ಕೆ.ಆರ್.ಪೇಟೆ: ಸಂತೆಬಾಚಹಳ್ಳಿ ಹೋಬಳಿಯ ಸಿಂಗಾಪುರ ಗ್ರಾಮದಲ್ಲಿ ರೈತ ದಂಪತಿಗಳು ತೆರೆದ ಬಾವಿಗೆ ಆಯಾ ತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಸಿಂಗಾಪುರ ಗ್ರಾಮದ ರೈತ ತೋಪಯ್ಯರವರ ಮಗ ಶಂಕರ್ ಮೂರ್ತಿ (38), ಸೊಸೆ ವಸಂತ ಕುಮಾರಿ (31) ಮೃತ ದಂಪತಿ.
ಗುರುವಾರ ರಾತ್ರಿ ತಮ್ಮ ಜಮೀನಿನಲ್ಲಿ ಕೊಳವೆ ಬಾವಿಯಿಂದ ತೆಂಗಿನ ಗಿಡಗಳಿಗೆ ಮತ್ತು ಜೋಳಕ್ಕೆ ನೀರು ಹಾಯಿಸಲು ತೆರಳುವ ಸಂದರ್ಭದಲ್ಲಿ ಜಮೀನಿನ ಬಳಿ ಹೋಗುವಾಗ ಆಕಸ್ಮಿಕವಾಗಿ ವಸಂತಕುಮಾರಿ ತೆರದ ಬಾವಿಗೆ ಕಾಲು ಜಾರಿಬಿದ್ದಿದ್ದಾರೆ. ಪತಿ ಶಂಕರಮೂರ್ತಿಯು ಸಹ ಜಮೀನಿಗೆ ಬರುತ್ತಿದ್ದರಿಂದ ಬಾವಿಗೆ ಬಿದ್ದ ಶಬ್ದ ಕೇಳುತ್ತಿದ್ದಂತೆ ಪತ್ನಿಯನ್ನು ಕಾಪಾಡಲು ಬಾವಿಗೆ ಇಳಿದಿದ್ದಾರೆ. ಇಬ್ಬರಿಗೂ ಈಜು ಬರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಅಕ್ಕ ಪಕ್ಕದ ಜಮೀನಿನಲ್ಲಿ ರಾತ್ರಿ ವೇಳೆ ನೀರು ಹಾಯಿಸುತ್ತಿದ್ದ ರೈತರು ಬಾವಿಗೆ ಬಿದ್ದ ಶಬ್ದ ಕೇಳುತ್ತಿದ್ದಂತೆ ಬಂದು ನೋಡಿದ್ದು, ಗ್ರಾಮಸ್ಥರಿಗೆ ವಿಷಯ ತಿಳಿಸಿ ಇಬ್ಬರನ್ನು ಮೇಲೆತ್ತುವ ಪ್ರಯತ್ನ ಮಾಡಿದ್ದಾರೆ. ಆದರೆ ರಾತ್ರಿ ವೇಳೆಯಾದ್ದರಿಂದ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿಸಿದ್ದು, ಅವರ ಸಹಾಯದಿಂದ ಎರಡು ಶವಗಳನ್ನು ಮೇಲೆತ್ತಿ, ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿ, ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಹಸ್ತಾಂತರಿಸಿದರು.
ಶಂಕರಮೂರ್ತಿ- ವಸಂತಕುಮಾರಿ ದಂಪತಿಗೆ 12 ವರ್ಷದ ಗಂಡು ಮಗು ಮತ್ತು 10 ವರ್ಷದ ಹೆಣ್ಣು ಮಗುವಿದ್ದು, ಇಬ್ಬರು ಮಕ್ಕಳು ಅನಾಥವಾಗಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.