Advertisement

#CoupleChallenge #SingleChallenge ಚಿತ್ರಗಳ ದುರ್ಬಳಕೆ: ಮೈಮರೆಯದೆ ಇರಲಿ ಎಚ್ಚರ

04:41 PM Sep 28, 2020 | Karthik A |

ಮಣಿಪಾಲ: ಸಾಮಾಜಿಕ ಜಾಲತಾಣಗಳಲ್ಲಿನ ಅನೇಕ ಚಾಲೆಂಜ್‌ಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಅವುಗಳಲ್ಲಿ ಬುಕ್‌ಚಾಲೆಂಜ್‌, ಸೈಕಲ್‌ ಚಾಲೆಂಜ್‌, ಟ್ರಾವೆಲ್‌ ಚಾಲೆಂಜ್‌, ಫಿಟ್‌ನೆಸ್‌ ಚಾಲೆಂಜ್‌ ಮೊದಲಾದ ಚಾಲೆಂಜ್‌ಗಳು ಓಕೆ.

Advertisement

ಆದರೆ #CoupleChallenge #SingleChallenge ಇತ್ಯಾದಿಗಳು ಈ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದೆ. ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಮತ್ತು ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ತಾಣಗಳಲ್ಲಿ ದಂಪತಿಗಳು #CoupleChallenge ಹ್ಯಾಶ್‌ಟ್ಯಾಗ್‌ನೊಂದಿದೆ ಫೋಟೋಗಳನ್ನು ಅಥವ ವೀಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿಯೇ 40 ಸಾವಿರಕ್ಕೂ ಹೆಚ್ಚು ಫೋಟೋಗಳು ಮತ್ತು ಕಿರು ವೀಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಈ ಸವಾಲು ನಮ್ಮನ್ನು ಖುಷಿಪಡಿಸುತ್ತದೆ ಮತ್ತು ನೋಡಲೂ ತುಂಬಾ ಮುದ್ದಾಗಿ ತೋರುತ್ತದೆಯಾದರೂ, ದೇಶಾದ್ಯಂತ ಸೈಬರ್ ತಜ್ಞರು ಮತ್ತು ಪೊಲೀಸರು ಈ ಕುರಿತಂತೆ ಜಾಗರೂಕರಾಗಿರಿ ಎಂದು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಇಂತಹ ಚಿತ್ರಗಳ ದುರ್ಬಳಕೆ ಸಂಬಂಧಿತ ಹಲವು ದೂರುಗಳು ಬಂದಿವೆ ಎಂದು ಪೊಲೀಸ್‌ ಮೂಲಗಳು ಬಹಿರಂಗಪಡಿಸಿವೆ.

#CoupleChallenge ಅಭಿಯಾನ ಏನಿದು?
ಕಪಲ್ ಚಾಲೆಂಜ್‌ನ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾವಿರಾರು ಜನರು ದಂಪತಿಗಳ ಫೋಟೋಗಳನ್ನು ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಪ್ರವೃತ್ತಿಯ ಬಗ್ಗೆ ನೂರಾರು ಮೇಮ್‌ಗಳು ಸಹ ಬಂದಿವೆ, ಅಲ್ಲಿ ಒಂಟಿ ಜನರು ಫೋಟೋಶಾಪ್ ಮೂಲಕ ತಮ್ಮ ಫೋಟೋಗಳಿಗೆ ಇನ್ಯಾರದ್ದೋ ಫೋಟೋಗಳನ್ನು ಸೇರಿಸುವ ಮೂಲಕ ಪ್ರಸಿದ್ಧ ವ್ಯಕ್ತಿಗಳ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಇದು ಮಾತ್ರವಲ್ಲ, ಕೆಲವು ಸಿಂಗಲ್ಸ್ ತಮ್ಮ ಒಂಟಿತನವನ್ನು ತಮಾಷೆಯ ರೀತಿಯಲ್ಲಿ ತೋರಿಸಲು ಯಾರದ್ದೋ ಪತಿ ಪತ್ನಿಯರನ್ನು ತಮ್ಮ ಜತೆ ಎಡಿಟ್‌ ಮಾಡಿಕೊಳ್ಳುತ್ತಿದ್ದಾರೆ.

Advertisement

ಎಲ್ಲಿಂದ ಆರಂಭವಾಯಿತು?
ಕೆಲವು ಮೂಲಗಳ ಪ್ರಕಾರ ಈ ಅಭಿಯಾನ ಬಹಳ ಹಿಂದಿನಿಂದಲೂ ಇತ್ತು. ದೇಶದ ಕೆಲವು ಕಡೆಗಳಲ್ಲಿ  ಕೋವಿಡ್ -19 ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಬಳಸುತ್ತಿದ್ದರು. ಸಾಂಕ್ರಾಮಿಕ ಸಮಯದಲ್ಲಿ ಮುಖವಾಡ ಅತ್ಯುತ್ತಮ ದಂಪತಿಗಳು ಎಂದು  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸುದ್ದಿಯಾಗಿತ್ತು. ಕ್ವಾರಂಟೈನ್‌ನಲ್ಲಿ ದಿನ ಕಳೆಯಬೇಕಾದಾಗ ದಂಪತಿಗಳ ಬೇರೆ ಬೇರೆ ಇರಬೇಕಾಗಿತ್ತು. ಆ ಸಂದರ್ಭದಲ್ಲಿ ಮಾಸ್ಕ್‌ ಅತ್ಯತ್ತಮ ದಂಪತಿ ಎಂದು ಹೇಳಲಾಗುವ ಪೋಸ್ಟ್‌ಗಳು ಜೀವ ಪಡೆದುಕೊಂಡಿತ್ತು. ಆದರೆ ಇದರಲ್ಲಿನ ದಂಪತಿ ಎಂಬ ಪದವನ್ನು ಮಾತ್ರ ಇಟ್ಟುಕೊಂಡು ಬಹುದೊಡ್ಡ ಟ್ರೆಂಡ್‌ ಮಟ್ಟಕ್ಕೆ ಅದನ್ನು ಸಾಮಾಜಿಕ ಜಾಲತಾಣದ ಬಳಸುವವರು ಕೊಂಡೊಯ್ದಿದಿದ್ದಾರೆ.

ಪೊಲೀಸರು ಹೇಳುವುದೇನು?
ಈ ಇಂಟರ್ನೆಟ್ ಸವಾಲು ಪೊಲೀಸರ ಗಮನವನ್ನೂ ಸೆಳೆದಿದೆ. ಅವರು ದುರುಪಯೋಗ ಕುರಿತಂತೆ ಅನೇಕ ದೂರುಗಳನ್ನು ಸ್ವೀಕರಿಸುತ್ತಿದ್ದಾರೆ. ಹಲವಾರು ಛಾಯಾಚಿತ್ರಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಅಶ್ಲೀಲತೆ, ಡೀಪ್‌ಫೇಕ್ ಅಥವ ಇತರ ಸೈಬರ್ ಅಪರಾಧಗಳಿಗೆ ಬಳಸಲಾಗುತ್ತಿದೆ. ತಮ್ಮ ಸಂಗಾತಿಯೊಂದಿಗೆ ಫೋಟೋ ಪೋಸ್ಟ್ ಮಾಡುವ ಮೊದಲು ಎರಡು ಬಾರಿ ಯೋಚಿಸಬೇಕು ಎಂದು ಪುಣೆ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಬಳಕೆ
ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಇಂತಹ ಚಿತ್ರಗಳನ್ನು ಪೋಸ್ಟ್ ಮಾಡುವ ಪ್ರಕರಣಗಳು ಸಹ ಬರುತ್ತಿವೆ ಎಂದು ಕೆಲವರು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ಪುಣೆಯ ಬಳಿಕ ಯುಪಿ ಪೊಲೀಸರು ಈ ಅಭಿಯಾನದ ಬಗ್ಗೆ ಸಕ್ರಿಯರಾಗಿದ್ದಾರೆ. ಮುನ್ನೆಚ್ಚರಿಕೆ ವಹಿಸುವಂತೆ ಆಗ್ರಾ ಪೊಲೀಸರು ದಂಪತಿಗಳಿಗೆ ಸೂಚಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪುಣೆಯ ಸೈಬರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜೈರಾಮ್ ಪೈಗುಡೆ, ಇಂತಹ ಚಿತ್ರಗಳನ್ನು ಪೋಸ್ಟ್ ಮಾಡುವ ಮೊದಲು ಜನರು ಜಾಗರೂಕರಾಗಿರಬೇಕು ಎಂದು ಹೇಳಿದರು.

ರಿವೆಂಜ್ ಪೋರ್ನ್ ಮತ್ತು ಡೀಪ್‌‌ಫೇಕ್ ಎಂದರೇನು?‌
ಇತ್ತೀಚಿನ ವಷಗಳಲ್ಲಿ ಸಾವಿರಾರು ಜನರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಡೀಫೇಕ್ ಮತ್ತು ರಿವೆಂಜ್ ಪೋರ್ನ್ ನಂತಹ ಸೈಬರ್ ಅಪರಾಧದಿಂದ ಬಳಲುತ್ತಿದ್ದಾರೆ. ಡೀಪ್‌ಫೇಕ್ ಎಂದರೆ ಕೃತಕ ಬುದ್ಧಿಮತ್ತೆ (Artificial intelligence) ಬಳಸಿ ಕಂಪ್ಯೂಟರ್‌ನಿಂದ ಫೋಟೋಗಳು ಮತ್ತು ವೀಡಿಯೊಗಳನ್ನು ತಯಾರಿಸಲಾಗುತ್ತದೆ. ಅಪರಾಧಿಗಳು ವ್ಯಕ್ತಿಯ ಮುಖವನ್ನು‌ ಈಗಾಗಲೇ ಅಸ್ತಿತ್ವದಲ್ಲಿರುವ ವೀಡಿಯೋ ಅಥವಾ ಫೋಟೋಗೆ ಅಟ್ಯಾಚ್‌ ಮಾಡಲಾಗುತ್ತದೆ. ಇದಕ್ಕೆ ಅತ್ಯುನ್ನತ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದ್ದು, ನಕಲಿ ವೀಡಿಯೋ ಎಂಬ ಗುಮಾನಿಯೂ ನಮ್ಮತ್ತ ಸುಳಿಯದಂತೆ ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ.

ಮಾರ್ಚ್ 2018ರಲ್ಲಿ, ಯುಎಸ್ ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ನಿ ಮಿಚೆಲ್ ಒಬಾಮ ಅವರ ನಕಲಿ ವಿಡಿಯೋ ರೆಡ್‌ಡಿಟ್‌ ನಲ್ಲಿ ಬಂದಿತು. ನಕಲಿ ಆ್ಯಪ್ ಬಳಸಿ ಅಶ್ಲೀಲ ತಾರೆಯ ಮುಖಕ್ಕೆ ಇವರ ಮುಖವನ್ನು ಅಳವಡಿಸಲಾಗಿತ್ತು. ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತೀಯ ನಟಿಯರ ಅನೇಕ ವೀಡಿಯೋಗಳನ್ನು ಅಶ್ಲೀಲ ತಾಣಗಳಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಈ ತಂತ್ರಜ್ಞಾನದ ನಿಖರತೆ ಎಂದರೆ ವೀಡಿಯೋದಲ್ಲಿರುವವರು ನೀವೆ ಎಂಬ ಭಾವನೆ ನಿಮಗೆ ಬಂದರೂ ಅಚ್ಚರಿ ಇಲ್ಲ.

ಸಾಮಾಜಿಕ ಜಾಲತಾಣ ಮತ್ತು ಡೇಟಿಂಗ್ ಸೈಟ್‌ಗಳಲ್ಲಿ ನಕಲಿ ಅಥವಾ ಎಡಿಟೆಡ್‌ ಚಿತ್ರಗಳನ್ನು ಬಳಸುವ ಮೂಲಕ ಜನರು ಬ್ಲ್ಯಾಕ್‌ಮೇಲ್ ಮಾಡುವುದು, ಬ್ಲ್ಯಾಕ್‌ಮೇಲ್‌ ಅಥವಾ ಮೋಸ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ವ್ಯಕ್ತಿಯ ಅನುಮತಿಯಿಲ್ಲದೆ ಅಸಭ್ಯ ಚಿತ್ರಗಳು ಅಥವಾ ವೀಡಿಯೋಗಳನ್ನು ತಯಾರಿಸುವುದು ಮತ್ತು ಅದನ್ನು ಅಂತರ್ಜಾಲದಲ್ಲಿ ಪೋಸ್ಟ್ ಮಾಡುವುದು ಕಾನೂನಾತ್ಮಕವಾಗಿ ಅಪರಾಧವಾಗಿದೆ. ಈ ಕುರಿತಂಥ ಅನೇಕ ದೂರುಗಳು ಈಗಾಗಲೇ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ನಾವು ಎಚ್ಚೆತ್ತುಕೊಳ್ಳುವುದು ಒಳ್ಳೆಯದು ಎಂಬುದು ಪೊಲೀಸರ ಸಲಹೆಯಾಗಿದೆ.

 

 

 

 

 

 

 

Advertisement

Udayavani is now on Telegram. Click here to join our channel and stay updated with the latest news.

Next