ಬಸವನಬಾಗೇವಾಡಿ: ನಮ್ಮ ಯುವಕರ ಬದುಕು ಬಂಗಾರವಾಗಬೇಕಾದರೆ ಯುವಕರಿಗೆ ಉದ್ಯೋಗ ಮುಖ್ಯ. ಈ ಭಾಗವದಲ್ಲಿ ಅನೇಕ ಯುವಕರು ಉದ್ಯೋಗವಿಲ್ಲದೆ ಇರುವುದನ್ನು ಮನಗಂಡು ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ಪಟ್ಟಣದಲ್ಲಿ ಸರ್ಕಾರಿ ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜಗಳನ್ನು ತೆರೆಯಲಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಟಕ್ಕಳಕಿ ಗ್ರಾಮದಲ್ಲಿ ಬಸವನಬಾಗೇವಾಡಿ ಸರ್ಕಾರಿ ಐಟಿಐ ಕಾಲೇಜಿನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಬೃಹತ್ ಎನ್‌ಟಿಪಿಸಿ ಸ್ಥಾಪನೆಯಾಗುತ್ತಿದೆ. ಆದರೆ ಅಲ್ಲಿ ಉದ್ಯೋಗ ಮಾಡಬೇಕಾದರೆ ಪ್ರಮುಖವಾಗಿ ಐಟಿಐ ವ್ಯಾಸಂಗ ಮಾಡಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅವಕಾಶ ಸಿಗುತ್ತದೆ. ಈ ನಿಟ್ಟಿನಲ್ಲಿ ತಾಲೂಕಿನ ಯುವ ಸಮೂಹಕ್ಕೆ ಉದ್ಯೋಗ ವಂಚಿತರಾಗಬಾರದೆಂಬ ಉದ್ದೇಶದಿಂದ ಪಟ್ಟಣದಲ್ಲಿ ಸರ್ಕಾರಿ ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜನ್ನು ಆರಂಭಿಸಲಾಗಿದ್ದು ಇದರ ಸದುಪಯೋಗವನ್ನು ಯುವಜನತೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ್ರತಿ ಮನುಷ್ಯ ಕುಲ ಪ್ರಕೃತಿಯೊಂದಿಗೆ ಹೊಂದಿಕೊಂಡು ಹೋದರೆ ನಮ್ಮ ಬದುಕಿಗೆ ಪ್ರಕೃತಿ ಆಸರೆಯಾಗುತ್ತದೆ. ಒಂದು ವೇಳೆ ನಮ್ಮೊಂದಿಗೆ ಪ್ರಕೃತಿ ಮುನಿಸಿಕೊಂಡರೆ ಬದುಕು ನಾಶವಾಗುತ್ತದೆ. ಪರಿಸರ ಮತ್ತು ಪ್ರಕೃತಿ ಉಳಿವಿಗಾಗಿ ಬರುವ ದಿನಮಾನದಲ್ಲಿ ದೇಶದಲ್ಲಿ ಪ್ರತಿಯೊಂದು ವಾಹನಗಳು ಇಲೆಕ್ಟ್ರಾನಿಕ್ ಮೂಲಕ ಚಲಿಸುವಂತ ವಾಹನ ನಿರ್ಮಾಣವಾಗುತ್ತಿದೆ. ಕೌಶಲ್ಯಾಭಿವೃದ್ಧಿಯಿಂದ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದರೂ ಕೂಡಾ ಪ್ರಕೃತಿಯನ್ನು ಉಳಿಸುವ ಕಾರ್ಯವಾಗುತ್ತಿಲ್ಲ. ದೇಶದಲ್ಲಿ ಪ್ರತಿ ವರ್ಷಕ್ಕೆ 2 ಲಕ್ಷ ಕೋಟಿ ಪೆಟ್ರೋಲ್‌ಗೆ ಖರ್ಚು ಮಾಡಲಾಗುತ್ತಿದೆ. ಇದನ್ನು ತಡೆಯಲು ಉದ್ದೇಶದಿಂದ ಇಲೆಕ್ಟ್ರಾನಿಕ್ ವಾಹನಗಳನ್ನು ನಿರ್ಮಿಸುತ್ತಿದ್ದಾರೆ ಇದರಿಂದ ಪರಿಸರ ಮತ್ತು ಪ್ರಕೃತಿಗೆ ಸಹಕಾರವಾಗುತ್ತದೆ ಎಂದು ಹೇಳಿದರು.
ಮುತ್ತಗಿ ಗ್ರಾಪಂ ಅಧ್ಯಕ್ಷೆ ತೇಜಸ್ವಿನಿ ಉಣ್ಣಿಬಾವಿ, ಉಪಾಧ್ಯಕ್ಷ ಕನಕಪ್ಪ ಬಂಡಿವಡ್ಡರ, ತಹಶೀಲ್ದಾರ್ ವಿಜಯಕುಮಾರ ಕಡಕೋಳ, ಐಟಿಐ ಕಾಲೇಜಿನ ಪ್ರಾಚಾರ್ಯ ಎಸ್.ಜಿ. ಮಲ್ಲಾಡಕರ, ಪಾಲ್‌ಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಪ್ರದೀಪ ನಗನೂರ, ನಿರ್ಭೀತ ಕೇಂದ್ರ ಯೋಜನಾಧಿಕಾರಿ ಅರವಿಂದ ದನಗೊಂಡ ಇದ್ದರು. ಡಿ.ಕೆ. ಸೊನ್ನದ ಸ್ವಾಗತಿಸಿದರು. ಅನಂದ ಪಾಟೀಲ ನಿರೂಪಿಸಿದರು.