ಉಡುಪಿ: ಉಡುಪಿ ಸರಕಾರಿ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಎರಡು ಗಂಡು ಅವಳಿ ಶಿಶುಗಳನ್ನು ಶುಕ್ರವಾರ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ರಕ್ಷಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವ್ಯಾಪ್ತಿಗೆ ಬರುವ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಿದ್ದಾರೆ.
ಪ್ರಕರಣದ ವಿವರ
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹೊಸೂರು ಗ್ರಾಮದ ಭಾರತಿ ಗಾಣಿಗ (40) ಅವರು ಗಂಡ ಅಪಘಾತದಲ್ಲಿ ಮೃತ ಪಟ್ಟ ಬಳಿಕ ಮಂಗಳೂರಿಗೆ ವಲಸೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು. ಆಕೆಯ ಪುತ್ರಿಗೆ ಮದುವೆಯಾಗಿತ್ತು. ಭಾರತಿಗೆ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆ ಶಿರೋಳ ಗ್ರಾಮದ ಅರುಣ ಆಚಾರಿ (31) ಜತೆ ಪ್ರೇಮವಾಗಿ, ಅವರು ರಿಜಿಸ್ಟರ್ಡ್ ಮದುವೆಯಾಗಿದ್ದರು. ಆಕೆ ಮೇ 23ರಂದು ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಎರಡು ಗಂಡು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಶಸ್ತ್ರಚಿಕಿತ್ಸೆ ನಡೆದ ಕಾರಣ ದಂಪತಿ ಎರಡು ತಿಂಗಳು ಆಸ್ಪತ್ರೆಯಲ್ಲಿದ್ದರು. ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಬಳಿಕ ಅರುಣ ಪತ್ನಿ, ಮಕ್ಕಳನ್ನು ಊರಿಗೆ ಕರೆದು ಕೊಂಡು ಹೋದ.
ಆದರೆ ಆತನ ಪೋಷಕರು ಮನೆಗೆ ಪ್ರವೇಶ ನೀಡಲಿಲ್ಲ. ಅಸಹಾಯಕನಾದ ಆತ ಪತ್ನಿ ಮತ್ತು ಹಸುಗೂಸುಗಳೊಂದಿಗೆ ಉಡುಪಿಗೆ ಬಂದು, ಜನಜಂಗುಳಿ ಇರುವ ಸರಕಾರಿ ಬಸ್ಸು ನಿಲ್ದಾಣದಲ್ಲಿ ನೆಲೆಸಿದ್ದ. ಕುಡಿತದ ಚಟ ಹೊಂದಿರುವ ಆತ ಶುಕ್ರವಾರ ಸಂಜೆ ಬಂದು ಹೆಂಡತಿಯನ್ನು ಪೀಡಿಸುತ್ತಿದ್ದ. ಪರಿಣಾಮ ಆಕೆ ಸಿಟ್ಟಿನಿಂದ ಎರಡು ತಿಂಗಳಿನ ಶಿಶುಗಳನ್ನು ಬಸ್ಸು ನಿಲ್ದಾಣದಲ್ಲಿ ಬಿಟ್ಟು ಹೋದಳು.
ಕೊನೆಗೆ ಸಾರ್ವಜನಿಕರು ಆಕೆಯನ್ನು ನಿಲ್ದಾಣಕ್ಕೆ ಕರೆತಂದರು. ಗಂಡ ಹೆಂಡತಿಯರ ಜಗಳದಲ್ಲಿ ಹಸುಗೂಸುಗಳು ಬಡವಾಗುವುದನ್ನು ಕಂಡ ಸ್ಥಳೀಯರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು.
ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಮಕ್ಕಳ ಕಲ್ಯಾಣ ಸಮಿತಿಗೆ – ಮಾಹಿತಿ ನೀಡಲಾಯಿತು. ಅದಕ್ಕೆ ಸ್ಪಂದಿಸಿದ ಸಿಬಂದಿ ವರ್ಗದ ಗ್ಲೀಶಾ ಮಾಂತರೊ, ಸಂದೇಶ ಕೆ. ಅವರು ಸ್ಥಳಕ್ಕೆ ಬಂದು ದಂಪತಿ ಸಹಿತ ಹಸುಳೆಗಳನ್ನು ವಶಕ್ಕೆ ಪಡೆದರು. ನಿಟ್ಟೂರಿನಲ್ಲಿ ಇರುವ ಮಕ್ಕಳ ಕಲ್ಯಾಣ ಸಮಿತಿ ಕಚೇರಿಯಲ್ಲಿ ದಂಪತಿಯನ್ನು ಅಧ್ಯಕ್ಷ ರೋನಾಲ್ಡ… ಬಿ. ವಿಚಾರಣೆ ನಡೆಸಿ, ಅತಂತ್ರರಾಗಿದ್ದ ಅವರಿಗೆ ಸಾಂತ್ವನ ಹೇಳಿ¨ªಾರೆ. ಕಾನೂನು ಪ್ರಕ್ರಿಯೆ ನಡೆಸಿದ ಬಳಿಕ ಲಕ್ಷ್ಮೀ ನಗರದಲ್ಲಿ ಇರುವ ಶ್ರೀಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರದಲ್ಲಿ ತಾಯಿ ಮಕ್ಕಳಿಗೆ ಆಶ್ರಯ ಕಲ್ಪಿಸಲಾಯಿತು. ಅರುಣನು ಕಲ್ಯಾಣ ಸಮಿತಿ ಅಧಿಕಾರಿ ಗಳ ಅನುಮತಿ ಪತ್ರ ಪಡೆದು ಹೆಂಡತಿ ಮಕ್ಕಳನ್ನು ಭೇಟಿಯಾಗಲು ಅವಕಾಶ ನೀಡಲಾಗಿದೆ.