Advertisement

ಐತಿಹಾಸಿಕ ಸಮಾವೇಶಕ್ಕೆ ಕ್ಷಣಗಣನೆ

11:03 AM Sep 24, 2017 | Team Udayavani |

ಕಲಬುರಗಿ: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಆಗ್ರಹಿಸಿ ಸೆ. 24 ರಂದು ನಗರದಲ್ಲಿ ಹಮ್ಮಿಕೊಳ್ಳಲಾದ ಲಿಂಗಾಯತ ಮಹಾರ್ಯಾಲಿ-ಮಹಾ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಮಾವೇಶದ ಸಮನ್ವಯ ಸಮಿತಿ ಸಂಘಟಕರು, ಸದಸ್ಯರು ಮಹಾನಗರಕ್ಕೆ ಆಗಮಿಸಿ ಕಡೆ ಹಂತದ ಸಿದ್ಧತೆಯಲ್ಲಿ ತೊಡಗಿದ್ದಾರೆ.

Advertisement

ಈಗಾಗಲೇ ಬೀದರ, ಬೆಳಗಾವಿ ಹಾಗೂ ಮಹಾರಾಷ್ಟ್ರದ ಲಾತೂರದಲ್ಲಿ ಯಶಸ್ವಿ ಮಹಾರ್ಯಾಲಿ-ಸಮಾವೇಶ ನಡೆದಿದ್ದು, ಈ ಸಮಾವೇಶ ಯಶಸ್ವಿಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನಿರೀಕ್ಷೆಯಂತೆ ಜನಸಾಗರ ಆಗಮಿಸಿದರೆ ಕಲಬುರಗಿ ಮಹಾನಗರದಲ್ಲಿ ಐತಿಹಾಸಿಕ ಸಮಾವೇಶ ಆಗಲಿದೆ. ಸಮಾವೇಶಕ್ಕಾಗಿ ನೂತನ ವಿದ್ಯಾಲಯದ ಮೈದಾನದಲ್ಲಿ ಬೃಹತ್‌ ಸಭಾ ವೇದಿಕೆ ನಿರ್ಮಿಸಲಾಗಿದೆ. ಮಹಾನಗರದಾದ್ಯಂತ ಸ್ವಾಗತ ಕಮಾನುಗಳನ್ನು ಸ್ಥಾಪಿಸಲಾಗಿದ್ದು, ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ.

ಸಚಿವರಾದ ಎಂ.ಬಿ. ಪಾಟೀಲ, ವಿನಯ ಕುಲಕರ್ಣಿ, ಬಸವರಾಜ ಹೊರಟ್ಟಿ, ನಿವೃತ್ತ ಹಿರಿಯ ಐಎಎಸ್‌ ಅಧಿಕಾರಿ ಡಾ| ಶಿವಾನಂದ ಎಂ. ಜಾಮದಾರ, ಗದಗ ತೋಂಟಾರ್ಯಮಠದ ಡಾ| ಸಿದ್ದಲಿಂಗ ಸ್ವಾಮಿಗಳು, ಶತಾಯುಷಿ ಮಹಾರಾಷ್ಟ್ರದ ಡಾ| ಶಿವಲಿಂಗ ಶಿವಾಚಾರ್ಯರು, ಇಳಕಲ್‌ದ ಮಹಾಂತಪ್ಪ ಅಪ್ಪನವರು, ಚಿತ್ರದುರ್ಗದ ಡಾ| ಮುರುಘಾ ಶರಣರು ಶನಿವಾರವೇ ನಗರಕ್ಕೆ ಆಗಮಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಬಸವ ಧರ್ಮದ ಪೀಠಾಧ್ಯಕ್ಷೆ ಮಾತೆ ಮಹಾದೇವಿ, ಭಾಲ್ಕಿಯ ಪಟ್ಟದ್ದೇವರು, ಮುಂಡರಗಿಯ ನಿಜಗುಣಾನಂದ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.

Advertisement

ಸಮಾವೇಶಕ್ಕೆ ರಾಜ್ಯವಲ್ಲದೇ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯ ಸೇರಿದಂತೆ ಇತರ ಭಾಗಗಳಿಂದಲೂ ಜನ ಪಾಲ್ಗೊಳ್ಳಲಿದ್ದು, ಸುಮಾರು 5 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆವಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸುಲಫಲಮಠದಲ್ಲಿ ವ್ಯವಸ್ಥೆ: ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಮಠಾಧೀಶರಿಗೆ ನಗರದ ಸುಲಫಲ ಮಠದಲ್ಲಿ ಉಳಿದುಕೊಳ್ಳಲು ಹಾಗೂ ಪೂಜೆ ಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಸುಲಫ‌ಲಮಠದ ಡಾ| ಸಾರಂಗಧರದೇಶಿಕೇಂದ್ರ ಮಹಾಸ್ವಾಮೀಜಿ ತಿಳಿಸಿದ್ದಾರೆ.  ನಾಲ್ಕು ದಿಕ್ಕುಗಳಲ್ಲೂ ವ್ಯವಸ್ಥೆ: ಮಹಾನಗರಕ್ಕೆ ಆಗಮಿಸುವ ಜನತೆಗೆ ಮಹಾನಗರದ ನಾಲ್ಕು ದಿಕ್ಕುಗಳಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10:00 ಗಂಟೆಯಿಂದಲೇ ಪ್ರಸಾದ ವಿತರಣೆ ಶುರುವಾಗಲಿದ್ದು, ಒಂದೊಂದು ಸ್ಥಳದಲ್ಲಿ ಸಹಸ್ರಾರು ಜನರು ಪ್ರಸಾದ ಮಾಡುವ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಮಹಾರ್ಯಾಲಿ ಮಾರ್ಗ: ಬೆಳಗ್ಗೆ 10:30ಕ್ಕೆ ನೆಹರು ಗಂಜ್‌ನ ಲಾಹೋಟಿ ಕಲ್ಯಾಣ ಮಂಟಪದಿಂದ ಮಹಾರ್ಯಾಲಿ ಆರಂಭವಾಗಿ ಸೂಪರ್‌ ಮಾರ್ಕೇಟ್‌, ಜಗತ್‌ ಮೂಲಕ ನೂತನ ಮಹಾವಿದ್ಯಾಲಯಕ್ಕೆ ಆಗಮಿಸಿ ಮಹಾಸಭೆ ನಡೆಯುವುದು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಸಚಿವ ಡಾ| ಶರಣಪ್ರಕಾಶ ಪಾಟೀಲ, ಶಾಸಕ ಬಿ.ಆರ್‌. ಪಾಟೀಲ ಹಾಗೂ ಇತರರು ಸಭೆ ನಿರ್ವಹಿಸಲಿದ್ದಾರೆ. ಸಮಾವೇಶ ನಂತರ ಜಗತ್‌ ವೃತ್ತದ ಬಸವೇಶ್ವರ ಪುತ್ಥಳಿವರೆಗೂ ಪಾದಯಾತ್ರೆ ತೆರಳಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ.

ಕಾರ್‌ ರ್ಯಾಲಿ: ರವಿವಾರ ನಡೆಯುವ ಮಹಾರ್ಯಾಲಿ ಅಂಗವಾಗಿ ಶನಿವಾರ ನಗರದಲ್ಲಿ ಕಾರ್‌ ರ್ಯಾಲಿ ನಡೆಸಲಾಯಿತು. ವಿವಿ ವಸತಿ ನಿಲಯದಿಂದ ಆರಂಭವಾದ ರ್ಯಾಲಿಗೆ ಶಾಸಕ ಬಸವರಾಜ ಹೊರಟ್ಟಿ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next