Advertisement

ಹಿಂದಿ ಭಾಷೆ ಹೇರಿಕೆಯಿಂದ ದೇಶ ಇಬ್ಭಾಗ‌

12:24 PM May 24, 2017 | |

ಬೆಂಗಳೂರು: ಕೇಂದ್ರ ಸರ್ಕಾರ ಹಿಂದಿ ಭಾಷೆ ಕಡ್ಡಾಯಗೊಳಿಸಿದರೆ ದೇಶ ಇಬ್ಭಾಗವಾಗುವ ಸಾಧ್ಯತೆಗಳಿವೆ ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸರಕಾರದ ಹಿಂದಿ ಹೇರಿಕೆಯ ವಿರುದ್ಧ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ನಗರದ ಟೌನ್‌ ಹಾಲ್‌ ಮುಂಭಾಗ ಮಂಗಳವಾರ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

Advertisement

ದೇಶದ ಎಲ್ಲ ರಾಜ್ಯಗಳು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದು, ಸಾಮರಸ್ಯದಿಂದ ಆಡಳಿತ ನಡೆಸುತ್ತಿವೆ. ಆದರೆ ಕೇಂದ್ರದಲ್ಲಿ ಆಡಳಿತಕ್ಕೆ ಬರುವ ಸರ್ಕಾರಗಳು ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ಪದೇ ಪದೆ ತಾರತಮ್ಯ ಧೋರಣೆ ಅನುಸರಿಸುತ್ತಿವೆ. ಇದೀಗ ಹಿಂದಿ ಭಾಷೆ ಹೇರಿಕೆಯ ಮೂಲಕ ದ್ರಾವಿಡ ಭಾಷೆಗಳ ಮೇಲೆ ಸವಾರಿ ಮಾಡಲು ಯತ್ನಿಸುತ್ತಿರುವುದು ಸರಿಯಲ್ಲ.

ಇದರಿಂದ ಮುಂದಿನ ದಿನಗಳಲ್ಲಿ ದಕ್ಷಿಣ ರಾಜ್ಯಗಳು ಒಕ್ಕೂಟ ವ್ಯವಸ್ಥೆಯಿಂದ ಹೊರಬಂದು, ದೇಶ ಎರಡು ಇಬ್ಭಾಗವಾಗುವ ದಟ್ಟ ಸೂಚನೆಗಳಿವೆ ಎಂದು ಅಭಿಪ್ರಾಯಪಟ್ಟರು. ಈಗಾಗಲೇ ಜಾರಿಯಲ್ಲಿರುವ ತ್ರಿ ಭಾಷಾ ಸೂತ್ರವನ್ನು ದಕ್ಷಿಣ ರಾಜ್ಯಗಳು ಒಪ್ಪಿಕೊಂಡಿವೆ.

ಆದರೆ ಉತ್ತರ ಭಾರತದ ರಾಜ್ಯಗಳು ದಕ್ಷಿಣ ಭಾರತದ ಯಾವುದಾದರೂ ಒಂದು ಭಾಷೆ ಕಲಿಯಬೇಕು ಎಂಬ ನಿಯಮವಿದ್ದರೂ ಅದು ಪಾಲನೆಯಾಗುತ್ತಿಲ್ಲ. ಹೀಗಾಗಿ ನಾವು ಕೂಡ ಹಿಂದಿ ಭಾಷೆ ತಿರಸ್ಕರಿಸಬೇಕು. ಅಲ್ಲದೆ ಸೆ.14ರಂದು ದೇಶಾದ್ಯಂತ ಹಿಂದಿ ಭಾಷಾ ದಿನ ಆಚರಣೆಗೆ ಸೆಡ್ಡು ಹೊಡೆದು ಕರಾಳ ದಿನಾಚರಣೆ ಆಚರಿಸಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನುಬಳಿಗಾರ್‌ ಮಾತನಾಡಿ, ಬಹುಭಾಷಾ ಸಂಸ್ಕೃತಿ ಹೊಂದಿರುವುದು ದೇಶದ ಹೆಮ್ಮೆಯ ವಿಚಾರ. ಹೀಗಾಗಿಯೇ ಕನ್ನಡ, ಹಿಂದಿ ಸೇರಿದಂತೆ ಒಟ್ಟು 22 ಭಾಷೆಗಳಿಗೆ ಸಂವಿಧಾನದ ಮಾನ್ಯತೆ ನೀಡಲಾಗಿದೆ. ಹೀಗಿದ್ದರೂ  ಹಿಂದಿ ಭಾಷೆ ಕಡ್ಡಾಯಗೊಳಿಸಿರುವುದು ಸರಿಯಿಲ್ಲ ಎಂದು ಟೀಕಿಸಿದರು.

Advertisement

ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್‌ ಮಾತನಾಡಿ, ದೇಶದ ಜನರ ಆಹಾರ ಹಕ್ಕಿನ ಮೇಲೆ ಗದಾಪ್ರಹಾರ ನಡೆಸಿದ್ದ ಕೇಂದ್ರಸರ್ಕಾರ, ಇದೀಗ ಹಿಂದಿ ಹೇರಿಕೆಯ ಮೂಲಕ ದ್ರಾವಿಡ ಭಾಷೆಗಳ ಹಕ್ಕು ಕಸಿದುಕೊಳ್ಳಲು ಮುಂದಾಗಿದೆ. ಇದರ ವಿರುದ್ಧ ರಾಷ್ಟ್ರೀಯ ಮಟ್ಟದ ಒಕ್ಕೂಟ ರಚಿಸಿಕೊಂಡು ಹೋರಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಲ್‌.ಹನುಮಂತಯ್ಯ, ಹಿರಿಯ ಶಿಕ್ಷಣ ತಜ್ಞ ಜಿ.ರಾಮಕೃಷ್ಣ,ಸಾಹಿತಿ ಜರಗನಹಳ್ಳಿ ಶಿವಶಂಕರ್‌,ಬೆಂ.ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ, ಮಾಜಿ ಅಧ್ಯಕ್ಷ ಡಾ.ಕೋ.ವೆಂ.ರಾಮಕಷ್ಣೇಗೌಡ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next