Advertisement

“ಬೆಂಗಳೂರು ಟೆಕ್‌ ಸಮಿಟ್‌’ಗೆ ದಿನಗಣನೆ

11:46 AM Nov 14, 2019 | Lakshmi GovindaRaju |

ಬೆಂಗಳೂರು: ದೇಶದ ಅತಿ ದೊಡ್ಡ ತಂತ್ರಜ್ಞಾನ ಮೇಳ “ಬೆಂಗಳೂರು ಟೆಕ್‌ ಸಮಿಟ್‌’ಗೆ ದಿನಗಣನೆ ಆರಂಭವಾಗಿದೆ. ನವೆಂಬರ್‌ 18ರಿಂದ 20ರವರೆಗೆ ಅರಮನೆ ಆವರಣದಲ್ಲಿ ನಡೆಯಲಿರುವ ಈ ಬಾರಿಯ ಮೇಳದಲ್ಲಿ “ರೋಬೋಟಿಕ್‌ ಸ್ಪರ್ಧೆ’ ಪ್ರಮುಖ ಆಕರ್ಷಣೆ ಆಗಿರಲಿದೆ.

Advertisement

ಕಳೆದ ಬಾರಿ ಡ್ರೋನ್‌ ರೇಸ್‌ ಇತ್ತು. ಈ ಸಲ ರೋಬೊಟಿಕ್‌ ಪ್ರಿಮಿಯರ್‌ ಲೀಗ್‌ ನಡೆಯಲಿದೆ. ಈ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಹಾಗೂ ಹೊರರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದು, ನಾನಾ ನಮೂನೆಯ ರೋಬೋಟ್‌ಗಳನ್ನು ಪ್ರದರ್ಶಿಸಲಿದ್ದಾರೆ. ಅಲ್ಲದೆ, ಇದೊಂದು ವಿದ್ಯಾರ್ಥಿಗಳ ನಡುವಿನ ತಂತ್ರಜ್ಞಾನ, ಆವಿಷ್ಕಾರಗಳು, ವಿಚಾರ ವಿನಿಮಯಗಳಿಗೆ ವೇದಿಕೆಯೂ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮೂರು ದಿನಗಳು ನಡೆಯುವ ಮೇಳದಲ್ಲಿ ಸ್ಮಾರ್ಟ್‌ ಐಟಿ, ಸ್ಮಾರ್ಟ್‌ ಬಯೋ, ಜಾಗತಿಕ ಆವಿಷ್ಕಾರಗಳ ಸಮ್ಮಿಲನ ಮತ್ತು ಪರಿಣಾಮ ಎಂಬ ನಾಲ್ಕು ಪ್ರಕಾರಗಳ ಅಧಿವೇಶಗಳು ಆಯೋಜನೆಗೊಂಡಿವೆ. ಇದರಲ್ಲಿ ನಡೆಯುವ ಗೋಷ್ಠಿಗಳಲ್ಲಿ ತಂತ್ರಜ್ಞರೊಂದಿಗೆ ವಿಚಾರ ವಿನಿಮಯ, ಹೊಸ ತಂತ್ರಜ್ಞಾನಗಳ ಪ್ರದರ್ಶನ, ಒಪ್ಪಂದಗಳು, ಉತ್ಪನ್ನಗಳ ಬಿಡುಗಡೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.

ಜಪಾನ್‌, ಕೆನಡ, ಇಸ್ರೇಲ್‌, ನೆದರ್‌ಲ್ಯಾಂಡ್‌, ಜರ್ಮನಿ, ಸ್ವಿಡ್ಜರ್‌ಲ್ಯಾಂಡ್‌ ಸೇರಿ 20ಕ್ಕೂ ಹೆಚ್ಚು ದೇಶಗಳಿಂದ 200 ಸ್ಪೀಕರ್‌ಗಳು, 3,500 ನಿಯೋಗಗಳು, 250ಕ್ಕೂ ಅಧಿಕ ಪ್ರದರ್ಶಕರು, 200 ಸ್ಟಾರ್ಟ್‌ಅಪ್‌ಗ್ಳು ಬರಲಿವೆ. ಸುಮಾರು 12 ಸಾವಿರ ಜನ ಇಲ್ಲಿಗೆ ಭೇಟಿ ನೀಡುವ ನಿರೀಕ್ಷೆ ಇದೆ. 4ರಿಂದ 5 ದೇಶಗಳ ರಾಯಭಾರಿಗಳು ಕೂಡ ಇದಕ್ಕೆ ಸಾಕ್ಷಿಯಾಗ ಲಿದ್ದಾರೆ. ಈ ಬಾರಿ ಗ್ರಾಮೀಣ ಪ್ರತಿಭೆ ಗಳಿಗಾಗಿ “ರೂರಲ್‌ ಐಟಿ ಕ್ವಿಜ್‌’ ಆಯೋಜಿಸಲಾಗಿದೆ. ಕೃಷಿಯಲ್ಲಿ ಇಂಟಲಿ ಜೆಂಟ್‌ ಸಿಸ್ಟ್‌ಂ, ಡಯಾಗ್ನಸ್ಟಿಕ್‌ನಲ್ಲಿ ಹೊಸ ಆವಿಷ್ಕಾರಗಳು ಮತ್ತಿತರ ವಿಷಯಗಳ ಮಂಡನೆ ಆಗಲಿದೆ.

ಪ್ರತಿಷ್ಠೆ ಬದಿಗೊತ್ತಿ; ಒಟ್ಟಾಗಿ ಕೆಲಸ ಮಾಡಿ: ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಉಪ ಮುಖ್ಯಮಂತ್ರಿ ಹಾಗೂ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ್‌, ಸ್ವಪ್ರತಿಷ್ಠೆಗಳನ್ನು ನಾವು ಬದಿಗೊತ್ತಿ ಸಮಾಜದ ಹಿತಕ್ಕಾಗಿ ದುಡಿ ಯ ಬೇಕು. ಈ ನಿಟ್ಟಿನಲ್ಲಿ ಐಟಿ ಮತ್ತು ಬಿಟಿ ಒಟ್ಟಾಗಿ ಕೆಲಸ ಮಾಡಬೇಕು. ಇದಕ್ಕೆ ಬೆಂಗಳೂರು ಟೆಕ್‌ ಸಮಿಟ್‌ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

Advertisement

ಎಂಜಿನಿಯರಿಂಗ್‌ ಕಾಲೇಜುಗಳು ಸೇರಿ ವಿವಿಧ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಬರೀ ಅಂಕಪಟ್ಟಿ ಮತ್ತು ಪ್ರಮಾಣಪತ್ರ ವಿತರಿಸುವ ಕೇಂದ್ರಗಳಾಗದೆ, ಉದ್ಯೋಗ ಕೇಂದ್ರಗಳಂತೆ ಕಾರ್ಯ ನಿರ್ವಹಿಸಬೇಕಿದೆ. ಶೀಘ್ರದಲ್ಲೇ ನವೀಕರಣಗೊಂಡ ಐಟಿ-ಬಿಟಿ ನೀತಿ ಜಾರಿಗೆ ಬರಲಿದೆ. ಇದು ಎರಡು ಮತ್ತು ಮೂರನೇ ಹಂತದ ನಗರಗಳಲ್ಲೂ ಐಟಿ-ಬಿಟಿ ಕ್ಷೇತ್ರ ಬೆಳೆಯಲು ಪೂರಕವಾಗಿರಲಿದೆ ಎಂದರು.

ಬಯೋಕಾನ್‌ ಲಿ., ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಕಿರಣ್‌ ಮಜೂಂದಾರ್‌ ಮಾತನಾಡಿ, ದೇಶದಲ್ಲಿ ನಿತ್ಯ 2-3 ಸ್ಟಾಟ್‌ಅರ್ಪ್‌ಗಳು ಹುಟ್ಟುತ್ತವೆ. ಅದರಲ್ಲಿ ಕನಿಷ್ಠ ಒಂದಾದರೂ ಬೆಂಗಳೂರಿನಲ್ಲಿ ಇರುತ್ತದೆ. ಆ ವೇಗದಲ್ಲಿ ಸಿಲಿಕಾನ್‌ ಸಿಟಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳೆಯುತ್ತಿದೆ. ಸಂಚಾರ, ತ್ಯಾಜ್ಯ ಸೇರಿದಂತೆ ಜನರಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ನಾವು ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನಗಳಿಂದ ಪರಿಹಾರ ಕಂಡುಕೊಳ್ಳಬಹುದು.

ಇದನ್ನು ತಂತ್ರಜ್ಞಾನ ಕ್ಷೇತ್ರ ಮಾಡಿ ತೋರಿಸಿದೆ ಎಂದು ಹೇಳಿದರು. ವಿಜನ್‌ ಗ್ರೂಪ್‌ ಐಟಿ ವಿಭಾಗದ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣ, ಐಟಿ-ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

20 – ಮೇಳದಲ್ಲಿ ಭಾಗವಹಿಸಲಿರುವ ದೇಶಗಳು
200 – ಸ್ಪೀಕರ್‌ಗಳು.
3,500- ನಿಯೋಗಗಳು.
250- ಪ್ರದರ್ಶನ ಮಳಿಗೆಗಳು.
200 – ಸ್ಟಾರ್ಟ್‌ಅಪ್‌ಗ್ಳು ಭಾಗಿ
12 – ಸಾವಿರ ಜನ ಭೇಟಿ ನೀಡುವ ನಿರೀಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next