ಮಾಗಡಿ: ಡಬಲ್ ಎಂಜಿನ್ ಬಿಜೆಪಿ ಸರ್ಕಾರದಿಂದ ದೇಶ ಮತ್ತು ರಾಜ್ಯ ಅಭಿವೃದ್ಧಿಪಥದತ್ತ ಸಾಗುತ್ತಿದೆ ಎಂದು ನಟಿ ತಾರಾ ತಿಳಿಸಿದರು.
ಪಟ್ಟಣದ ಖಾಸಗಿ ಬಸ್ಸು ನಿಲ್ದಾಣದಲ್ಲಿ ಬಿಜೆಪಿ ಯುವ ನಾಯಕ ಕೆ.ಆರ್.ಪ್ರಸಾದ್ ಗೌಡ ತಮ್ಮ ಸ್ವಂತ ಹಣದಲ್ಲಿ ಜಮೀನು ಖರೀದಿಸಿ ನಿವೇಶನ ಹಂಚಿಕೆ ಮಾಡುವ ಮೂಲಕ ಬಡವರಿಗೆ ಹಕ್ಕುಪತ್ರದ ದಾಖಲೆಗಳನ್ನು ವಿತರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮುಂದಾಲೋಚನೆಯಿಂದ ಜನರ ಆಷ್ಟೋತ್ತರಗಳನ್ನು ಈಡೇರಿಸುತ್ತಾ ಬಂದಿದ್ದಾರೆ. ಈ ಮೂಲಕ ದೇಶಾದ್ಯಂತ ಬಿಜೆಪಿಯ ಅಲೆ ಎದ್ದಿದೆ ಎಂದರು.
ಬಿಜೆಪಿ ಅಲೆಯನ್ನು ವಿರೋಧ ಪಕ್ಷದ ನಾಯಕರು ತಡೆಯಲು ಸಾಧ್ಯವಿಲ್ಲ. ದೇಶದ ಆರ್ಥಿಕ ಸುಧಾರಣೆಗಾಗಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿಯೇ ಹೊರತು, ಬಡವರಿಗೆ ಅನ್ಯಾಯ ಮಾಡುತ್ತಿಲ್ಲ. ಇತರೆ ದೇಶಗಳು ದಿವಾಳಿಯಾಗಿದ್ದು, ಒಪ್ಪತ್ತಿನ ಗಂಜಿಗೂ ಪರದಾಡುವ ಸ್ಥಿತಿಯಿದೆ. ಆದರೆ, ನಮ್ಮ ದೇಶದ ಆರ್ಥಿಕ ಸುಧಾರಣೆಯಲ್ಲಿ ತಮ್ಮದೇ ಆದ ಗತ್ತು ಘನತೆಯನ್ನು ಉಳಿಸಿಕೊಂಡು ಬಂದಿದೆ. ಇದಕ್ಕೆ ಕಾರಣ ಡಬಲ್ ಇಂಜಿನ್ ಸರ್ಕಾರದ ಆಡಳಿತ ವೈಖರಿ ಎಂದರು.
ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಮಾಗಡಿಯಲ್ಲಿ ಕೆ. ಆರ್. ಪ್ರಸಾದ್ ಗೌಡ ಅವರು ಪಕ್ಷದ ಸಂಘಟ ನೆಯಲ್ಲಿ ತಮ್ಮ ದಕ್ಷತೆ ಮೆರೆದಿದ್ದಾರೆ. ಜತೆಗೆ ಬಡವರ, ದಲಿತರ ಸೇವೆ, ವಿಧವೆಯರಿಗೆ ವಿಶೇಷ ಆದ್ಯತೆ ಮೇರೆಗೆ ಉಚಿತವಾಗಿ ನಿವೇಶನದ ನೀಡುತ್ತಿ ರುವುದು ಅವರ ಸಮಾಜಮುಖೀ ಸೇವೆಗೆ ಹಿಡಿದ ಕನ್ನಡಿಯಾಗಿದೆ. ರಾಜಕೀಯಕ್ಕಾಗಿ ಅಲ್ಲ, ನನ್ನದು ಸಮಾಜಮುಖೀ ಸೇವೆಯಷ್ಟೆ ಎನ್ನುವ ಮೂಲಕ ಮಾನವೀಯತೆ ಮರೆದಿದ್ದಾರೆ ಎಂದ ಅವರು, ಮಾಗಡಿ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಕೆ.ಆರ್.ಪ್ರಸಾದ್ ಗೌಡ ಅವರಿಗೆ ಟಿಕೆಟ್ ನೀಡುವುದು ನಾವು, ನೀವ್ಯಾರು ಅಲ್ಲ. ಅದಕ್ಕಾಗಿಯೇ ಹೈಕಮಾಂಡ್ ಇದೆ. ಇವರ ಜನಪರವಾದ ಸೇವೆ, ಪಕ್ಷದ ಸಂಘಟನೆ ಗುರುತಿಸಿ ಟಿಕೆಟ್ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದರು.
3 ಸಾವಿರ ಮಂದಿಗೆ ನಿವೇಶನ: ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ.ಆರ್.ಪ್ರಸಾದ್ ಗೌಡ ಮಾತನಾಡಿ, ನನಗೆ ರಾಜಕೀಯವಾಗಿ ಕ್ಷೇತ್ರದ ಜನಶಕ್ತಿ ನೀಡಬೇಕಿದೆ. ನನಗೆ ಅಧಿಕಾರ ಸಿಗಲಿ ಅಥವಾ ಸಿಗದಿರಲಿ ನಿರಂತರವಾಗಿ ಸಮಾಜಮುಖೀ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಈಗಾಗಲೇ ಸಾವಿರಾರು ಮಹಿಳೆಯರಿಗೆ ಮೂಗುತಿ ನೀಡಿದ್ದೇನೆ. ಧರ್ಮಸ್ಥಳಕ್ಕೆ ಪ್ರವಾಸ ಕಳಿಸಿ ಕೊಟ್ಟಿದ್ದೇನೆ. ದಿವ್ಯಾಂಗ ಕುಟುಂಬಕ್ಕೆ ವಿಧವೆಯರಿಗೆ ನಿವೇಶನ ರಹಿತರಿಗೆ ನಮ್ಮ ತಂದೆ ತಾಯಿ ಹೆಸರಿನಲ್ಲಿದ್ದ ಭೂಮಿಯನ್ನು ಭೂ ಪರಿವರ್ತನೆ ಮಾಡಿಸಿ ನಿವೇಶನ ಹಂಚಿಕೆ ಮಾಡುವ ಮೂಲಕ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮಕ್ಕೆ ನಟಿ ತಾರಾ ಅವರು ಚಾಲನೆ ನೀಡಿದ್ದಾರೆ.
ಸುಮಾರು 3 ಸಾವಿರ ಮಂದಿಗೆ ಹಂತ- ಹಂತವಾಗಿ ನಿವೇಶನ ನೀಡುವ ಮೂಲಕ ಅವರಿಗೆ ಸೂರು ಕೊಡುವ ಗುರಿ ಹಾಕಿಕೊಂಡಿದ್ದೇನೆ ಎಂದರು. ಬಿಜೆಪಿ ರಾಜ್ಯ ವಕ್ತಾರರಾದ ಆಶ್ವಿನಿ, ಶಂಕರ್, ಪಿಲ್ಮ ಸಿಟಿ ನಿರ್ದೇಶಕ ಸುನೀಲ್ ಪುರಾಣಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಎಂ. ಧನಂಜಯ, ವೀಣಾ, ಭಾಗ್ಯಮ್ಮ, ಜಯರಾಮ್ ಬಸವರಾಜು, ಶಿವಕುಮಾರ್, ನಾರಾಯಣ್, ಭಾಸ್ಕರ್, ಪಾಂಡುರಂಗ, ಮೂರ್ತಿ ಲೋಕೇಶ್, ಕುಮಾರ್ ಹಾಗೂ ಇತರರು ಇದ್ದರು.