ಕಲಬುರಗಿ: ದೇಶಾದ್ಯಂತ ಮಾ.30ರಿಂದ ಏ.6ರವರೆಗೆ “ಮಣ್ಣಿನ ಸತ್ಯಾಗ್ರಹ’ ನಡೆಯಲಿದೆ ಎಂದು ಕಿಸಾನ್ ಮೋರ್ಚಾ ಮುಖಂಡರಾದ ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮೂರು ಕೃಷಿ ತಿದ್ದುಪಡಿ ಕಾಯ್ದೆ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ದೆಹಲಿಯ ಗಡಿಗಳ ಹೋರಾಟದ ಸ್ಥಳಗಳಲ್ಲಿ ಹುತಾತ್ಮರಾದ ರೈತರ ಗೌರವಾರ್ಥವಾಗಿ ಸ್ಮಾರಕ ಸ್ತಂಭ ನಿರ್ಮಿಸಲು ಸಂಯುಕ್ತ
ಕಿಸಾನ್ ಮೋರ್ಚಾ ಉದ್ದೇಶಿಸಿದ್ದು, ಇದಕ್ಕಾಗಿ ಹೋರಾಟ ನಡೆಸುತ್ತಿರುವ ದೇಶದ ರೈತರ ಭೂಮಿಗಳಿಂದ ಮಣ್ಣು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.
ರೈತ ವಿರೋಧಿಯಾದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಸಿಂಘು, ಟಿಕ್ರಿ, ಘಾಜಿಪುರ, ಶಹಜಹಾನಪುರ ಗಡಿಗಳಲ್ಲಿ 115 ದಿನಗಳಿಂದ ರೈತರ ಹೋರಾಟ ನಡೆಯುತ್ತಿದೆ. ಹೋರಾಟ ಮಾಡುತ್ತಲೇ ನೂರಾರು ರೈತರು ಹುತಾತ್ಮರಾಗಿದ್ದಾರೆ. ಹುತಾತ್ಮರ ಗೌರವಾರ್ಥವಾಗಿ ನಾಲ್ಕು ಕಡೆಗಳಲ್ಲೂ ಸ್ಮಾರಕ
ಸ್ತಂಭಗಳು ನಿರ್ಮಾಣವಾಗಲಿವೆ. ಹೋರಾಟ ನಿರತ ರೈತರ ಬೆಂಬಲಾರ್ಥವಾಗಿ ದೇಶದ ವಿವಿಧ ಭಾಗಗಳಿಂದ ಕುಡಿಕೆಗಳಲ್ಲಿ ಮಣ್ಣು ಸಂಗ್ರಹಿಸಲಾಗುವುದು. ಈ ಕುಡಿಕೆಗಳನ್ನು ಕಳಸದ ರೂಪದಲ್ಲಿ ಅಲಂಕರಿಸಿ, ಸ್ಮಾರಕ ಸ್ತಂಭಗಳ ಸ್ಥಳಕ್ಕೆ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.
ಬ್ರಿಟಿಷರ ವಿರುದ್ಧದ ಗಾಂಧೀಜಿ ಅಸಹಕಾರ ಚಳವಳಿಗೆ ಶತಮಾನ ತುಂಬಿದ್ದು, ಇದನ್ನು ಸ್ಮರಣೆಯಲ್ಲಿ ಇಟ್ಟುಕೊಂಡ ಮಣ್ಣಿನ ಸತ್ಯಾಗ್ರಹ ನಡೆಯಲಿದೆ. ಇದೊಂದು ದೇಶದ ಎರಡನೇ ದಂಡಿ ಸತ್ಯಾಗ್ರಹವಾಗಲಿದೆ. ಮಾ.30ರಂದು ಒಂದು ಯಾತ್ರೆ ಮುಂಬೈಯಿಂದ ದಂಡಿ ಮಾರ್ಗವಾಗಿ ರಾಜಸ್ತಾನ, ಪಂಜಾಬ್, ಹರಿಯಾಣ ಮೂಲಕ ಏ.5ರಂದು ಸಿಂಘು ಗಡಿ ತಲುಪಲಿದೆ. ಅದೇ ರೀತಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮೂಲಕವೂ ಯಾತ್ರೆಗಳು ದೆಹಲಿಗೆ ಬಂದು ತಲುಪಲಿವೆ. ಏ.6ರಂದು ಹುತಾತ್ಮ ರೈತರಿಗೆ ಗೌರವ ಸಲ್ಲಿಸಿ, ಸ್ಮಾರಕ ಸ್ತಂಭಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಇದೆ ವೇಳೆ ಕೃಷಿ ಕಾಯ್ದೆಗಳನ್ನು ಧಿಕ್ಕರಿಸುವ ಪ್ರತಿಜ್ಞೆ ಕೈಗೊಳ್ಳಲಿದ್ದೇವೆ ಎಂದು ವಿವರಿಸಿದರು. ಮುಖಂಡರಾದ ಶೌಕತ್ ಅಲಿ ಆಲೂರ, ಬಸವರಾಜ ಜವಳಿ, ಮಜರ್ ಹುಸೈನ್ ಇದ್ದರು.
ಎಫ್‌ಐಆರ್ ವಜಾಕ್ಕೆ ಹೈಕೋರ್ಟ್‌ಗೆ ಅರ್ಜಿ
ರೈತ ಹೋರಾಟಗಾರ ರಾಕೇಶ್ ಟಿಕಾಯತ್ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್‌ಐಆರ್ ವಜಾ ಮಾಡುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಬಿ.ಆರ್. ಪಾಟೀಲ ಹೇಳಿದರು. ಶಿವಮೊಗ್ಗ ಮತ್ತು ಹಾವೇರಿಯಲ್ಲಿ ನಡೆದ ಮಹಾ ಪಂಚಾಯತ್ ಸಮಾವೇಶದಲ್ಲಿ ಟಿಕಾಯತ್
ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆಯಾ ಜಿಲ್ಲೆಯ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದು ಅತ್ಯಂತ ಖಂಡನೀಯವಾಗಿದೆ ಎಂದರು. ಸಮಾವೇಶ ಮುಗಿದ ಎರಡು ದಿನಗಳ ನಂತರ ಎಫ್‌ಐಆರ್ ದಾಖಲಾಗಿವೆ.
ಹೀಗಾಗಿ ಈ ಎಫ್‌ಐಆರ್‌ಗಳು ದುರುದ್ದೇಶದಿಂದ ಕೂಡಿದ್ದು ಎಂಬುವುದು ಸ್ಪಷ್ಟವಾಗುತ್ತದೆ. ರೈತ ನಾಯಕರನ್ನು ಬೆದರಿಸುವ ಕಾರಣ ಸರ್ಕಾರ ಇಂತಹ ಕೆಲಸ ಮಾಡಿದೆ. ಆದ್ದರಿಂದ ಎರಡೂ ಎಫ್‌ಐಆರ್‌ಗಳನ್ನು ವಜಾ ಮಾಡಬೇಕೆಂದು ಬೆಂಗಳೂರು ಮತ್ತು ಧಾರವಾಡ ಹೈಕೋರ್ಟ್ ಪೀಠದಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ಮಹಾ ಪಂಚಾಯತ್ ನಡೆಯಬೇಕಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲೂ ಮಹಾ ಪಂಚಾಯತ್ ನಡೆಸುವ ಉದ್ದೇಶವಿದೆ. ಹೀಗೆ ರಾಜ್ಯದಲ್ಲಿ ರೈತರ ಹೋರಾಟ ಪ್ರಬಲವಾಗಲಿದೆ. ರಾಷ್ಟ್ರೀಯ ರೈತ ನಾಯಕರು ರಾಜ್ಯಕ್ಕೆ ಬರಲಿದ್ದಾರೆ ಎನ್ನುವ ಭೀತಿಯಿಂದ ಬಿಜೆಪಿ ಸರ್ಕಾರ ಇಂತಹ ಕೆಳಮಟ್ಟಕ್ಕೆ ಇಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.