ಭಾಲ್ಕಿ: ಪಟ್ಟಣದ ಅಂಬೇಡ್ಕರ್ ವೃತ್ತ ಸಮೀಪದ ಬೀದರ ರಸ್ತೆಯಲ್ಲಿ ಅತ್ಯಾಧುನಿಕವಾಗಿ ನಿರ್ಮಾಣಗೊಂಡಿರುವ ಕೋರ್ಟ್ ಕಟ್ಟಡವನ್ನು ಶಾಸಕ ಈಶ್ವರ ಖಂಡ್ರೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ ಅವರು, ನೆಲಮಹಡಿ, ಮೊದಲ ಮತ್ತು ಎರಡನೇ ಅಂತಸ್ತಿನ ಕಲಾಪ ಸೇರಿ ಎಲ್ಲ ಕೋಣೆಗಳಿಗೂ ಭೇಟಿ ನೀಡಿ ಅಲ್ಲಿ ಇರುವ ಸೌಲಭ್ಯ ಮತ್ತು ಕಾಮಗಾರಿ ಗುಣಮಟ್ಟ ಪರಿಶೀಲಿಸಿದರು.
ಬಳಿಕ ವಕೀಲರ ಸಂಘದ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿ 13.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕೋರ್ಟ್ ಕಟ್ಟಡ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾದರಿ ಆಗಿದೆ. ಹೈಟೆಕ್ ಮಾದರಿಯಲ್ಲಿ ಕಟ್ಟಡ ತಲೆಯೆತ್ತಿದ್ದು, ಅತ್ಯಾಧುನಿಕ ಎಲ್ಲ ಅಗತ್ಯ ಸೌಲಭ್ಯಗಳು ಇಲ್ಲಿವೆ. ಲೋಕೋಪಯೋಗಿ ಅಧಿಕಾರಿಗಳು ಮತ್ತು ಗುತ್ತಿಗೇದಾರರ ಪ್ರಯತ್ನದಿಂದ ಕಟ್ಟಡದ ಕಾಮಗಾರಿ ಗುಣಮಟ್ಟದ ಜತೆಗೆ ಕಾಲಮಿತಿಯಲ್ಲಿ ಪೂರ್ಣಗೊಂಡಿರುವುದು ಸಂತಸ ತರಿಸಿದೆ ಎಂದರು.
ಸುಮಾರು 60 ವರ್ಷಗಳ ಪುರಾತನ ಕೋರ್ಟ್ ಕಟ್ಟಡ ಇದ್ದು, ಹಲವು ಸೌಲಭ್ಯಗಳ ಕೊರತೆ ನಡುವೆ ಕೋರ್ಟ್ ಕಲಾಪ ನಡೆಯುತ್ತಿದ್ದವು. ಹೀಗಾಗಿ ಹೊಸದಾಗಿ ಕೋರ್ಟ್ ಕಟ್ಟಡ ಆಗಬೇಕು ಎನ್ನುವುದು ಬಹುದಿನಗಳ ಬೇಡಿಕೆ ಆಗಿತ್ತು. ಸಚಿವನಿದ್ದ ಸಂದರ್ಭದಲ್ಲಿ ಹಿಂದಿನ ಸಿಎಂ ಸಿದ್ದರಾಮಯ್ಯನವರಿಗೆ ಕೋರ್ಟ್ ಕಟ್ಟಡದ ಅಂದಾಜು ಪಟ್ಟಿ ಜತೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರ ಜತೆಗೆ ಬಸವಕಲ್ಯಾಣ, ಔರಾದ ಕೋರ್ಟ್ ಕಟ್ಟಡಗಳ ಪ್ರಸ್ತಾವನೆ ಸಹ ಬಂದಿದ್ದವು. ಆದರೆ, ನಾನು ಸೇರಿ ವಕೀಲರ ಸಂಘದ ಸಹಕಾರದೊಂದಿಗೆ ಸರಕಾರದ ಮೇಲೆ ನಿರಂತರ ಒತ್ತಡ ತಂದಿದರ ಪರಿಣಾಮ ಪಟ್ಟಣದಲ್ಲಿ ಮಾತ್ರ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನಮೋದನೆ ಸಿಕ್ಕಿತು. ಅದರಂತೆ ಪಟ್ಟಣದಲ್ಲಿ 2019ರಲ್ಲಿ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. 2021, ಡಿ.25ಕ್ಕೆ ಕಟ್ಟಡ ಕಾಮಗಾರಿ ಪೂರ್ಣ ಆಗಬೇಕು ಎನ್ನುವ ಕರಾರು ಇತ್ತು. ಅದರಂತೆ ಕೋರ್ಟ್ ಕಟ್ಟಡದ ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಂಡಿದೆ ಎಂದು ವಿವರಿಸಿದರು.