಿಂದ ವಜ್ರದ ಹರಳುಗಳನ್ನು ವಶಪಡಿಸಿಕೊಂಡಿದ್ದರು. ಈ ಮಧ್ಯೆ ಕೆಲ ವರ್ಷಗಳ ಬಳಿಕ ಚಕ್ರವರ್ತಿ ಸಾವನ್ನಪ್ಪಿದ್ದರು.

ಆನಂತರ ಚಕ್ರವರ್ತಿಯ ಪತ್ನಿ ಉಮಾ “ಪೊಲೀಸರು ವಶಕ್ಕೆ ಪಡೆದಿರುವ ವಜ್ರದ ಹರಳುಗಳನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು 2009ರ ಡಿ.5ರಂದು ಜಿಲ್ಲಾಧಿಕಾರಿಗಳು ತಿರಸ್ಕರಿಸಿದ್ದರು. ಬಳಿಕ ಹೈಕೋರ್ಟ್‌ ಮೆಟ್ಟಿಲೇರಿದ್ದ ಉಮಾ “ಕರ್ನಾಟಕ ಟ್ರೆಸರ್‌ ಟ್ರೋ ಕಾಯ್ದೆ-1962′ ಪ್ರಕಾರ ಹರಳುಗಳನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿದ್ದರು. ಆದರೆ, ಹೈಕೋರ್ಟ್‌ ಅರ್ಜಿಯನ್ನು ವಜಾಗೊಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next