ಜಾರ್ಖಂಡ್: ದುಬಾರಿ ಕಾರೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟು, ಮಗು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಾರ್ಖಂಡ್‌ನ ಧನ್‌ಬಾದ್ ನಲ್ಲಿ ನಡೆದಿದೆ.
ರಾಣಾ ದಾಸ್, ಅವರ ಪತ್ನಿ ಮಾನ್ಸಿ ದಾಸ್ ಮೃತ ದಂಪತಿ. 12 ವರ್ಷದ ರಿಷಬ್ ದಾಸ್ ಗಂಭೀರ ಗಾಯಗೊಂಡ ಮಗ.
ಪತಿ, ಪತ್ನಿ ಮತ್ತು ಅವರ ಮಗ ತಮ್ಮ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ರಾತ್ರಿ 11 ಗಂಟೆ ಸುಮಾರಿಗೆ ಮಗನ ಆರೋಗ್ಯಕ್ಕೆ ಸಂಬಂಧಿಸಿ ಆಸ್ಪತ್ರೆಗೆ ಹೋಗಿ ಮನೆಗೆ ವಾಪಾಸು ಆಗುತ್ತಿದ್ದ ವೇಳೆ ಎರಡು ಕಾರುಗಳು ವೇಗವಾಗಿ ರಸ್ತೆಯಲ್ಲಿ ಹೋಗುತ್ತಿದ್ದವು. ಇದರಲ್ಲಿ ಒಂದು ಕಾರು ದಂಪತಿ ಹೋಗುತ್ತಿದ್ದ ಬೈಕ್ ಗೆ ಮುಂಭಾಗದಿಂದ ಢಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ 100 ಮೀಟರ್ ದೂರ ಹೋಗಿ ಬಿದ್ದಿದ್ದು, ಪತಿ ಸ್ಥಳದಲ್ಲೇ ಮೃತಪಟ್ಟಿದ್ದು, ಪತ್ನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಂಭೀರ ಸ್ವರೂಪದಿಂದ ಗಾಯಗೊಂಡ ಮಗ ಆಸ್ಪತ್ರೆಯಲ್ಲಿ ಸಾವು – ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಜಾರಿಯಾ ಶಾಸಕಿ ಪೂರ್ಣಿಮಾ ನೀರಜ್ ಸಿಂಗ್ ಅವರ ಸೋದರ ಸಂಬಂಧಿ ಹರ್ಷ್ ಸಿಂಗ್ ಹೆಸರಿನಲ್ಲಿ ಕಾರನ್ನು ನೋಂದಾಯಿಸಲಾಗಿದೆ ಎಂದು ರಾಣಾ ದಾಸ್ ಸಹೋದರ ಹೇಳಿದ್ದಾರೆ.
ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.