ಬೆಂಗಳೂರು: ಸರ್ಕಾರ ಮತ್ತು ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ದೇಶ ಸುಭೀಕ್ಷವಾಗಿರುತ್ತದೆ ಎಂದು ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಹೇಳಿದರು. ನಗರದ ಪದ್ಮನಾಭ ನಗರದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ದೇಶ, ರಾಜ್ಯ ಸುಭೀಕ್ಷವಾಗಿರಬೇಕಾದರೆ ತಳಮಟ್ಟದ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಮೊದಲು ಸ್ಪಂದಿಸಬೇಕು. ಇಲ್ಲವಾದರೆ ಅಭಿವೃದ್ಧಿ ಮರೀಚಿಕೆಯಾಗುತ್ತದೆ ಎಂದರು. ಅಭಿವೃದ್ಧಿ ಕೆಲಸದೊಂದಿಗೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ.
ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾಯಿತ ನಾಯಕರು ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಕೆಲಸ ಮಾಡಬೇಕು. ಸಾಮಾಜಿಕ ಕಳಕಳಿಯುಳ್ಳವರನ್ನು, ಗಣ್ಯರನ್ನು ಗುರುತಿಸಿ ಸನ್ಮಾನಿಸಿದರೆ ಸಾಲದು. ಅವರ ಉತ್ತಮ ನಡವಳಿಕೆಗಳು ಮಕ್ಕಳಿಗೆ ದಾರಿದೀಪವಾಗಬೇಕು. ಆ ನಿಟ್ಟಿನಲ್ಲಿ ಮಹಾನ್ ನಾಯಕರ ವ್ಯಕ್ತಿತ್ವಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅಗತ್ಯ ಪ್ರೋತ್ಸಾಹ ನೀಡುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಕುಮಾರಸ್ವಾಮಿ ಲೇಔಟ್ ಪಾಲಿಕೆ ಸದಸ್ಯ ಎಲ್.ಶ್ರೀನಿವಾಸ್ ಅವರು ತಮ್ಮ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಜತೆಗೆ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕೆಲಸವವನ್ನು ಮಾಡಲಿ.
ಕ್ಷೇತ್ರದ ಜನರ ಸಮಸ್ಯೆಗಳಿಗೂ ಸ್ಪಂದಿಸಿ, ಜನಾನುರಾಗಿ ನಾಯಕರಾಗಿ ಬೆಳೆಯಲಿ ಎಂದು ಹಾರೈಸಿದರು.ಕಾರ್ಯಕ್ರಮದಲ್ಲಿ ಅದಮ್ಯಚೇತನ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಹಾಸ್ಯನಟ ಮಾಸ್ಟರ್ ಹಿರಣ್ಣಯ್ಯ, ನಟರಾದ ಶ್ರೀನಿವಾಸಮೂರ್ತಿ, ಸಾಧುಕೋಕಿಲ, ಶ್ರೀನಗರ ಕಿಟ್ಟಿ, ಸಾಹಿತಿ ಬಿ.ಆರ್.ಲಕ್ಷ್ಮಣ್ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ಪದ್ಮನಾಭ ನಗರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕ ವಿತರಿಸಲಾಯಿತು. ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶಾಸಕ ರವಿಸುಬ್ರಮಣ್ಯ, ಪಿಇಎಸ್ ಕಾಲೇಜು ಮುಖ್ಯಸ್ಥ ದೊರೆಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.