ದಾಂಡೇಲಿ: ನಿಸರ್ಗದತ್ತವಾಗಿ ಬಂದಿರುವ ಹಚ್ಚ ಹಸಿರಿನಿಂದ ಕಂಗೊಳಿಸುವ ಮತ್ತು ಬೃಹತ್ ಅರಣ್ಯ ಹಾಗೂ ವನ್ಯ ಸಂಪತ್ತನ್ನು ಹೊಂದಿರುವ ದಾಂಡೇಲಿ- ಜೊಯಿಡಾ ಪ್ರದೇಶ ವಿಶ್ವಮಟ್ಟದಲ್ಲಿ ಗುರುತಿಸುವಂತಾಗಬೇಕೆಂಬ ಉತ್ಕಟ ಬಯಕೆಯಿಂದ ರಾಷ್ಟ್ರದಲ್ಲೇ ಮೊದಲ ಪ್ರಯತ್ನವೆಂಬಂತೆ ಕೆನೊಪಿ ವಾಕ್ ನಿರ್ಮಿಸಲಾಗಿದೆ. ಇದು ಪ್ರವಾಸೋದ್ಯಮ ಕ್ಷೇತ್ರದ ಪ್ರಗತಿಗೆ ಬಹುದೊಡ್ಡ ಶಕ್ತಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಭಾನುವಾರ ಜೊಯಿಡಾ ತಾಲೂಕಿನ ಕುವೇಶಿ ಅರಣ್ಯದಲ್ಲಿ ನೂತನವಾಗಿ ನಿರ್ಮಿಸಲಾದ ರಾಷ್ಟ್ರದ ಮೊದಲ ಕೆನೊಪಿ ವಾಕ್‌ನ್ನು ಲೋಕಾರ್ಪಣೆಗೊಳಿಸಿ ಮತ್ತು ಗ್ರೇಟ್ ಕೆನರಾ ಟ್ರೇಲಿಗೆ ಚಾಲನೆ ನೀಡಿ ಅವರು ಮಾತನಾಡಿದರು. ವಿದೇಶದಲ್ಲಿ ಕೆಲವೆಡೆ ಈ ಕೆನೊಪಿ ವಾಕ್ ಇದ್ದು, ಅಲ್ಲಿಯ ತಂತ್ರಜ್ಞಾನಗಳನ್ನೇ ಬಳಸಿ ಕುವೇಶಿಯಲ್ಲಿ ನಿರ್ಮಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆಯ 84 ಲಕ್ಷ ರೂ.ಅನುದಾನದಲ್ಲಿ ನಿರ್ಮಾಣಗೊಂಡಿರುವ ಈ ಕೆನೊಪಿ ವಾಕ್, 240 ಮೀಟರ್ ಉದ್ದವಿದೆ. ಆ ಭಾಗದ ಅರಣ್ಯ ಹಾಗೂ ಮರಗಳನ್ನೇ ಬಳಸಿ, ಅರಣ್ಯ, ಪರಿಸರ ಹಾಗೂ ಮರಗಳಿಗೆ ಧಕ್ಕೆಯಾಗದ ರೀತಿಯಲ್ಲಿ ನಿರ್ಮಿಸಲಾಗಿದ್ದು, ರಾಷ್ಟ್ರದಲ್ಲೇ ಇದು ಚೊಚ್ಚಲ ಪ್ರಯೋಗ. ಕೆನಾಪಿ ವಾಕ್ ಕೇವಲ ಸ್ಥಳೀಯರನ್ನಷ್ಟೇ ಅಲ್ಲದೆ, ರಾಜ್ಯ, ದೇಶ, ವಿದೇಶಗಳ ಪ್ರವಾಸಿಗರನ್ನೂ ಆಕರ್ಷಿಸಲಿದೆ. ಜೊತೆಗೆ, ಕುವೇಶಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಬರುವ ಹೋಮ್ ಸ್ಟೇಯವರಿಗೂ ಲಾಭ ತರಲಿದೆ ಎಂದರು.
ಪ್ರವಾಸೋದ್ಯಮ ಇಲಾಖೆಯ ಒಂದು ಕೋಟಿ ರೂ.ಗಳ ಅನುದಾನದಲ್ಲಿ ನಿರ್ಮಾಣಗೊಂಡಿರುವ ಈ ಗ್ರೇಟ್ ಕೆನರಾ ಟ್ರೇಲ್ ಹೊನ್ನಾವರದ ಗೇರುಸೊಪ್ಪಾದಿಂದ ಶಿರಸಿ, ಯಲ್ಲಾಪುರ, ಮಾರ್ಗವಾಗಿ ಕುವೇಶಿಯವರೆಗೂ ಸುಮಾರು 270 ಕಿಮೀ ಸಾಗಲಿದೆ. ಕಾಳಿ ರಕ್ಷಿತ ಪ್ರದೇಶದ 75 ಕಿಮೀಗಳಲ್ಲಿ ಈ ಟ್ರೇಲ್ ಸಂಚರಿಸಲಿದೆ. ಉಳಿದದ್ದು ಯಲ್ಲಾಪುರ, ಶಿರಸಿ, ಹೊನ್ನಾವರದಲ್ಲಿರಲಿದ್ದು, ಬರುವ ಪ್ರವಾಸಿಗರಿಗೆ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಬಾಸರಕೋಡ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಓ.ಪಾಲಯ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ರಮೇಶ, ಜಿಪಂ ಸದಸ್ಯ ಹಣಬರ, ರಮೇಶ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬಗಾರ ಮೊದಲಾದವರು ಉಪಸ್ಥಿತರಿದ್ದರು.