ರಾಂಚಿ : ಭೂ ಹಗರಣದಲ್ಲಿ ಬಂಧಿತರಾಗಿರುವ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ, ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್‌ಗೆ ಫೆಬ್ರವರಿ 5ರಂದು ನಡೆಯಲಿರುವ ವಿಶ್ವಾಸಮತದಲ್ಲಿ ಭಾಗವಹಿಸಲು ರಾಂಚಿಯ ವಿಶೇಷ ನ್ಯಾಯಾಲಯ ಶನಿವಾರ ಅನುಮತಿ ನೀಡಿದೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬುಧವಾರ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿರುವ ಸೊರೆನ್ ಅವರು ಚಂಪೈ ಸೊರೆನ್ ಅವರ ಸರ್ಕಾರ ಕೋರಿರುವ ವಿಶ್ವಾಸ ಮತದಲ್ಲಿ ಭಾಗವಹಿಸಲು ಅನುಮತಿ ಕೋರಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ವಿಶ್ವಾಸ ಮತದಲ್ಲಿ ಭಾಗವಹಿಸಲು ಅನುಮತಿಯನ್ನು ನೀಡಿದೆ.
ಶುಕ್ರವಾರ ಹೇಮಂತ್ ಸೋರೆನ್ ಅವರನ್ನು ಐದು ದಿನಗಳ ಕಾಲ ಇಡಿ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿದೆ.
ಜನವರಿ 31 ರಂದು ಜಾರಿ ನಿರ್ದೇಶನಾಲಯ ತನ್ನನ್ನು ಬಂಧಿಸುವ ಕೆಲವೇ ಗಂಟೆಗಳ ಮೊದಲು ಚಂಪೈ ಸೊರೆನ್ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಹೇಮಂತ್ ಸೊರೆನ್ ಹೆಸರಿಸಿದ್ದರು. ಅದರಂತೆ ಚಂಪೈ ಸೊರೆನ್ ಅವರು ಫೆಬ್ರವರಿ 2 ರಂದು ಜಾರ್ಖಂಡ್ ನ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರ ಪ್ರಮಾಣ ವಚನದ ನಂತರ, ಅಸೆಂಬ್ಲಿಯಲ್ಲಿ ಬಹುಮತ ಸಾಬೀತುಪಡಿಸಲು ಸೊರೆನ್ ಅವರಿಗೆ 10 ದಿನಗಳ ಕಾಲಾವಕಾಶ ನೀಡಲಾಯಿತು. ಅದರಂತೆ ಸೋಮವಾರ ವಿಶ್ವಾಸ ಮತಯಾಚನೆಗೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: Punjab Governor: ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿದ ಬನ್ವಾರಿಲಾಲ್ ಪುರೋಹಿತ್