Advertisement
ಸುಳ್ಯ : ‘ ಮನೆಯಲ್ಲಿ ತೀವ್ರ ಬಡತನ. ಗಂಜಿಗೆ ಅರಸಿನ ಎಲೆ ಸೇರಿಸಿ ಊಟ. ಅಪ್ಪ-ಅಮ್ಮ ಕೂಲಿಗೆ ಹೋಗಿ ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದರು. ಕೂಲಿ ಇದ್ದರೆ ಊಟ. ಇಲ್ಲದಿದ್ದರೆ ಇಲ್ಲ ಎಂಬ ಪರಿಸ್ಥಿತಿ. ಆದರೆ ಅದೇ ಬಡತನ ಅಣ್ಣ-ತಮ್ಮನನ್ನು ದೇಶ ಕಾಯುವ ಸೈನಿಕರನ್ನಾಗಿಸಿತು.’ಮಾಡುತ್ತಿರುವ ಸುಳ್ಯದ ಮಡಪ್ಪಾಡಿಯ ಕೊಲ್ಲಮೊಗ್ರು ಜಾಲುಮಣೆಯ ವೀರ ಸೈನಿಕ ದಯಾನಂದ. ಕೂಲಿ ಹಣದಲ್ಲಿ ಪುಸ್ತಕ
‘ಮನೆ ಸನಿಹದಲ್ಲಿ ಶಾಲೆ ಇತ್ತು. ಅಪ್ಪ-ಅಮ್ಮ ಎಂತಹ ಕಷ್ಟ ಬಂದರೂ ಮಕ್ಕಳ ತುತ್ತಿಗೆ ಕಡಿಮೆ ಮಾಡಲಿಲ್ಲ. ಕೊಲ್ಲ ಮೊಗ್ರಿನಲ್ಲಿ ಹೈಸ್ಕೂಲ್, ಗುತ್ತಿಗಾರಿನಲ್ಲಿ ಪಿಯುಸಿ ಓದಿಸಿದರು. ಹೆತ್ತವರ ಬೆವರಿನ ಶ್ರಮದಿಂದಾಗಿಯೇ ನಾವಿಂದು ಈ ಹಂತಕ್ಕೆ ಬಂದಿದ್ದೇವೆ. ಅಂದು ನಾವಿದ್ದ ಮನೆ ಗುಡಿಸಲಿನಂತಿದ್ದು ಬಾಗಿಲು ಇರಲಿಲ್ಲ. ಸಣ್ಣ ತಟ್ಟಿ ಸಿಕ್ಕಿಸುತ್ತಿದ್ದರು. ಮಧ್ಯಾಹ್ನ ಊಟಕ್ಕೆ ಬಂದವರು ಕಿಟಿಕಿಯಂತಿದ್ದ ಕಿಂಡಿಯೊಳಕ್ಕೆ ಹೊಕ್ಕಿ ಊಟ ಮಾಡಿ ಬರುತ್ತಿದ್ದೆವು.
Related Articles
Advertisement
ಬಡತನವೇ ಪ್ರೇರಣೆಬಡತನ ದಯಾನಂದ ಮತ್ತು ಅವರ ಸೋದರಗೆ ಸೇನೆಗೆ ಸೇರುವ ಛಲ ಹುಟ್ಟಿಸಿತ್ತು. ಈ ಕಾರಣ ಪಿಯುಸಿ ಬಳಿಕ ನೇಮಕಾತಿಯಲ್ಲಿ ಭಾಗಿಯಾದರು. ಸೇನೆಗೆ ತೆರಳುವ ಸಂದರ್ಭ ಚಿಕ್ಕಪ್ಪಂದಿರು ಆರ್ಥಿಕ ಸಹಾಯ ಮಾಡಿದ್ದರಂತೆ.
ದಯಾನಂದ ಅವರ ತಂದೆ ಚಿನ್ನಪ್ಪ ಗೌಡ. ತಾಯಿ ಭವಾನಿ. ಪತ್ನಿ ಜಯಶ್ರೀ ಗುಡ್ಡೆ ಮನೆ. ಪುತ್ರ ಆಶ್ಲೇಷ ಜೆ. ಗೌಡ. ಅವಿಭಕ್ತ ಕುಟುಂಬ. ದಯಾನಂದ ಅವರ ಅಣ್ಣ ಸತೀಶ್ ಜೆ ಗೌಡ ಅವರೂ ಸೈನಿಕರು. ದೊಡ್ಡಣ್ಣ ಜಯಪ್ರಕಾಶ್ ಜೆ. ಅರಣ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ. 13 ವರ್ಷಗಳಿಂದ ದೇಶಸೇವೆ
2005ರಲ್ಲಿ ಸೇನೆಗೆ ಆಯ್ಕೆಯಾದ ಬಳಿಕ ಜಮ್ಮುಗೆ ಪೋಸ್ಟಿಂಗ್ ಆಗಿತ್ತು. ಬಳಿಕ ರಾಂಚಿ, ಕಾಶ್ಮೀರದ ರಜೌರಿಯಲ್ಲಿ
48ನೇ ರಾಷ್ಟ್ರೀಯ ರೈಫಲ್ಸ್‌ಗೆ 33 ತಿಂಗಳು ಕೆಲಸ ಮಾಡಿದ್ದರು. ಸದ್ಯ ಆರ್ಮ್ಡ್ ಕೋರ್ 89 ಆರ್ಮ್ಡ್ ರೆಜಿಮೆಂಟ್‌ನಲ್ಲಿ (ಎಸ್‌ಡಬ್ಲ್ಯೂಆರ್ ಆಗಿ) ಸೇವೆ ಸಲ್ಲಿಸುತ್ತಿರುವ ಅವರು ಟಿ -72 ಯುದ್ಧ ಟ್ಯಾಂಕ್‌ನ ಗನ್ ಆಪರೇಟರ್ ಆಗಿದ್ದಾರೆ. ಪಠಾಣ್‌ಕೋಟ್‌ನಲ್ಲಿ ತರಬೇತಿಯಲ್ಲಿದ್ದಾರೆ. ಹಿಮಗಡ್ಡೆ ಬಿಸಿ ಮಾಡಿ ಮುಖ ತೊಳೆಯೋದು, ವಾರಕ್ಕೊಮ್ಮೆ ಸ್ನಾನ
ರಜೌರಿ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ 11 ಸಾವಿರ ಫೀಟ್ ಎತ್ತರದಲ್ಲಿ ತಂಡದ ನಿಯೋಜನೆಯಾಗಿತ್ತು. ಅದು ಉಗ್ರರು ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುವ ಜಾಗ. ಪಾಕ್ ಸೈನಿಕರೇ ಉಗ್ರರನ್ನು ಈ ಭಾಗಕ್ಕೆ ತೂರಿಬಿಡುತ್ತಿದ್ದರು. ಅಲ್ಲಿ ನಮ್ಮ 38 ಮಂದಿಯ ತಂಡ ನಿಯೋಜಿಸಿದ್ದರು. 2011 ಸೆ.ನಿಂದ 2012 ಜೂ.ವರೆಗೆ ಅಲ್ಲಿ ಕರ್ತವ್ಯ ನಿರ್ವಹಿಸಿದ್ದೆ. ಚಳಿ ಸಂದರ್ಭ ಮರಗಟ್ಟುವ ವಾತಾವರಣ. ಮುಖ ತೊಳೆಯಲು ನೀರಿಗೆ ಮಂಜುಗಡ್ಡೆ ಬಿಸಿ ಮಾಡಬೇಕಿತ್ತು. ವಾರಕ್ಕೊಮ್ಮೆ ಸ್ನಾನ ಮಾಡುತ್ತಿದ್ದೆವು. ಸುಮಾರು 600 ಅಡಿ ಕೆಳಭಾಗಕ್ಕೆ ಹೆಲಿಕಾಪ್ಟರ್‌ನಲ್ಲಿ ಆಹಾರ ಪೂರೈಕೆಯಾಗುತ್ತಿತ್ತು. ಅಲ್ಲಿಂದ ಕತ್ತೆ ಮೇಲೆ ಆಹಾರ ಹೇರಿ ತರಲಾಗುತ್ತಿತ್ತು. ಎನ್ನುತ್ತಾರೆ ದಯಾನಂದ. ಉಗ್ರರನ್ನು ಹೊಡೆದುರುಳಿಸಿದ ನೆನಪುಗಳು
ಇಬ್ಬರು ಉಗ್ರರು ಖತಂ
ರಜೌರಿಯಲ್ಲಿ ಒಂದು ಬಾರಿ ಉಗ್ರರು ದಾಳಿ ಮಾಡಿದ್ದರು. ಸಂಜೆ 6.45ರ ಹೊತ್ತಿಗೆ ಮೂವರು ಉಗ್ರರು ದಾಳಿ ನಡೆಸಿದ್ದರು. ಆ ಹೊತ್ತಿಗೆ ಭಯ ಮೂಡಿದ್ದರೂ ಧೃತಿಗೆಟ್ಟಿರಲಿಲ್ಲ. ತತ್‌ಕ್ಷಣ ಇಬ್ಬರನ್ನು ನಮ್ಮ ತಂಡ ಹೊಡೆದುರುಳಿಸಿತು. ಮತ್ತೊಬ್ಬನನ್ನು ಇನ್ನೊಂದು ತಂಡ ಸದೆಬಡಿಯಿತು. 5 ಮಂದಿ ಉಗ್ರರಿಗೆ ಯಮಲೋಕ
ಇನ್ನೊಂದು ಘಟನೆ. ಸೇನೆಗೆ ಸೇರಿದ್ದ ಸಂದರ್ಭ. ರಾತ್ರಿ 8.30ರ ಹೊತ್ತಿಗೆ ಕರ್ತವ್ಯ ಮುಗಿಸಿದ ಕಮಾಂಡರ್ ಅವರನ್ನು
ಚಾಲಕರೊಬ್ಬರು ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಐವರು ಉಗ್ರರು ದಾಳಿ ಮಾಡಿದ್ದರು. ಕಮಾಂಡರ್ ಹಿಂದೆಯೇ ನಮ್ಮ ತಂಡ ಇತ್ತು. ಜೋಳದ ಗದ್ದೆ ದಾರಿಯಲ್ಲಿ ಈ ದಾಳಿ ನಡೆದ ಕಾರಣ, ಯಾವ ದಿಕ್ಕಿನಿಂದ ದಾಳಿಯಾಗಿದೆ ಎಂದು ಹುಡುಕುವುದು ಸುಲಭವಾಗಿರಲಿಲ್ಲ. ಆಳೆತ್ತರದ ತೆನೆಗಳು ಕೂಡ ಅದಕ್ಕೆ ಅಡ್ಡಿ ಆಗಿತ್ತು. ಕಮಾಂಡರ್‌ಗೆಂದು ಉಗ್ರರು ಹೊಡೆದ ಗುಂಡುಗಳು ವಾಹನಕ್ಕೆ ಮತ್ತು ಚಾಲಕನ ಬಲ ತೊಡೆಗೆ ಹೊಕ್ಕಿತ್ತು. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಐವರನ್ನೂ ಹೊಡೆದುರುಳಿಸಿ ಕಮಾಂಡರ್ ಮತ್ತು ಚಾಲಕನನ್ನು ರಕ್ಷಿಸಿದೆವು. ಜಾಗೃತಿ ಮೂಡಿಸಬೇಕು
30 ದಿನಗಳ ರಜೆ ಸಿಕ್ಕಿದರೆ ಹೈಸ್ಕೂಲ್, ಪಿಯುಸಿ ಮಕ್ಕಳಿಗೆ ಸೇನೆಗೆ ಸೇರುವ ಕುರಿತು ಮಾಹಿತಿ, ಬೆಳಗ್ಗಿನ ಹೊತ್ತಿನಲ್ಲಿ ಫಿಟ್ ನೆಸ್ ಕಾಪಾಡಿಕೊಳ್ಳಲು ತರಬೇತಿ ನೀಡುವ ಆಸಕ್ತಿ ಇದೆ.
-ದಯಾನಂದ ಮಕ್ಕಳ ಬಗ್ಗೆ ಹೆಮ್ಮೆ ಇದೆ
ತುಂಬಾ ಬಡತನ ಇತ್ತು. ನಾವು ಕೂಲಿನಾಲಿ ಮಾಡಿಕೊಂಡು ಸಂಸಾರ ನಿರ್ವಹಿಸಬೇಕಿತ್ತು. ಕಷ್ಟಪಟ್ಟು ಮೇಲೆ ಬಂದಿದ್ದಾರೆ. ನಾಲ್ವರು ಮಕ್ಕಳಲ್ಲಿ ಇಬ್ಬರು ಸೇನೆಯಲ್ಲಿದ್ದಾರೆ. ಈಗ ನಮ್ಮ ಬದುಕು ಬದಲಾಗಿದೆ. ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ.
-ಚಿನ್ನಪ್ಪ ಗೌಡ (ತಂದೆ) ಪತಿ ಸೈನಿಕ ಅನ್ನುವುದೇ ನನಗೆ ಸಂಭ್ರಮದ ವಿಚಾರ. ಅವರ ಜತೆಗೆ ಗಡಿಭಾಗದ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಿದ್ದೇನೆ. ದೇಶ ಸೇವೆ ಅಂದರೆ ಅದೊಂದು ಅಪೂರ್ವ ಕ್ಷಣ ಎಂದು ಭಾವಿಸುತ್ತೇನೆ.
-ಜಯಶ್ರೀ ಗುಡ್ಡಮನೆ (ಪತ್ನಿ) ಕಿರಣ್ ಪ್ರಸಾದ್ ಕುಂಡಡ್ಕ