Advertisement

ಬೈಕ್‌ ಏರಿ ದಂಪತಿಯ ಪರಿಸರ ಜಾಗೃತಿ ಸವಾರಿ

02:55 PM Oct 11, 2022 | Team Udayavani |

ಕಾರ್ಕಳ: ಇತ್ತೀಚಿನ ದಿನಗಳಲ್ಲಿ ವಾತಾವರಣ ವಿಚಿತ್ರವಾಗಿ ಬದಲಾಗುತ್ತಿದೆ. ಒಮ್ಮೆ ಬರ, ಮತ್ತೂಮ್ಮೆ ಅತೀವೃಷ್ಟಿ. ಹೀಗಾದರೆ ಮುಂದಿನ ಕತೆ ಹೇಗೆ ಎಂಬ ಆತಂಕ ಬಹುತೇಕರಲ್ಲಿ ಕಾಡುತ್ತಿರುವುದು ಸತ್ಯ. ಇದಕ್ಕೆ ಪ್ರಮುಖ ಕಾರಣ ಪರಿಸರದ ಅಸಮತೋಲನ. ಈ ಬಗ್ಗೆ ಪರಿಸರ ಕಾಳಜಿಯುಳ್ಳ ದಂಪತಿ ಸ್ವಚ್ಛ ಅಂದೋಲನ, ಪರಿಸರ ಪರಿಸರ ಉಳಿವಿಗಾಗಿ ದೇಶಾದ್ಯಂತ ಬೈಕ್‌ ಸವಾರಿ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

Advertisement

ಮೂಲತಃ ಕಾರ್ಕಳದ ರವಿಕಿರಣ್‌ ರಾವ್‌ ಹಾಗೂ ಭದ್ರಾವತಿಯ ಅರ್ಚನಾ ಅರ್‌. ರಾವ್‌ ಮೈಸೂರಿನಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಚ್ಛತ ಅಭಿಯಾನ ಅವರಿಬ್ಬರ ಕನಸು. ಅದಕ್ಕೆಂದೇ ಮೈಸೂರಿನಲ್ಲಿ ಬೈಕ್‌ ಸವಾರಿ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಉದ್ಯೋಗದ ಜತೆ ವರ್ಷಕ್ಕೆ ಇಂತಿಷ್ಟು ರಜೆ ಪಡೆದು ಪರಿಸರ ಜಾಗೃತಿ ಮೂಡಿಸುತ್ತಿರುವ ಅವರು 85 ದಿನಗಳ ಪ್ರವಾಸದಲ್ಲಿ 16,074 ಕಿ.ಮೀ. ದೂರ ಕ್ರಮಿಸಿದ್ದಾರೆ.

ಒಂದು ಸುತ್ತಿನ ಪ್ರವಾಸ ಮುಗಿಸಿ ಅವರು ಕಾರ್ಕಳದ ಕಲ್ಲೊಟ್ಟೆಯ ತಮ್ಮ ಮನೆಗೆ ಅಗಮಿಸಿದ್ದರು. ಗೋವಾ ಮುಂಬಯಿ ಗುಜರಾತ್‌ ರಾಜಸ್ಥಾನ ಭಾಗದಲ್ಲಿ ಸಂಚಾರ ನಡೆಸಿ ಅಭಿಯಾನದ ಸ್ಟಿಕ್ಕರ್‌ಗಳನ್ನು ವಿತರಿಸಿದ್ದಾರೆ. ರವಿಕಿರಣ್‌ ಅವರು ಕಾರ್ಕಳದ ಸ್ವಚ್ಛ ಕಾರ್ಕಳ ಬ್ರಿಗೇಡ್‌ನ‌ ಸದಸ್ಯ ಕೂಡ ಆಗಿದ್ದಾರೆ.

ಪರಿಸರವನ್ನು ನಾಳೆಗಾಗಿ ಉಳಿಸಬೇಕು, ಪ್ರಜ್ಞಾವಂತ ನಾಗರಿಕರಾದ ನಾವೆಲ್ಲ ಅದನ್ನು ಮನಗಾಣಬೇಕು. ಪರಿಸರವಿದ್ದರೆ ನಮ್ಮ ಬದುಕು. ಪ್ರಾಣಿ ಜೀವ ಸಂಕುಲ ನದಿ ಮೂಲಗಳನ್ನು ಸಂರಕ್ಷಿಸಬೇಕು, ಪ್ಲಾಸ್ಟಿಕ್‌ನಿಂದ ಮಣ್ಣನ್ನು ಕಾಪಾಡಬೇಕು, ಪರಿಸರ ಜಾಗೃತಿಯೇ ನಮ್ಮ ಗುರಿಯಾಗಿದೆ.

ದೇಶದ ಹದಿನೈದು ಗಡಿಗಳಲ್ಲಿ ಭಾರತೀಯ ಯೋಧರು ಅಭಿಯಾನಕ್ಕೆ ಪ್ರೋತ್ಸಾಹ ನೀಡಿದ್ದಾರೆ. ದೇಶದ ವಿವಿಧ ಹಳ್ಳಿಗಳಲ್ಲಿ ಸಂಚರಿಸಿ ಒಟ್ಟು 18 ರಾಜ್ಯಗಳಲ್ಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಭಿಯಾನವನ್ನು ಯಶಸ್ವಿಗೊಳಿಸಿದ್ದಾರೆ. ಉತ್ತರ ದಕ್ಷಿಣ ಪೂರ್ಣ ಪಶ್ಚಿಮ ರಾಜ್ಯಗಳಲ್ಲಿ 85 ದಿನಗಳ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಾಶ್ಮೀರ ಲೇಕ್‌, ಲಡಾಕ್‌, ಡಾರ್ಜಿಲಿಂಗ್‌, ಪಟ್ನಾ, ಬಿಹಾರ್‌, ಪಶ್ಚಿಮ ಬಂಗಾಲ, ಒರಿಸ್ಸಾ ಅಸ್ಸಾಂ, ಆಂಧ್ರ ಪ್ರದೇಶ, ತೆಲಂಗಾಣ ತಮಿಳುನಾಡು ಕನ್ಯಾಕುಮಾರಿ ತಲುಪಿದ್ದಾರೆ. ಸೆ. 11ರಂದು ಕೇರಳದ ಮೂಲಕ ಮೈಸೂರಿಗೆ ಮರಳಿ ಸೆ 16ರಂದು ಕಾರ್ಕಳ ತಲುಪಿದ್ದಾರೆ.

Advertisement

ಈಶಾನ್ಯದಲ್ಲಿ ಪ್ರವಾಹದಿಂದ ಹಿನ್ನಡೆ

ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿತ್ತು. ಇದರಿಂದಾಗಿ ಆ ಭಾಗದಲ್ಲಿ ಪ್ರವಾಸಕ್ಕೆ ತೊಡಕಾಯಿತು. ಹವಾಮಾನವೂ ಅನುಕೂಲಕರವಾಗಿರಲಿಲ್ಲ. ಹಾಗಾಗಿ ಈಶಾನ್ಯ ರಾಜ್ಯಗಳಲ್ಲಿ ಗುರಿ ತಲುಪಲು ಸಾಧ್ಯವಾಗಿಲ್ಲ. ನಮ್ಮ ಮುಂದಿನ ಅಭಿಯಾನ ಸಾಧ್ಯವಾದರೆ ಈಶಾನ್ಯ ರಾಜ್ಯಗಳಿಗೆ ಮೊದಲ ಪ್ರಾತಿನಿಧ್ಯ ನೀಡುತ್ತೇವೆ ಎನ್ನುವುದು ಅವರ ಮಾತು.

ದೇಶದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪರಿಸರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಿದ್ದೆವು. ಮನೆಯಲ್ಲಿ, ಕುಟುಂಬದಲ್ಲಿ ದೊರೆತ ಸಹಕಾರವೇ ಮತ್ತಷ್ಟೂ ಪ್ರೇರಣೆ ನೀಡಿತು.   -ರವಿಕಿರಣ್‌, ಅರ್ಚನಾ ರಾವ್‌

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next