Advertisement

ಪಿಲಿಫಿನ್ಸ್ ದೇಶದ ಕತೆ: ಕೋತಿ ಮತ್ತು ಆಮೆ

06:55 PM Sep 14, 2019 | mahesh |

ದೇವರು ಪ್ರಾಣಿಗಳನ್ನೆಲ್ಲ ಸೃಷ್ಟಿಸಿದ ಬಳಿಕ ಅವುಗಳ ಸಭೆ ಕರೆದ. “”ನಾನು ತುಂಬ ಶ್ರಮವಹಿಸಿ ಬೇರೆ ಬೇರೆ ವಿಧದ ಪ್ರಾಣಿಗಳನ್ನು ಸೃಷ್ಟಿಸಿದ್ದೇನೆ. ನಿಮಗಾಗಿ ಎಲ್ಲ ಆಹಾರವೂ ಲಭಿಸುವ ಅರಣ್ಯವನ್ನೂ ಸಿದ್ಧಗೊಳಿಸಿದ್ದೇನೆ. ಒಂದೊಂದು ಪ್ರಾಣಿಗೂ ಹೊಸ ಬಗೆಯ ಸಾಮರ್ಥ್ಯವನ್ನು ಕರುಣಿಸಿದ್ದೇನೆ. ಆನೆಗೆ ಸೊಂಡಿಲು ಇದೆ. ಅದನ್ನು ಉಪಯೋಗ ಮಾಡಿ ಆಹಾರ ಸಂಪಾದಿಸಬೇಕು. ಹುಲಿಗೆ ಹರಿತವಾದ ಉಗುರು, ಕೋರೆಹಲ್ಲುಗಳಿವೆ. ಇದನ್ನು ಬಳಸಿ ತನ್ನ ಹಸಿವು ನೀಗಿಸಲು ಬೇಕಾದುದನ್ನು ಗಳಿಸಬೇಕು. ನರಿಗೆ ತಂತ್ರಗಾರಿಕೆ, ಕೋತಿಗೆ ಮರದಿಂದ ಮರಕ್ಕೆ ಹಾರುವ ಶಕ್ತಿ ಎಲ್ಲವೂ ಇರುವುದು ಬೇರೆ ಯಾರಿಗೂ ತೊಂದರೆ ಕೊಡದೆ, ನಿಮಗೆ ಬೇಕಾದುದಕ್ಕೆ ನನ್ನನ್ನು ಕರೆಯದೆ ನೆಮ್ಮದಿಯಿಂದ ಬದುಕುವುದಕ್ಕಾಗಿ. ಒಂಟೆಗೆ ಉದ್ದ ಕೊರಳಿದೆ, ಜಿಂಕೆಗೆ ಓಟದ ವೇಗವಿದೆ. ಕಾಡಿನಲ್ಲಿ ಸುಖವಾಗಿ ಜೀವನ ಮಾಡಿ. ಆದರೆ ಒಬ್ಬರು ಕಷ್ಟದಲ್ಲಿರುವುದು ಕಂಡರೆ ಹಾಗೆಯೇ ಹೋಗ ಬಾರದು. ಅವರಿಗೆ ನಿಮ್ಮ ಕೈಲಾಗುವ ಸಹಾಯ ಮಾಡಬೇಕು” ಎಂದು ಉಪದೇಶಿಸಿದ. “”ಹಾಗೆಯೇ ನಡೆದುಕೊಳ್ಳು ತ್ತೇವೆ” ಎಂದು ಹೇಳಿ ಪ್ರಾಣಿಗಳು ಕಾಡಿನೊಳಗೆ ಪ್ರವೇಶಿಸಿದವು.

Advertisement

ಒಂದು ದಿನ ಆಮೆಯೊಂದು ಬಹು ಮೆಲ್ಲಗೆ ನಡೆಯುತ್ತ ತಿನ್ನಲು ಏನಾದರೂ ಸಿಗುವುದೋ ಎಂದು ಆಹಾರ ಹುಡುಕಿ ಕೊಂಡು ಹೊರಟಿತು. ಆಗ ಒಂದೆಡೆ ಒಂದು ಕೋತಿ ಖನ್ನವಾಗಿ ಮುಖ ಬಾಡಿಸಿಕೊಂಡು ಕುಳಿತಿರುವುದನ್ನು ನೋಡಿತು. ಪಾಪ, ಏನು ಕಷ್ಟವೋ ಅಂದುಕೊಂಡಿತು. ಕಷ್ಟದಲ್ಲಿರುವವರಿಗೆ ಉಪಕಾರ ಮಾಡದೆ ಹೋಗಬಾರದು ಎಂದು ದೇವರು ಹೇಳಿದ ಮಾತು ನೆನಪಿಗೆ ಬಂತು. “”ಹೇಗಿದ್ದೀಯಣ್ಣ? ಯಾಕೆ ಇಷ್ಟು ಕಂಗಾಲಾಗಿ ಕುಳಿತಿರುವೆ?” ಎಂದು ವಿಚಾರಿಸಿತು.

ಕೋತಿ ಬಿಕ್ಕಿ ಬಿಕ್ಕಿ ಅಳತೊಡಗಿತು. “”ಏನು ಹೇಳಲಣ್ಣಾ, ನೀನಾದರೂ ಹೇಗಿದ್ದೀ ಎಂದು ಕೇಳಿದೆಯಲ್ಲ! ಅದನ್ನು ಕೇಳಿ ಹೊಟ್ಟೆ ತುಂಬ ಉಂಡಷ್ಟು ಹರ್ಷವಾಯಿತು. ಆದರೆ ನನ್ನ ಜಾತಿಯ ಬೇರೆ ಕೋತಿಗಳಿದ್ದಾವಲ್ಲ, ಸೌಜನ್ಯಕ್ಕೂ ಇಂತಹ ಮಾತು ಕೇಳುವುದಿಲ್ಲ. ನೋಡು, ನಾನು ತುಂಬ ಪ್ರಾಮಾಣಿಕ ವಾಗಿ ಕಷ್ಟಪಟ್ಟು ಬದುಕುವವನು. ಬೇರೆಯವರ ಆಸ್ತಿಯ ಕಡೆಗೆ ಕಣ್ಣೆತ್ತಿಯೂ ನೋಡುವವನಲ್ಲ. ಊಟ ಮಾಡದೆ ಎರಡು ದಿನ ಕಳೆದಿತ್ತು. ಎಲ್ಲಿಯೂ ಏನೂ ಸಿಕ್ಕಿರಲಿಲ್ಲ. ಆದರೂ ಇನ್ನೊಬ್ಬರಲ್ಲಿ ಬೇಡಲು ನನಗೆ ತುಂಬ ಸ್ವಾಭಿಮಾನ. ಉಪವಾಸವೇ ಇದ್ದೆ. ಆಗ ದಯಾಳುವಾದ ಒಬ್ಬ ಮನುಷ್ಯ ನನ್ನ ಕಡೆಗೆ ನೋಡಿದ. ಅವನಿಗೆ ನನ್ನ ಅವಸ್ಥೆ ಕಂಡು ಕರುಳು ಚುರುಕ್‌ ಎಂದಿರಬೇಕು. ನನ್ನಷ್ಟು ಎತ್ತರದ ಒಂದು ರಸಬಾಳೆ ಹಣ್ಣಿನ ಗೊನೆಯನ್ನು ಉದಾರವಾಗಿ ಕೊಟ್ಟುಬಿಟ್ಟ. ಎಲ್ಲವನ್ನೂ ತಿಂದು ಹಸಿವು ನೀಗಿಸಿಕೋ ಎಂದು ಹೇಳಿದ. ತುಂಬ ಸಂತೋಷವಾಯಿತು ನನಗೆ. ಹಿಗ್ಗಿನಿಂದ ಕುಣಿದಾಡಿದೆ. ಆದರೆ…” ಎಂದು ಹೇಳಿ ಇನ್ನೂ ಜೋರಾಗಿ ಅಳತೊಡಗಿತು.

“”ಏನಾಯಿತು, ಹಣ್ಣು ಚೆನ್ನಾಗಿರಲಿಲ್ಲವೆ?” ಆಮೆ ಕೇಳಿತು. “”ಚೆನ್ನಾಗಿರದೆ ಏನು? ಆದರೆ ಒಂದು ಹಣ್ಣು ಕೂಡ ನನಗೆ ತಿನ್ನಲು ನನ್ನ ಜಾತಿಯ ಬೇರೆ ಕೋತಿಗಳು ಬಿಡಲಿಲ್ಲ. ಮೈಗಳ್ಳರು, ಎಲ್ಲಿದ್ದವೋ ತಿಳಿಯದು, ಓಡೋಡಿ ಬಂದು ಎಲ್ಲವನ್ನೂ ಕಿತ್ತುಕೊಂಡು ಸಿಪ್ಪೆ ಸುಲಿದು ತಿಂದವು. ದುಡಿದು ತಿನ್ನಲು ಅವುಗಳಿಗೆ ಇಷ್ಟವಿಲ್ಲ. ಇನ್ನೊಬ್ಬರದು ಏನಾದರೂ ಇದ್ದರೆ ಕಿತ್ತು ತಿಂದು ಬದುಕುವ ಸೋಮಾರಿಗಳು, ಮನುಷ್ಯ ಕೊಟ್ಟ ಒಂದು ಹಣ್ಣಾದರೂ ನನಗಾಗಿ ಅವು ಬಿಡುತ್ತಿದ್ದರೆ ಇಂತಹ ದುಃಖವಾಗುತ್ತಿರಲಿಲ್ಲ” ಎಂದಿತು ಕೋತಿ.

ಆಮೆ ಕೋತಿಯ ಕತೆ ಕೇಳಿ ಮಮ್ಮಲ ಮರುಗಿತು. “”ಚಿಂತಿಸಬೇಡ. ನಿನಗೆ ಬೇಕಾದ್ದು ಬಾಳೆಹಣ್ಣು ತಾನೆ? ನನಗೆ ಇವತ್ತು ನೆಟ್ಟ ಬಾಳೆ ರಾತ್ರೆ ಬೆಳಗಾಗುವ ಮೊದಲು ಆಳೆತ್ತರದ ಗೊನೆ ಹಾಕಿ ಹಣ್ಣು ಕೈಗೆ ಸಿಗುವ ತಳಿ ಎಲ್ಲಿದೆಯೆಂದು ಗೊತ್ತಿದೆ. ನಿನಗೊಂದು, ನನಗೊಂದು ಬಾಳೆಗಿಡ ತಂದುಬಿಡೋಣ. ಇಬ್ಬರೂ ಒಂದೊಂದು ಬಾಳೆ ನೆಟ್ಟರೆ ಬೆಳಗಾಗುವಾಗ ಗೊನೆ ಸಿಗುತ್ತದೆ. ನೀನು ಒಬ್ಬನೇ ತಿನ್ನು. ಬೇರೆ ಕೋತಿಗಳು ನಿನ್ನ ಕೈಯಿಂದ ಹೇಗೆ ಕಿತ್ತುಕೊಳ್ಳುತ್ತವೆಯೋ ನಾನು ನೋಡುತ್ತೇನೆ, ಬಾ ನನ್ನೊಂದಿಗೆ” ಎಂದು ಕರೆಯಿತು.

Advertisement

ಕೋತಿ, “”ಒಳ್ಳೆಯ ಉಪಾಯ. ನನಗೆ ಆಹಾರವಿಲ್ಲದೆ ಎರಡು ಹೆಜ್ಜೆ ನಡೆಯಲೂ ಶಕ್ತಿಯಿಲ್ಲದಂತಾಗಿದೆ. ನೀನು ಹೋಗಿ ಗಿಡಗಳನ್ನು ತಂದರೆ ನನ್ನ ಪಾಲಿನ ಗಿಡವನ್ನು ನಾನೇ ನೆಟ್ಟು ನೀರೆರೆದು, ಗೊಬ್ಬರ ಹಾಕಿ ಸಾಕುತ್ತೇನೆ” ಎಂದಿತು. ದಯಾಳುವಾದ ಆಮೆ ಅದರ ಮಾತಿಗೆ ಒಪ್ಪಿತು. ದೂರದ ರೈತನ ತೋಟಕ್ಕೆ ಹೋಗಿ ಎರಡು ಬಾಳೆಗಿಡಗಳನ್ನು ಕಷ್ಟಪಟ್ಟು ಹೊತ್ತುಕೊಂಡು ಬಂದಿತು. ಕೋತಿ ಮರದ ಕೊಂಬೆಯಲ್ಲಿ ಕುಳಿತು ಗಢದ್ದಾಗಿ ನಿದ್ರೆ ಮಾಡುತ್ತ ಇತ್ತು. ಅದನ್ನು ಕೂಗಿ ಕರೆದು, “”ಕೆಳಗೆ ಬಾ, ಬಾಳೆಗಿಡ ತಂದಿದ್ದೇನೆ. ನಾನು ಹೊಂಡ ತೆಗೆದು ನನ್ನ ಪಾಲಿನ ಗಿಡವನ್ನು ನೆಡುತ್ತೇನೆ. ನಿನ್ನ ಗಿಡ ನೆಡಲು ನೀನೂ ಬಂದು ಹೊಂಡ ತೆಗೆ” ಎಂದು ಹೇಳಿತು.

ಕೋತಿಗೆ ಕೋಪ ಬಂತು. “”ಏನೆಂದೆ, ನಾನು ಹೊಂಡ ತೆಗೆಯಬೇಕೆ? ಯಾರು ಅಷ್ಟು ಕಷ್ಟಪಡುತ್ತಾರೆ? ಏನೂ ಅಗತ್ಯವಿಲ್ಲ. ನೆಲದಲ್ಲಿ ಹೊಂಡ ತೆಗೆದು ಬಾಳೆ ನೆಟ್ಟರೆ ಅದು ಗೊನೆ ಹಾಕಿದರೆ ಆನೆ ಕಂಡರೆ ಸುಮ್ಮನೆ ಬಿಡುತ್ತದೆಯೆ? ನೆಲದಲ್ಲಿ ನೆಡುವ ಕೆಲಸವೇ ಬೇಡ. ನನ್ನ ಪಾಲಿನ ಗಿಡವನ್ನು ಇತ್ತ ಕೊಡು. ಮರದ ಮೇಲೆಯೇ ನೆಡುತ್ತೇನೆ” ಎಂದು ಕೇಳಿತು. “”ಮರದ ಮೇಲೆ ಬಾಳೆ ನೆಟ್ಟರೆ ಬದುಕುವುದಿಲ್ಲ. ಅದಕ್ಕೆ ಮಣ್ಣು ಬೇಕು, ನೀರು ಬೇಕು” ಎಂದು ಆಮೆ ಹೇಳಿದರೆ ಕೋತಿಗೆ ಕೋಪ ಏರಿತು. “”ನೀನು ಬಹು ದೊಡ್ಡ ಕೃಷಿ ಪಂಡಿತನ ಹಾಗೆ ಮಾತನಾಡಬೇಡ. ನನಗೂ ಬಾಳೆಕೃಷಿ ಮಾಡಿ ಅನುಭವ ಇದೆ” ಎಂದು ಗದರಿಸಿ, ಬಾಳೆಗಿಡವನ್ನು ತಂದು ಮರದ ಕೊಂಬೆಯಲ್ಲಿದ್ದ ಟೊಳ್ಳಿನಲ್ಲಿ ಇಟ್ಟು ಮಲಗಿ ನಿದ್ರೆ ಮಾಡಿತು.

ಕೋತಿ ನೆಟ್ಟ ಬಾಳೆಗಿಡ ಚಿಗುರಲೇ ಇಲ್ಲ. ಆಮೆ ಕಷ್ಟಪಟ್ಟು ನೆಟ್ಟು, ಗೊಬ್ಬರ, ನೀರು ಹಾಕಿ ಉಪಚರಿಸಿದ ಬಾಳೆಗಿಡ ಎತ್ತರವಾಗಿ ಬೆಳೆಯಿತು. ಬೆಳಗಾಗುವಾಗ ಆಮೆ ಎದ್ದು ನೋಡಿದರೆ ಗೊನೆ ಹಾಕಿ ಅದರಲ್ಲಿ ಹೊಂಬಣ್ಣದ ಹಣ್ಣುಗಳು ಲಕಲಕ ಹೊಳೆಯುತ್ತಿದ್ದವು. ಆದರೆ ಅದನ್ನು ಹೇಗೆ ಕೊಯ್ಯುವುದೆಂದು ಅದಕ್ಕೆ ತಿಳಿಯಲಿಲ್ಲ. ಕೋತಿಯನ್ನು ಕರೆಯಿತು. “”ನಾನು ನೆಟ್ಟ ಬಾಳೆಗಿಡ ಗೊನೆ ಹಾಕಿದೆ. ಆದರೆ ಅದು ಎತ್ತರದಲ್ಲಿರುವ ಕಾರಣ ನನ್ನಿಂದ ಹಣ್ಣು ಕೊಯ್ಯಲು ಆಗುವುದಿಲ್ಲ. ನೀನು ಹಣ್ಣು ಕೊಯ್ಯಲು ಸಹಾಯ ಮಾಡಿದರೆ ನಿನಗೂ ಅರ್ಧ ಪಾಲು ಕೊಟ್ಟುಬಿಡುತ್ತೇನೆ” ಎಂದು ಕೋರಿತು.

ಕೋತಿ, “”ನಾನು ಒಂದೊಂದಾಗಿ ಹಣ್ಣುಗಳನ್ನು ಕಿತ್ತು ಕೆಳಗೆ ಹಾಕುತ್ತೇನೆ. ನೀನು ಆರಿಸಿಕೋ. ಆದರೆ ನನಗೆ ಅರ್ಧ ಪಾಲು ಕೊಡುತ್ತೇನೆ ಎಂದು ದೊಡ್ಡ ಉದಾರಿಯ ಹಾಗೆ ಹೇಳಿದೆಯಲ್ಲ, ನನ್ನಂತಹ ದೊಡ್ಡ ವ್ಯಕ್ತಿಗೆ ಬೇರೆಯ ವರ ಶ್ರಮದಲ್ಲಿ ಕಿಂಚಿತ್ತು ಕೂಡ ಆಸೆಯಿಲ್ಲ ಎಂದು ತಿಳಿದು ಕೊಂಡರೆ ಒಳ್ಳೆಯದು” ಎಂದು ಹೇಳಿತು. “”ಸರಿಯಣ್ಣ, ತಿಳಿಯದೆ ತಪ್ಪು ಮಾತು ಹೇಳಿಬಿಟ್ಟೆ” ಎಂದು ಹೇಳಿ ಆಮೆ ಹಣ್ಣು ಆರಿಸಿಕೊಳ್ಳಲು ಮುಂದಾಯಿತು. ಆದರೆ ಕೋತಿ ಗೊನೆಯ ಮೇಲೆ ಕುಳಿತು ಹಣ್ಣುಗಳನ್ನು ಒಂದೊಂದಾಗಿ ಸುಲಿದು ತಿಂದು, ಸಿಪ್ಪೆಯನ್ನು ಕೆಳಗೆ ಹಾಕಿತು. ಆಮೆಗೆ ಒಂದು ಹಣ್ಣು ಕೂಡ ಸಿಗಲಿಲ್ಲವೆಂದು ದುಃಖ ತಡೆಯಲಾಗಲಿಲ್ಲ. ಉಪಾಯವಾಗಿ ಕೋತಿಯನ್ನು ಕೆಳಗೆ ಕರೆಯಿತು. “”ಮೋಸಗಾರನೇ, ನಿನಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ” ಎಂದು ಹೇಳಿ ಅದರ ಎರಡು ದವಡೆಗಳಿಗೆ ಒಂದು ಕಲ್ಲು ತಂದು ಗುದ್ದಿತು. ಕೋತಿಯ ದವಡೆಗಳು ಚಪ್ಪಟೆಯಾಗಿ ಹೋದವು.

ಕೋತಿ ಸುಮ್ಮನೆ ಕೂಡಲಿಲ್ಲ. ತನ್ನ ಬಳಗದವರ ಬಳಿಗೆ ಹೋಯಿತು. “”ನೋಡಿದಿರಾ, ಆಮೆಯೊಂದು ಕೋತಿ ಕುಲಕ್ಕೆ ಅವಮಾನವೆಸಗಿದೆ. ನನ್ನ ದವಡೆಗೆ ಕಲ್ಲಿನಿಂದ ಜಜ್ಜಿದೆ. ಇದನ್ನು ನೋಡಿಕೊಂಡು ಸುಮ್ಮನಿರುತ್ತೀರಾ, ಅಲ್ಲ ಏನಾದರೂ ಪ್ರತೀಕಾರ ಮಾಡುತ್ತೀರಾ?” ಎಂದು ಕೇಳಿತು.

ಕೋತಿಗಳು ಕೋಪದಿಂದ ಹಾರಾಡಿದವು. “”ಸುಮ್ಮನಿರ ಬಾರದು. ನಮ್ಮವನ ಮೇಲೆ ಹಲ್ಲೆ ಮಾಡಿದ ಆಮೆಯನ್ನು ಹಾಗೆಯೇ ಬಿಡಬಾರದು. ಯೋಗ್ಯ ಶಿಕ್ಷೆ ವಿಧಿಸಬೇಕು” ಎನ್ನುತ್ತ ಎಲ್ಲವೂ ಜತೆಗೂಡಿ ಆಮೆಯನ್ನು ಹುಡುಕಿಕೊಂಡು ಹೋದವು. ಒಂದೆಡೆ ಮಲಗಿದ್ದ ಅದನ್ನು ಹಿಡಿದು ಒಂದು ಕಲ್ಲು ತಂದು ಜೋರಾಗಿ ಜಜ್ಜತೊಡಗಿದವು. ಆಮೆ ಪಕಪಕನೆ ನಕ್ಕಿತು. “”ಇಂತಹ ಶಿಕ್ಷೆಗೆಲ್ಲ ಸಾಯುವವನು ನಾನಲ್ಲವಣ್ಣ. ನನ್ನ ಚಿಪ್ಪು ತುಂಬ ಗಟ್ಟಿಯಾಗಿದೆ. ಏನು ಬೇಕಿದ್ದರೂ ಮಾಡಿ. ಆದರೆ ದಯವಿಟ್ಟು ಕೊಳಕ್ಕೆ ತೆಗೆದುಕೊಂಡು ಹಾಕಬೇಡಿ” ಎಂದು ಬೇಡಿಕೊಂಡಿತು. “”ಓಹೋ, ಕೊಳಕ್ಕೆಸೆದರೆ ಇದು ಬದುಕುವುದಿಲ್ಲ ಅಲ್ಲವೆ? ಮೊದಲು ಆ ಕೆಲಸ ಮಾಡೋಣ” ಎಂದು ಕೋತಿಗಳು ಆಮೆಯನ್ನು ಎತ್ತಿ ತಂದು ಕೊಳದ ನೀರಿಗೆ ಹಾಕಿದವು. ಅದು ಮುಳುಗಿ ಸಾಯುವ ಬದಲು ತೇಲತೊಡಗಿತು. “”ಬುದ್ಧಿಗೆಟ್ಟವರೇ, ನೀರಿಗೆ ಎಸೆದ ಕೂಡಲೇ ಸಾಯುತ್ತೇನಾ? ನನ್ನ ಮೇಲೆ ಒಂದು ಕಲ್ಲು ಇಟ್ಟು ಒಂದು ಹಗ್ಗದಿಂದ ಕಟ್ಟಿ. ಹಗ್ಗದ ಇನ್ನೊಂದು ತುದಿಯನ್ನು ನಿಮ್ಮೆಲ್ಲರ ಸೊಂಟಕ್ಕೆ ಕಟ್ಟಿಕೊಳ್ಳಿ. ಆಗ ನೋಡಿ ನಾನು ಮುಳುಗಿ ಸಾಯುವುದನ್ನು” ಎಂದು ಕೂಗಿತು.

ಕೋತಿಗಳು ಮತ್ತೆ ಆಮೆಯನ್ನು ಹಿಡಿದು ಅದರ ಬೆನ್ನಿನ ಮೇಲೆ ಕಲ್ಲು ಕಟ್ಟಿ ಹಗ್ಗದ ತುದಿಯನ್ನು ಸೊಂಟಕ್ಕೆ ಕಟ್ಟಿಕೊಂಡು ನೀರಿಗಿಳಿಸಿದವು. ಆಮೆ ಭರದಿಂದ ಕೊಳದ ಆಳದಲ್ಲಿ ಮುಳುಗಿಬಿಟ್ಟಿತು. ಅದರ ಜೊತೆಗೆ ಕೋತಿಗಳು ಕೂಡ ನೀರಿಗೆ ಬಿದ್ದು ಮುಳುಗಿ ಸತ್ತೇಹೋದವು. ಸೊಂಟಕ್ಕೆ ಹಗ್ಗ ಕಟ್ಟಿದ ಕಾರಣ ಅವುಗಳಿಗೆ ಬಿಡಿಸಿಕೊಳ್ಳಲು ಆಗಲೇ ಇಲ್ಲ. ಜಾಣ ಆಮೆಗೆ ಏನೂ ಅಪಾಯವಾಗಿರಲಿಲ್ಲ. ಹಗ್ಗ ಬಿಚ್ಚಿಕೊಂಡು ಸಂತೋಷದಿಂದ ಮೇಲೆ ಬಂದಿತು.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next