ಶಿವಮೊಗ್ಗ: ಕೋವಿಡ್-19 ಕಷ್ಟ ಮನುಷ್ಯ ಮಾತ್ರವಲ್ಲದೆ ಸಾಕು ಪ್ರಾಣಿಗಳ ಬದುಕಿಗೂ ಸಂಕಟ ತಂದಿದೆ. ಬೆಕ್ಕುಗಳನ್ನೇ ಮಕ್ಕಳಂತೆ ಸಾಕುತ್ತಿದ್ದ ದಂಪತಿ ಈಗ ಕೋವಿಡ್ ಕಾರಣದಿಂದ ಸಂಕಷ್ಟ ಪಡುತ್ತಿದ್ದು,ಈ ಘಟನೆ ಮಾನವೀಯ ಸಮಾಜಕ್ಕೆ ಕಣ್ಣೀರು ತರಿಸುವಂತಿದೆ.
ತೀರ್ಥಹಳ್ಳಿ ಪಟ್ಟಣದ ಸಮೀಪ ಭಾರತೀಪುರ ಗುರುಶ್ರೀ ಹೋಟೆಲ್ ಮೇಲ್ಭಾಗದ ಈ ಮನೆ ಬೆಕ್ಕುಗಳ ಮ್ಯೂಸಿಯಂ ಆಗಿದೆ. ಸುಮಾರು 54 ಬೆಕ್ಕುಗಳನ್ನು ವೃದ್ಧ ದಂಪತಿ ತಮ್ಮ ಮಕ್ಕಳಂತೆ ಕಳೆದ 12 ವರ್ಷಗಳಿಂದ ಸಾಕಿ ಸಲುಹಿದ್ದಾರೆ.
ಮಕ್ಕಳಿಲ್ಲದ ಕಾರಣ 12 ವರ್ಷದ ಹಿಂದೆ ಬೆಂಗಳೂರಿಂದ ತಂದ 3 ಬೆಕ್ಕುಗಳು ಇಂದು 54 ಬೆಕ್ಕುಗಳ ಹುಟ್ಟಿಗೆ ಕಾರಣವಾಗಿದೆ. ರೋಗ, ಸಮಸ್ಯೆಯಿಂದ ಈಗಾಗಲೇ ನೂರಕ್ಕೂ ಹೆಚ್ಚು ಬೆಕ್ಕುಗಳು ಸಾವನ್ನಪ್ಪಿವೆ. ಅಂತಹ ಬೆಕ್ಕುಗಳನ್ನು ಗೌರವಯುತವಾಗಿ ದಂಪತಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಹೌದು. ಮುರುಕಲು ಮನೆ, ಹರಕಲು ಬಟ್ಟೆ, ಅಲ್ಲೊಂದು ಕೋಣೆ. ಅಲ್ಲಿ 54 ಬೆಕ್ಕುಗಳು! ಪ್ರತಿ ದಿನವೂ ಮಕ್ಕಳಂತೆ ಸಾಕುವ ಸಾವಿತ್ರಮ್ಮ ಮತ್ತು ಜನಾರ್ಧನ ಹೆಬ್ಬಾರ್ ಈ ಬೆಕ್ಕುಗಳಲ್ಲಿ ತಮ್ಮ ಮಕ್ಕಳನ್ನು ಕಂಡಿದ್ದಾರೆ. ಪ್ರತಿ ದಿನವೂ ಹಾಲು, ಊಟ ಹಾಕುವ ಕಾಯಕವೇ ಇವರ ದೈನಂದಿನ ಬದುಕು. ಜನಾರ್ಧನ್ ಹೆಬ್ಬಾರ್ ಅಡುಗೆ ಸಹಾಯಕರಾಗಿ ಕೆಲಸ ಮಾಡಿ ಬದುಕಿನ ಬಂಡಿ ಸಾಗಿಸುವ ಜತೆಗೆ ಬೆಕ್ಕಿಗೂ ಆಹಾರ ನೀಡುತ್ತಿದ್ದರು.
ಕೋವಿಡ್ ಕಾರಣದಿಂದ ಕೆಲಸ ಇಲ್ಲದೇ ಕಳೆದ 4 ತಿಂಗಳಿಂದ ಅವರೂ ಮನೆಯಲ್ಲಿದ್ದಾರೆ. ಹೀಗಾಗಿ ಬಾಡಿಗೆ ಮನೆಯಲ್ಲಿರುವ ದಂಪತಿ ತುತ್ತು ಊಟಕ್ಕೂ ಪರದಾಡುತ್ತಿದ್ದಾರೆ. ಜೊತೆಗೆ ಮಾನವೀಯ ನೆಲೆಯಲ್ಲಿ ಸಾಕಿದ ಬೆಕ್ಕೂಗಳು ಉಪವಾಸ ಬೀಳುತ್ತಿವೆ. ಪ್ರತಿ ದಿನ ಸ್ನಾನ ಮಾಡಿಸಿ ಅವುಗಳ ಆರೈಕೆಯಲ್ಲಿ ಬದುಕು ಕಳೆಯುವ ಈ ದಂಪತಿ ಈಗ ಕೋವಿಡ್ ಆತಂಕದಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ದಿನ ಕಳೆಯುವಂತಾಗಿದೆ.