ಬೆಂಗಳೂರು: ಆಭರಣ, ಹಣದ ಆಸೆಗೆ ವೃದ್ಧ ದಂಪತಿಯನ್ನು ಕೊಲೆ ಮಾಡಿ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಕೊಲೆಪಾತಕ ಯುವ ದಂಪತಿ, ಧರ್ಮಸ್ಥಳಕ್ಕೂ ಭೇಟಿ ಕೊಟ್ಟು ಬಂದಿದ್ದರು ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಅ.16ರಂದು ಗರುಡಾಚಾರ್ ಪಾಳ್ಯದಲ್ಲಿ ನಡೆದ ಚಂದ್ರೇಗೌಡ (66) ಅವರ ಪತ್ನಿ ಲಕ್ಷ್ಮಮ್ಮ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ವೆಂಕಟೇಶ್ ಆತನ ಪತ್ನಿ ಅರ್ಪಿತಾ ತಲೆಮರೆಸಿಕೊಂಡಿದ್ದರು.
ವೃದ್ಧ ದಂಪತಿಯನ್ನು ಕೊಂದ ಬಳಿಕ ಮಂಡ್ಯ ಕಡೆ ತೆರಳಿದರೆ ಕೆ.ಆರ್ ಪೇಟೆ ವ್ಯಾಪ್ತಿಯಲ್ಲಿ ನಡೆಸಿದ್ದ ಕೊಲೆಯಿಂದ ಅತ್ತ ಕಡೆ ಹೋಗುವುದು ಬೇಡ ಎಂದು ನಿರ್ಧರಿಸಿದ್ದರು. ಕಡೆಗೆ, ಈ ಹಿಂದೆ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದಾಗ ಪರಿಚಿತನಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಗೌತಮ್ ಮನೆಗೆ ತೆರಳುವುದು ಎಂದು ನಿರ್ಧರಿಸಿದ್ದರು.
ವಾಹಿನಿಗಳಲ್ಲಿ ಬರುವ ಕ್ರೈಂ ಸಂಬಂಧಿತ ಕಾರ್ಯಕ್ರಮಗಳನ್ನು ನೋಡುವ ಹವ್ಯಾಸ ಬೆಳೆಸಿಕೊಂಡಿರುವ ವೆಂಕಟೇಶ್, ಕೊಲೆ ನಡೆದ ಬಳಿಕ ಪೊಲೀಸರು ಯಾವೆಲ್ಲಾ ಕ್ರಮಗಳನ್ನು ಅನುಸರಿಸುತ್ತಾರೆ ಎಂಬುದನ್ನು ತಿಳಿದುಕೊಂಡಿದ್ದ. ಹೀಗಾಗಿಯೇ, ಪತ್ನಿ ಹಾಗೂ ಆತನ ಎರಡೂ ಮೊಬೈಲ್‌ಗಳನ್ನು ಅಮೃತಹಳ್ಳಿಯ ಮನೆಯಲ್ಲಿಯೇ ಬಿಟ್ಟು ಹೋಗಿದ್ದ. ಕಾರಿನ ಜಿಪಿಎಸ್ ಕಿತ್ತಿಟ್ಟು ಬಿಟ್ಟು ಹೋಗಿದ್ದ.
ಪೊಲೀಸರು ಹಿಂಬಾಲಿಸಿದರೂ ಸಿಗಬಾರದು ಎಂಬ ಉದ್ದೇಶದಿಂದ ಹಾಸನಕ್ಕೆ ಬಸ್‌ನಲ್ಲಿ ತೆರಳಿದ್ದ ಆರೋಪಿ ದಂಪತಿ ಅಲ್ಲಿಂದ ಧರ್ಮಸ್ಥಳಕ್ಕೆ ತೆರಳಿದ್ದರು. ಧರ್ಮಸ್ಥಳದಲ್ಲಿ ಕೆಲಕಾಲ ಇದ್ದು ದೇವಾಲಯಗಳಿಗೆ ಭೇಟಿ ನೀಡಿದ ಕೊಲೆಪಾತಕರು, ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಮಿತ್ತಮಂಜಲ್ ಗ್ರಾಮದ ಗೌತಮ್ ಮನೆಗೆ ಹೋಗಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಮನೆಯಲ್ಲಿ ಸಮಸ್ಯೆ ಇದೆ ಕೆಲವು ದಿವಸ ಇಲ್ಲಿಯೇ ಉಳಿದುಕೊಳ್ಳುತ್ತೇವೆ ಎಂದು ಗೌತಮ್‌ಗೆ ಸುಳ್ಳು ಹೇಳಿದ್ದ ಆರೋಪಿ ವೆಂಕಟೇಶ್ ದಂಪತಿ ಅವರಿಗೆ ಅನುಮಾನವೇ ಬರದಂತೆ ನಡೆದುಕೊಂಡಿದ್ದರು. ಎರಡು ಮೂರು ದಿನ ಕಳೆದಂತೆ ನಾವು ಇದೇ ಊರಲ್ಲಿ ಬಾಡಿಗೆ ಮನೆಯಲ್ಲಿ ಉಳಿದುಕೊಂಡು ಕೆಲಸ ಮಾಡಿಕೊಂಡು ಇರುತ್ತೇವೆ. ಊರಿನ ಕಡೆ ಹೋದರೆ ನೆಮ್ಮದಿ ಇರುವುದಿಲ್ಲ ಎಂದು ನಂಬಿಸಿದ್ದರು.
ಅಷ್ಟೇ ಅಲ್ಲದೆ, ಮನೆಗೆ ಅಗತ್ಯವಿರುವ ಕೆಲವು ವಸ್ತುಗಳನ್ನು ಖರೀದಿಸಿ ತಂದಿಟ್ಟುಕೊಂಡಿದ್ದರು. ಕೆಲವು ತಿಂಗಳುಗಳು ಕಳೆದ ಬಳಿಕ ಬೆಂಗಳೂರಿಗೆ ವಾಪಾಸ್ ಬರುವ ಯೋಚನೆ ಅವರದ್ದಾಗಿತ್ತು. ಈ ಮಧ್ಯೆಯೇ ಆರೋಪಿಗಳು ಬಲೆ ಬಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.