Advertisement

Karnataka ಗುಜರಿ ಸೇರಲಿರುವ ವಾಹನಗಳ ಲೆಕ್ಕ ಆರಂಭ

10:51 PM Nov 13, 2023 | Team Udayavani |

ಬೆಂಗಳೂರು: ವಿವಿಧ ಇಲಾಖೆಗಳಲ್ಲಿರುವ ಅವಧಿ ಮೀರಿದ ವಾಹನಗಳ ಪಟ್ಟಿ ಮಾಡುವ ಪ್ರಕ್ರಿಯೆ ಸದ್ದಿಲ್ಲದೆ ಆರಂಭವಾಗಿದ್ದು, ತಿಂಗಳ ಅಂತರದಲ್ಲಿ ಹಂತಹಂತವಾಗಿ ಆ ವಾಹನಗಳನ್ನು ಗುಜರಿಗೆ ಸಾಗಿಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ.

Advertisement

ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಅವಧಿ ಮೀರಿದ ಸುಮಾರು 15 ಸಾವಿರ ವಾಹನಗಳಿದ್ದು, ಅವುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ತಲಾ 5 ಸಾವಿರದಂತೆ ಗುಜರಿಗೆ ಹಾಕಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಬೆನ್ನಲ್ಲೇ ಮೊದಲ ಹಂತದಲ್ಲಿ ಗುಜರಿಗೆ ಸಾಗಿಸಬೇಕಾದ ಅತ್ಯಂತ ಹಳೆಯ ವಾಹನಗಳನ್ನು ಸಾರಿಗೆ ಇಲಾಖೆ ಪಟ್ಟಿ ಮಾಡುತ್ತಿದೆ. ಹೊಸ ವರ್ಷಕ್ಕೂ ಮೊದಲೇ ಗುಜರಿಗೆ ಹಾಕುವ ಕಾರ್ಯ ಆರಂಭಗೊಳ್ಳಲಿದೆ.
ವಾಹನಗಳ ಬಗ್ಗೆ ಎರಡು-ಮೂರು ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ. ಇದಾದ ಬಳಿಕ ಆಯಾ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಗುಜರಿಗೆ ಕಳುಹಿಸಲಾಗುವುದು. ಬೆಂಗಳೂರಿನಿಂದಲೇ ಈ ಕಾರ್ಯ ಆರಂಭವಾಗಲಿದೆ. ಜಿಲ್ಲಾ ಕೇಂದ್ರಗಳಲ್ಲಿರುವ ಅವಧಿ ಮೀರಿದ ವಾಹನಗಳನ್ನೂ ಮುಂದಿನ ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ಹಲವು ಇಲಾಖೆಗಳಲ್ಲಿ ಸುಮಾರು 20-25 ವರ್ಷ ಮೇಲ್ಪಟ್ಟ ವಾಹನಗಳೂ ಇವೆ. ಕೆಲವೆಡೆ 15 ವರ್ಷ ಮೇಲ್ಪಟ್ಟವು ಇವೆ. ಅಂಥವುಗಳನ್ನು ಈಗ ಪಟ್ಟಿ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಹೆಚ್ಚು ಹಳೆಯದಾದ ಅಥವಾ ಅತ್ಯಧಿಕ ಕಿ.ಮೀ. ಕ್ರಮಿಸುವ ವಾಹನಗಳನ್ನು ಗುಜರಿಗೆ ಹಾಕಲಾಗುತ್ತದೆ. ಈಗಾಗಲೇ ದೇವನಹಳ್ಳಿಯ ವಿಜಯಪುರ ಬಳಿ ಗುಜರಿ ಕೇಂದ್ರ ಸಿದ್ಧಗೊಂಡಿದೆ. ಹೊಸ ವರ್ಷಕ್ಕೂ ಮೊದಲೇ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಾರಿಗೆ
ಇಲಾಖೆ ಹೆಚ್ಚುವರಿ ಆಯುಕ್ತ (ಪ್ರವ ರ್ತನ) ಸಿ. ಮಲ್ಲಿಕಾರ್ಜುನ ಅವರು “ಉದಯವಾಣಿ’ಗೆ ತಿಳಿಸಿದರು.

ಉಳಿದ ಹತ್ತು ಸಾವಿರ ವಾಹನಗಳನ್ನು ಮುಂದಿನ ಎರಡು ವರ್ಷಗಳಲ್ಲಿ ತಲಾ ಐದು ಸಾವಿರದಂತೆ ಗುಜರಿಗೆ ಹಾಕಲಾಗುವುದು. ಈ ಮಧ್ಯೆ ಸಾಮಾನ್ಯರು ಕೂಡ ತಮ್ಮ ಅವಧಿ ಮೀರಿದ ವಾಹನಗಳನ್ನು ಗುಜರಿಗೆ ಹಾಕಲು ಯಾವುದೇ ತೊಂದರೆ ಇಲ್ಲ. ಅದಕ್ಕೂ ಈ ಪ್ರಕ್ರಿಯೆಗೂ ಸಂಬಂಧ ಇಲ್ಲ ಎಂದೂ ಅವರು ಮಾಹಿತಿ ನೀಡಿದರು.

200 ಕೋಟಿ ರೂ. ನೀಡಲು ಕೇಂದ್ರಕ್ಕೆ ಪತ್ರ
ಗುಜರಿಗೆ ಹಾಕಿದ ವಾಹನಗಳ ಬದಲಿಗೆ ವಿದ್ಯುತ್‌ಚಾಲಿತ ವಾಹನಗಳ ಖರೀದಿಸಬೇಕಿದೆ. ಸಚಿವ ಸಂಪುಟದ ಅನುಮೋದನೆ ದೊರೆತ ಬೆನ್ನಲ್ಲೇ ಅಗತ್ಯವಿರುವ ಅನುದಾನಕ್ಕಾಗಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದು, ಸುಮಾರು 200 ಕೋಟಿ ರೂ. ಮೊದಲ ಹಂತದಲ್ಲಿ ಕೋರಲಾಗಿದೆ. ಪೂರಕ ಸ್ಪಂದನೆ ಸಿಕ್ಕಿದೆ. ಈ ಪ್ರೋತ್ಸಾಹಧನ ಬಿಡುಗಡೆಯಾಗುತ್ತಿದ್ದಂತೆ ಆಯಾ ಇಲಾಖೆಗಳಿಗೆ ಹಂಚಿಕೆ ಮಾಡಲು ಸಾರಿಗೆ ಇಲಾಖೆ ಉದ್ದೇಶಿಸಿದೆ.

Advertisement

ರಾಜ್ಯದಲ್ಲಿ ಗುಜರಿ ಕೇಂದ್ರ ಆರಂಭವಾದ ಬಳಿಕ ಅವಧಿ ಮೀರಿದ ಬೆರಳೆಣಿಕೆಯಷ್ಟು ವಾಹನಗಳನ್ನು ಮಾತ್ರ ಗುಜರಿಗೆ ಹಾಕಲಾಗಿದೆ. ಈ ಮಧ್ಯೆ ತುಮಕೂರಿನ ಕೊರಟಗೆರೆ ಮತ್ತು ಕೊಪ್ಪಳದಲ್ಲಿ ತಲಾ ಒಂದು ಘಟಕ ತೆರೆಯಲು ಉದ್ದೇಶಿಸಲಾಗಿದೆ. ಇದಕ್ಕೆ ಅಗತ್ಯವಿರುವ ಯಂತ್ರೋಪಕರಣಗಳ ವ್ಯವಸ್ಥೆಯನ್ನೂ ಅಲ್ಲಿ ಮಾಡಲಾಗಿದೆ. ದೇಶಾದ್ಯಂತ ಒಟ್ಟಾರೆ 64 ಗುಜರಿ ಕೇಂದ್ರಗಳು ತಲೆಯೆತ್ತಿವೆ.

– ವಿಜಯ ಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next