ಶಬರಿಮಲೆ: ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಾನಕ್ಕೆ ಮಕರ ಸಂಕ್ರಮಣ ದಿನವಾದ ಬುಧವಾರವೂ ಭಕ್ತ ಸಾಗರ ಹರಿದುಬರುತ್ತಿದ್ದು, ಪಂಪಾ ನದಿ ತೀರದಲ್ಲೇ ಭಕ್ತರು ಸರತಿ ಸಾಲಲ್ಲಿ ನಿಂತಿದ್ದಾರೆ.
ಈ ದಿನ ಸನ್ನಿಧಾನ ತಲುಪಿದರೆ ಸನ್ನಿಧಾನದಲ್ಲಿಯೇ ಮಕರಜ್ಯೋತಿ ದರ್ಶನ ಮಾಡಬಹುದೆಂಬ ಮಹದಾಸೆಯಿಂದ ಭಕ್ತರು ಆಗಮಿಸುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇರುವ ಕಾರಣ ಜನದಟ್ಟಣೆ ಹೆಚ್ಚಿದೆ. ಆದರೂ ಪೊಲೀಸ್ ಇಲಾಖೆ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಬಂದೋಬಸ್ತ್ ಕಲ್ಪಿಸಿದ್ದು ಭಕ್ತರನ್ನು ಸರತಿ ಸಾಲಿನಲ್ಲಿ ಮುಂದೆ ಹೋಗಲು ಅವಕಾಶ ಮಾಡಿಕೊಡುತ್ತಿದ್ದಾರೆ.
ನೀಲಿಮಲೆಯಲ್ಲಿ ಶಬರಿಪೀಠದಿಂದ ಸನ್ನಿಧಾನದವರೆಗೂ ಸರತಿ ಸಾಲು ಇದೆ. ಆನ್ ಲೈನ್ ನಲ್ಲಿ ನೊಂದಣಿ ಮಾಡಿದವರಿಗೂ ಕ್ಷೇತ್ರದ ದರ್ಶನಕ್ಕೆ ಗಂಟೆಗಟ್ಟಲೆ ಕಾಯುವಂತಾಗಿದೆ. ಈ ದಿನ 18 ಮೆಟ್ಟಿಲು ಹತ್ತಬಹುದು, ಆದರೆ ದೇವರ ದರ್ಶನ ಸಂಜೆಯ ಹೊತ್ತಿಗೆ ಆಗಲಿದೆ.
ಒಟ್ಟಿನಲ್ಲಿ ತಿರುವಾಂಕೂರು ದೇವಸ್ವಂ ಬೋರ್ಡ್ ಹಾಗೂ ಕೇರಳ ಸರಕಾರ,ಪತ್ತನಂತಿಟ್ಟ ಜಿಲ್ಲಾಡಳಿತ ಭಕ್ತರ ರಕ್ಷಣೆಗೆ ಒತ್ತು ನೀಡಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿದೆ.ಶಬರಿಮಲೆ ಅಯ್ಯಪ್ಪ ಸನ್ನಿಧಾನವೊಂದರಲ್ಲೇ 15 ಡಿವೈಎಸ್‌ಪಿಗಳು, 36 ಸರ್ಕಲ್ ಇನ್ಸ್‌ಪೆಕ್ಟರ್‌ಗಳೊಂದಿಗೆ 1500 ಪೊಲೀಸ್ ಸಿಬ್ಬಂದಿ ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ. ಅಲ್ಲದೆ 70 ಮಂದಿಯ ಬಾಂಬ್ ನಿಷ್ಕ್ರಿಯ ಪಡೆ, 20 ಸಿಬ್ಬಂದಿಯ ಸಂವಹನ ಪಡೆಯನ್ನು ಸನ್ನಿಧಾನದಲ್ಲಿ ನಿಗಾ ಇರಿಸಲು ನೇಮಿಸಲಾಗಿದೆ.
ರಾಷ್ಟ್ರೀಯ ನೈಸರ್ಗಿಕ ವಿಕೋಪ ನಿರ್ವಹಣಾ ದಳ, ಅಗ್ನಿಶಾಮಕ ದಳದ ಜತೆಗೆ ಗುಪ್ತಚರ ಸಿಬ್ಬಂದಿ ಕೂಡ ಮಫ್ತಿಯಲ್ಲಿ ಕರ್ತವ್ಯ ನಿರತರಾಗಿದ್ದಾರೆ.ಒಟ್ಟಿನಲ್ಲಿ ಕ್ಷೇತ್ರದ ಪಾವಿತ್ರ್ಯತೆ ಹಾಗೂ ಭಕ್ತರ ಸುರಕ್ಷತೆಗಾಗಿ ಪೊಲಿಸ್ ಇಲಾಖೆ,ತಿರುವಾಂಕೂರು ದೇವಸ್ವಂ ಬೋರ್ಡ್, ಪತ್ತನಂತಿಟ್ಟ ಜಿಲ್ಲಾಡಳಿತದಿಂದ ಶ್ರಮಿಸಲಾಗುತ್ತಿದೆ.
– ಪ್ರವೀಣ್ ಚೆನ್ನಾವರ