ಕನ್ನಡ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಮತ್ತು ಬಹುಕೋಟಿ ವೆಚ್ಚದ ಚಿತ್ರ “ಕುರುಕ್ಷೇತ್ರ’ ಅಂತೂ ತೆರೆಗೆ ಬರೋದಕ್ಕೆ ಕ್ಷಣಗಣನೆ ಶುರುವಾಗಿದೆ. ಚಿತ್ರತಂಡದ ಮೂಲಗಳ ಪ್ರಕಾರ ಇಂದು ಮಧ್ಯರಾತ್ರಿಯಿಂದಲೇ “ಕುರುಕ್ಷೇತ್ರ’ದ ಪ್ರದರ್ಶನ ಆರಂಭವಾಗಲಿದ್ದು, ದರ್ಶನ್, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ ಮೊದಲಾದ ಸ್ಟಾರ್ ನಟರ ಅಭಿಮಾನಿಗಳು ಚಿತ್ರವನ್ನು ನೋಡಲು ತುದಿಗಾಲಿನಲ್ಲಿದ್ದಾರೆ.
ಇನ್ನು ಚಿತ್ರದ ವಿತರಣೆಯ ಹೊಣೆಯನ್ನು ಹೊತ್ತುಕೊಂಡಿರುವ ನಿರ್ಮಾಪಕ ಮತ್ತು ವಿತರಕ ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ತೆರೆಗೆ ತರಲು ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇದೇ ವೇಳೆ ಮಾತಿಗೆ ಸಿಕ್ಕ ರಾಕ್‌ಲೈನ್ ವೆಂಕಟೇಶ್, “ಕುರುಕ್ಷೇತ್ರ’ದ ಬಿಡುಗಡೆಯ ಕೊನೆ ಹಂತದ ತಯಾರಿಯ ಬಗ್ಗೆ ಮಾತನಾಡಿದ್ದಾರೆ. “ಕಳೆದ ಕೆಲ ದಿನಗಳಿಂದ “ಕುರುಕ್ಷೇತ್ರ’ದ ಆನ್‌ಲೈನ್ ಬುಕ್ಕಿಂಗ್ ಆರಂಭಗೊಂಡಿದ್ದು, ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.
ಈಗಾಗಲೇ ಆನ್‌ಲೈನ್‌ನಲ್ಲಿ ಮೊದಲ ಮೂರು-ನಾಲ್ಕು ದಿನಗಳ ಪ್ರದರ್ಶನಗಳು ಬಹುತೇಕ ಫುಲ್ ಆಗುತ್ತ ಬಂದಿದೆ. ಸದ್ಯ ಕನ್ನಡದಲ್ಲಿ ಸುಮಾರು 400ಕ್ಕೂ ಅಧಿಕ ಸ್ಕ್ರೀನ್‌ಗಳು ಮತ್ತು ತೆಲುಗಿನಲ್ಲಿ 500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ “ಕುರುಕ್ಷೇತ್ರ’ವನ್ನು ಬಿಡುಗಡೆ ಮಾಡಲು ಯೋಜಿಸಿದ್ದೇವೆ. ಈಗಿನ ಪ್ರಕಾರ 1000ಕ್ಕೂ ಹೆಚ್ಚು ಕಡೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಸಂಖ್ಯೆ ಎರಡು-ಮೂರು ದಿನಗಳ ನಂತರ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು’ ಎನ್ನುತ್ತಾರೆ ರಾಕ್‌ಲೈನ್ ವೆಂಕಟೇಶ್.
“ಕೆಲ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಒತ್ತಾಯದ ಮೇರೆಗೆ ಗುರುವಾರ ಮಧ್ಯರಾತ್ರಿಯಿಂದಲೇ ಚಿತ್ರದ ಪ್ರದರ್ಶನಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಚಿತ್ರಕ್ಕೆ ಎಲ್ಲಾ ಕಡೆಗಳಿಂದಲೂ ಸಾಕಷ್ಟು ಬೇಡಿಕೆ ಬರುತ್ತಿದೆ. ಸದ್ಯಕ್ಕೆ ಕನ್ನಡ ಮತ್ತು ತೆಲುಗು ಆವೃತ್ತಿ ಬಿಡುಗಡೆಗೊಂಡ ಬಳಿಕ ಬೇರೆ ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆಗೊಳಿಸುವುದರ ಬಗ್ಗೆ ಯೋಚಿಸಲಾಗುವುದು’ ಎಂದಿದ್ದಾರೆ ರಾಕ್‌ಲೈನ್. ಒಟ್ಟಾರೆ ಕನ್ನಡದ ಹೈ ವೋಲ್ಟೆಜ್ ಚಿತ್ರ “ಕುರುಕ್ಷೇತ್ರ’ ಹೇಗಿರಲಿದೆ ಅನ್ನೋ ಪ್ರೇಕ್ಷಕರ ಕುತೂಹಲ, ಕಾತುರಕ್ಕೆ ಇಂದು ರಾತ್ರಿಯೇ ತೆರೆ ಬೀಳಲಿದೆ.