Advertisement

ದಂಪತಿ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ

04:49 AM Jan 26, 2019 | Team Udayavani |

ಬೆಂಗಳೂರು: 2010ರಲ್ಲಿ ಎಚ್ಎಸ್‌ಆರ್‌ ಲೇಔಟ್‌ನಲ್ಲಿ ನಡೆದಿದ್ದ ದಂಪತಿ ಕೊಲೆ ಪ್ರಕರಣದ ಇಬ್ಬರು ಆರೋಪಿ ಗಳಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್‌ ಒಬ್ಬ ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

Advertisement

ಪ್ರಕರಣದಲ್ಲಿ ತಮಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ ಅಧೀನ ನ್ಯಾಯಾಲಯ ನೀಡಿದ ಆದೇಶ ರದ್ದುಪಡಿಸುವಂತೆ ಕೋರಿ ಪ್ರೀತಮ್‌, ವಿವೇಕ್‌ ಮತ್ತು ಪ್ರದೀಪ್‌ ಛಟ್ರಿ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾ. ಕೆ.ಎನ್‌. ಫ‌ಣೀಂದ್ರ ಹಾಗೂ ನ್ಯಾ. ಬಿ.ಎ ಪಾಟೀಲ್‌ ಅವರಿದ್ದ ವಿಭಾಗೀಯಪೀಠ ಅದನ್ನು ಶುಕ್ರವಾರ ಪ್ರಕಟಿಸಿತು.

ಅದರಂತೆ ಪ್ರಕರಣದಲ್ಲಿ ಪ್ರೀತಮ್‌ ಅಲಿಯಾಸ್‌ ತಂಗಮ್‌ ಮತ್ತು ವಿವೇಕ್‌ ಅಲಿಯಾಸ್‌ ಬಿಕಾಸ್‌ ತಪ್ಪಿತಸ್ಥರು ಎಂದು ಹೇಳಿರುವ ಹೈಕೋರ್ಟ್‌ ಇಬ್ಬರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ಯನ್ನು ಕಾಯಂಗೊಳಿಸಿತು. ಇದೇ ವೇಳೆ ಸಾಕ್ಷ್ಯಾಧಾರ ಗಳ ಕೊರತೆ ಹಿನ್ನೆಲೆಯಲ್ಲಿ ಪ್ರದೀಪ್‌ ಛಟ್ರಿಯನ್ನು ಖುಲಾಸೆಗೊಳಿಸಿ ನ್ಯಾಯಪೀಠ ಆದೇಶಿಸಿತು.

ಪ್ರಕರಣವೇನು?: ಅಮೃತ್‌ರಾಯ್‌ ಮತ್ತು ಪತ್ನಿ ಜಾನಕಿ ಎಚ್ಎಸ್‌ಆರ್‌ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಪ್ರೀತಮ್‌ ಹಾಗೂ ವಿವೇಕ್‌ 2010ರ ಜ.1ರಂದು ಅಮೃತ್‌ ರಾಯ್‌ನನ್ನು ಆತನ ಮನೆಯಿಂದ ಕಾರಿನಲ್ಲಿ ಅಗರ ಕೆರೆ ಬಳಿಗೆ ಕರೆದೊಯ್ದು ಕೊಲೆ ಮಾಡಿದ್ದರು. ಮೃತದೇಹವನ್ನು ಕೆರೆಗೆ ಬಿಸಾಡಿ, ನಂತರ ಅಮೃತ್‌ ರಾಯ್‌ ಮನೆಗೆ ಹಿಂದಿರುಗಿದ್ದ ಅವರು, ಪತ್ನಿ ಜಾನಕಿಯ ಕತ್ತು ಕೊಯ್ದು ಹತ್ಯೆ ಮಾಡಿದ್ದರು. ಹಾಗೆಯೇ, ಮನೆಯಲ್ಲಿದ್ದ ಸುಮಾರು 250 ಗ್ರಾಂ ಚಿನ್ನಾಭರಣ, ಮೂರು ಬೆಳ್ಳಿ ಕೀ ಚೈನ್‌, 4 ಡೆಬಿಟ್ ಕಾರ್ಡ್‌ ಹಾ ಗೂ ಎರಡು ಕ್ರೆಡಿಟ್ ಕಾರ್ಡ್‌ ದೋಚಿ ಪರಾರಿಯಾಗಿದ್ದರು.

ಮರು ದಿನ ಅಮೃತ್‌ ರಾಯ್‌ ಮೃತದೇಹ ಕೆರೆಯಲ್ಲಿ ತೇಲುತ್ತಿದ್ದನ್ನು ಕಂಡ ವ್ಯಕ್ತಿಯೊಬ್ಬ, ಪೊಲೀಸರಿಗೆ ಮಾಹಿತಿ ನೀಡಿದ್ದ. ಅಮೃತ್‌ ರಾಯ್‌ ಜೇಬಿನಲ್ಲಿ ಆತನ ಮನೆಯ ವಿಳಾಸದ ಮಾಹಿತಿ ದೊರೆತ ಕಾರಣಕ್ಕೆ ವಿಷಯ ಮುಟ್ಟಿಸಲು ಪೊಲೀಸರು ಮನೆಗೆ ಹೋದಾಗ, ಅಲ್ಲಿ ಪತ್ನಿ ಜಾನಕಿ ಕೊಲೆಯಾದ ವಿಚಾರ ಬಯಲಾಯಿತು. ಹೀಗಾಗಿ ಮನೆ ಮಾಲೀಕರು ಎಚ್ಎಸ್‌ಆರ್‌ ಲೇಔಟ್ ಠಾಣೆಗೆ ದೂರು ನೀಡಿದ್ದರು.

Advertisement

ತನಿಖೆ ನಡೆಸಿದ್ದ ಎಚ್ಎಸ್‌ಆರ್‌ ಲೇಔಟ್ ಠಾಣಾ ಪೊಲೀಸರು ಸಂತೋಷ್‌, ಪ್ರೀತಮ್‌, ಪ್ರದೀಪ್‌ ಛತ್ರಿ ಮತ್ತು ವಿವೇಕ್‌ ಅವರನ್ನು ಬಂಧಿಸಿ, ದೋಚಿದ್ದ ವಸ್ತು ಗಳನ್ನು ಜಪ್ತಿ ಮಾಡಿದ್ದರು. ಆರೋಪಿ ಅಮೃತ್‌ಗೆ ಪರಿಚಯವಿದ್ದ, ರಾಜಶೇಖರ್‌ ನ್ಯಾಯಾಲಯಕ್ಕೆ ಸಾಕ್ಷ್ಯ ನುಡಿದಿದ್ದರು. ನಾಲ್ವರನ್ನು ದೋಷಿಗಳೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಮೂವರು ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ದರು.

ಕಲಬುರ್ಗಿ ಪ್ರಕರಣ: ಫೆ. 26ರಂದು ವಿಚಾರಣೆ

ಬೆಂಗಳೂರು: ಚಿಂತಕ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಮನವಿಯ ಕೂಲಂಕಷ ವಿಚಾರಣೆಯನ್ನು ಫೆ. 26ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್‌ನ ನ್ಯಾ. ಆರ್‌. ಎಫ್. ನಾರಿಮನ್‌ ಹಾಗೂ ನ್ಯಾ. ವಿನೀತ್‌ ಶರಣ್‌ ಅವರುಳ್ಳ ನ್ಯಾಯಪೀಠ ತಿಳಿಸಿದೆ. ಅಲ್ಲದೆ, ಕಲಬುರ್ಗಿ ಪ್ರಕರಣವು ಗಂಭೀರ ಪ್ರಕರಣವೆಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಡಿ. 11ರಂದು ನಡೆದಿದ್ದ ಇದೇ ವಿಚಾರಣೆಯಲ್ಲಿ ಕಲಬುರ್ಗಿ ಹತ್ಯೆ ಪ್ರಕರಣ ಮಾತ್ರವಲ್ಲದೆ, ಮತ್ತೂಬ್ಬ ವಿಚಾರವಾದಿ ಗೋವಿಂದ್‌ ಪಾನ್ಸರೆ, ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆ ಪ್ರಕರಣಗಳಲ್ಲೂ ಸಮಾನ ಅಂಶಗಳಿದ್ದರೆ ಅದನ್ನು ಸಿಬಿಐ ತನಿಖೆಗೆ ವಹಿಸಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಕಲಬುರ್ಗಿ ಪ್ರಕರಣವನ್ನು ಸಿಬಿಐಗೆ ವಹಿಸುವಲ್ಲಿ ತಮ್ಮ ಅಭಿಪ್ರಾಯ ತಿಳಿಸುವಂತೆ ಸಿಬಿಐ ಹಾಗೂ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ, ಸಿಬಿಐ ಹಾಗೂ ಕರ್ನಾಟಕ ಸರ್ಕಾರ ಈಗಾಗಲೇ ತಮ್ಮ ಅಹವಾಲನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next