ಬೆಂಗಳೂರು: ಚಲಿಸುತ್ತಿದ್ದ “ನಮ್ಮ ಮೆಟ್ರೋ’ ರೈಲಿನಲ್ಲಿ ಯುವಕ-ಯುವತಿಯ “ಅಪ್ಪುಗೆ ಪಯಣ’ ವ್ಯಾಪಕ ಚರ್ಚೆಗೆ ಎಡೆಮಾಡಿಕೊಟ್ಟಿದ್ದು, ಈ ವರ್ತನೆ ಯನ್ನು ಕೆಲವರು ಟೀಕಿಸಿದ್ದರೆ, ಇನ್ನು ಕೆಲವರು ಸಮ ರ್ಥಿಸಿ ಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪರಸ್ಪರ ಗಟ್ಟಿಯಾಗಿ ತಬ್ಬಿಕೊಂಡು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ದೃಶ್ಯವನ್ನು ಸಹ ಪ್ರಯಾಣಿಕರೊಬ್ಬರು ಸೆರೆಹಿಡಿದು, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣ “ಟ್ವಿಟರ್’ನಲ್ಲಿ ಪೋಸ್ಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ರೈಲಿನಲ್ಲಿ ಇತರರಿಗೆ ಮುಜುಗರ ಆಗದಂತೆ ಎಲ್ಲ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಬೆಂಬಲ ವ್ಯಕ್ತ ಪಡಿಸಿದ ಕೆಲವರು, ದೆಹಲಿ ಮೆಟ್ರೋ ರೈಲಿನಲ್ಲಿ ಇಂತಹ ವರ್ತನೆ ನಡೆಯುತ್ತದೆ. ಇದೀಗ ಬೆಂಗಳೂರಿಗೂ ವಿಸ್ತರಣೆ ಆಗಿದೆ ಎಂದು ಆಕ್ಷೇಪಿಸಿದ್ದಾರೆ. ಮತ್ತೂಬ್ಬ ಪ್ರಯಾಣಿಕರು, “ನಮ್ಮ ಮೆಟ್ರೋ’ದಲ್ಲಿ ಏನಾಗುತ್ತಿದೆ? ಯುವಕನನ್ನು ಅಪ್ಪಿಕೊಂಡಿದ್ದ ಯುವತಿ ಅಕ್ಷರಶಃ ಚುಂಬಿಸುತ್ತಿದ್ದಳು. ಇದು ಸಾರ್ವಜನಿಕ ಸಾರಿಗೆಯಲ್ಲಿ ಎಷ್ಟು ಸರಿ ಎಂದು ಪಶ್ನಿಸಿದ್ದಾರೆ.
ಇದರಲ್ಲಿ ಅಸಭ್ಯ ಏನಿದೆ?: ಕೆಲವರು ಯುವಕ ಯುವತಿಯ ಅಪ್ಪುಗೆ ಪ್ರಯಾಣವನ್ನು ಸಮರ್ಥಿಸಿಕೊಂಡಿದ್ದು, “ಇದರಲ್ಲಿ ಅಸಭ್ಯ ವರ್ತನೆ ಏನಿದೆ? ಆಲಂಗಿಸಿಕೊಂಡು ನಿಂತಿದ್ದಾರಷ್ಟೇ, ಇನ್ನೇನೂ ಮಾಡಿಲ್ಲ’ ಎಂದು ಹೇಳಿದ್ದಾರೆ. ಈ ವಿಡಿಯೋಗೆ ವ್ಯಾಪಕ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ನಮ್ಮ ಮೆಟ್ರೋದಲ್ಲಿ ಮಕ್ಕಳು, ಹಿರಿಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಎಲ್ಲ ವಯೋಮಾನದವರು ಪ್ರಯಾಣಿಸುತ್ತಾರೆ. ಈ ರೀತಿಯ ನಡವಳಿಕೆ ಸರಿಯಲ್ಲ ಎಂದಿದ್ದಾರೆ. ಕೆಲ ಪ್ರಯಾಣಿಕರು ಬಿಎಂಆರ್‌ಸಿಎಲ್, ನಮ್ಮ ಮೆಟ್ರೋ ಹಾಗೂ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕ್ಲಿಪಿಂಗ್ ಬಗ್ಗೆ ಪರ-ವಿರೋಧದ ಚರ್ಚೆ ವೈರಲ್ ಆದ ಬಳಿಕ ಬೆಂಗಳೂರು ನಗರ ಪೊಲೀಸರು, “ಈ ಬಗ್ಗೆ ಕ್ರಮವಹಿಸಲಾಗುವುದು, ಘಟನೆ ಸಂಬಂಧ ಮಾಹಿತಿ ನೀಡಿ ಎಂದು ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.