Advertisement

ಚಂದ್ರನ ಮೇಲೆ ಭಾರತ ‘ವಿಕ್ರಮ’ ಸಾಧಿಸಲು ಕ್ಷಣಗಣನೆ

02:30 AM Sep 07, 2019 | Hari Prasad |

ಬೆಂಗಳೂರು: ಭಾರತೀಯರು ಮಾತ್ರವಲ್ಲ ಇಡೀ ವಿಶ್ವದ ಖಗೋಳಾಸಕ್ತರೆಲ್ಲಾ ಈ ಐತಿಹಾಸಿಕ ಕ್ಷಣಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಚಂದ್ರಯಾನ -2ರ ಆರ್ಬಿಟರ್, ವಿಕ್ರಂ ಲ್ಯಾಂಡಿಂಗ್ ನೌಕೆ ಮತ್ತು ಪ್ರಗ್ಯಾನ್ ಹೆಸರಿನ ಉಪಕರಣಗಳ ಸಹಿತ ಅವಶ್ಯ ಪರಿಕರಗಳನ್ನು ಹೊತ್ತು ಜುಲೈ22ರಂದು ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಜಿಗಿದಿದ್ದ ‘ಬಾಹುಬಲಿ’ ಹೆಸರಿನ GSLV MK III-M1 ರಾಕೆಟ್ ಶತಕೋಟಿ ಭಾರತೀಯರ ಚಂದ್ರಯಾನದ ಕನಸಿಗೆ ಕಿಚ್ಚು ಹಚ್ಚಿತ್ತು.

Advertisement

48 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಇಂದು ಅಂದರೆ ಶುಕ್ರವಾರ ತಡರಾತ್ರಿಯ ಸಮಯದಲ್ಲಿ 27 ಕಿಲೋ ಗ್ರಾಂ ತೂಕದ ಪ್ರಗ್ಯಾನ್ ರೋವರ್ ಅನ್ನು ತನ್ನೊಡಳಲ್ಲಿ ಇರಿಸಿಕೊಂಡಿದ್ದ 1471 ಕಿಲೋ ಗ್ರಾಂ ತೂಕದ ‘ವಿಕ್ರಂ ಲ್ಯಾಂಡರ್’ ಯಶಸ್ವಿಯಾಗಿ ಚಂದಿರನ ದಕ್ಷಿಣ ಧ್ರುವದ ಉದ್ದೇಶಿತ ಪ್ರದೇಶದಲ್ಲಿ ಇಳಿಯಲು ಕ್ಷಣಗಣನೆ ಪ್ರಾರಂಭಗೊಂಡಿದೆ.

ಚಂದ್ರಯಾನ -2 ಇವತ್ತಿನ ತನಕ ಏನೇನಾಯ್ತು?

ಪ್ರಧಾನಿ ಮೋದಿ ಅವರ ಜೊತೆ ದೇಶದ ವಿವಿಧ ಭಾಗಗಳಿಂದ ಆಯ್ಕೆಯಾಗಿರುವ ಸುಮಾರು 60 ರಿಂದ 70 ವಿದ್ಯಾರ್ಥಿಗಳು ವಿಕ್ರಂ ಲ್ಯಾಂಡರ್ ಅವತರಣವನ್ನು ಇಸ್ರೋ ನಿಯಂತ್ರಣ ಕೇಂದ್ರದಲ್ಲಿ ಪ್ರತ್ಯಕ್ಷವಾಗಿ ಕಣ್ತುಂಬಿಕೊಳ್ಳಲಿದ್ದಾರೆ.

ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತ್ಯಕ್ಷ ಸಾಕ್ಷಿಯಾಗಲಿದ್ದಾರೆ.

ಈ ಸವಾಲಿನ ಕ್ಷಣಕ್ಕೆ ಭಾರತೀಯರೂ ಸೇರಿದಂತೆ ವಿಶ್ವವೇ ಕಾತರದಿಂದ ಎದುರು ನೋಡುತ್ತಿದೆ.

ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಈ ಸಾಫ್ಟ್ ಲ್ಯಾಂಡಿಂಗ್ ಇಸ್ರೋ ಪಾಲಿಗೆ ಅತೀ ಸವಾಲಿನ ಕ್ಷಣಗಳಾಗಲಿವೆ.

Advertisement

1471 ಕೆ.ಜಿ. ತೂಕ ಹೊಂದಿರುವ ವಿಕ್ರಂ ನೌಕೆ ಇಂದು ಮಧ್ಯರಾತ್ರಿ 01.30 ರಿಂದ 02.30ರ ನಡುವೆ ಚಂದ್ರನ ಅಂಗಳದಲ್ಲಿ ಇಳಿಯಲಿದೆ.

ಇನ್ನು ಉಳಿದಿರುವುದು ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಭಾಗದಲ್ಲಿ ಇಳಿಯಲಿರುವ ಐತಿಹಾಸಿಕ ಕ್ಷಣ ಮಾತ್ರ.

ಸೆಪ್ಟಂಬರ್ 04ರಂದು ಎರಡನೇ ಕಕ್ಷೆ ಜಾರಿಸುವಿಕೆ ಪ್ರಕ್ರಿಯೆ 09 ಸೆಕೆಂಡುಗಳಲ್ಲಿ ಪೂರ್ಣಗೊಂಡಿತ್ತು.

ಚಂದ್ರಯಾನ-2ರ ಪ್ರಥಮ ಕಕ್ಷೆ ಜಾರಿಸುವಿಕೆ ಪ್ರಕ್ರಿಯೆ ಸೆಪ್ಟಂಬರ್ 03ರಂದು ನಡೆಯಿತು. ಈ ಕಾರ್ಯಕ್ಕೆ ಇಸ್ರೋ ವಿಜ್ಞಾನಿಗಳಿಗೆ ತಗುಲಿದ ಸಮಯ 04 ಸೆಕೆಂಡುಗಳು.

ಇಸ್ರೋದ ಈ ಎಲ್ಲಾ ಕಾರ್ಯಗಳಿಗೆ ಬೆಂಗಳೂರು ಸಮೀಪದ ಬೈಲಾಲುವಿನಲ್ಲಿ ಇರಿಸಲಾಗಿರುವ ಇಂಡಿಯನ್ ಡೀಪ್ ಸ್ಪೇಸ್ ನೆಟ್ ವರ್ಕ್ (IDSN) ಆ್ಯಂಟೆನಾಗಳು ಸಹಕಾರ ನೀಡುತ್ತಿವೆ.

ಆರ್ಬಿಟರ್ ಮತ್ತು ವಿಕ್ರಂ ಲ್ಯಾಂಡರ್ ನ ಕಾರ್ಯಕ್ಷಮತೆಯನ್ನು ಬೆಂಗಳೂರಿನಲ್ಲಿರುವ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಆ್ಯಂಡ್ ಕಮಾಂಡ್ ನೆಟ್ ವರ್ಕ್ ನಲ್ಲಿ (ISTRAC) ಸ್ಥಾಪಿಸಲಾಗಿದ್ದ ಮಿಶನ್ ಅಪರೇಷನ್ ಕಾಂಪ್ಲೆಕ್ಸ್ (MOX) ಮೂಲಕ ನಿರಂತರವಾಗಿ ಪರಿಶೀಲಿಸಲಾಗುತ್ತಿದೆ.

ಸೆಪ್ಟಂಬರ್ 02 ಸೋಮವಾರದಂದು ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರಯಾನ-2 ಆರ್ಬಿಟರ್ ನಿಂದ ಪ್ರತ್ಯೇಕಗೊಂಡು ಚಂದ್ರನ ಅಂಗಳದತ್ತ ಮುಖಮಾಡಿತ್ತು.

ಇನ್ನು ಚಂದ್ರನ ಕಕ್ಷೆಯಲ್ಲಿ ನೌಕೆಯ ಪಥ ಏರಿಸುವಿಕೆಯ ದ್ವಿತೀಯ, ತೃತೀಯ, ನಾಲ್ಕನೇ ಮತ್ತು ಐದನೇ ಹಂತದ ಪ್ರಕ್ರಿಯೆಗಳು ಕ್ರಮವಾಗಿ ಆಗಸ್ಟ್ 21, 28, 30 ಮತ್ತು ಸೆಪ್ಟಂಬರ್ 01ರಂದು ಯಶಸ್ವಿಯಾಗಿ ನೆರವೇರಿತ್ತು.

ಚಂದ್ರಯಾನ ನೌಕೆಯಲ್ಲಿ ಇರಿಸಲಾಗಿದ್ದ ಎಲ್ 14 ಕೆಮರಾ ಚಂದ್ರ ಬಿಂಬವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿತ್ತು.

ಆಗಸ್ಟ್ 20ರಂದು ಚಂದ್ರಯಾನ-2ರ ಮಹತ್ವದ ಹೆಜ್ಜೆಯಾಗಿ ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ಸಂಕೀರ್ಣ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿತ್ತು. ಈ ಪಥ ಏರಿಸುವಿಕೆ ಪ್ರಕ್ರಿಯೆ 1738 ಸೆಕೆಂಡುಗಳಲ್ಲಿ ಅಂದರೆ ಸರಿಸುಮಾರು 48 ನಿಮಿಷಗಳಲ್ಲಿ ಪೂರ್ಣಗೊಂಡಿತ್ತು. ಈ ಮೂಲಕ ನೌಕೆಯು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಪ್ರವೇಶಿಸಿತ್ತು.

ಆಗಸ್ಟ್ 14ರಂದು ಚಂದ್ರಯಾನ-2 ನೌಕೆ ಚಂದ್ರನ ಪಥವನ್ನು ಪ್ರವೇಶಿಸಿತ್ತು.

ಆಗಸ್ಟ್ 06ನೇ ತಾರೀಖಿನಂದು ಐದನೇ ಬಾರಿಗೆ ಭೂಕಕ್ಷೆ ಏರಿಸುವ ಕಾರ್ಯ ಸುಗಮವಾಗಿ ನಡೆದಿತ್ತು.

ಆಗಸ್ಟ್ 4ನೇ ತಾರೀಖಿನಂದು ವಿಕ್ರಂ ಲ್ಯಾಂಡರ್ ಭೂಮಿಯ ಚಿತ್ರಗಳನ್ನು ಸೆರೆಹಿಡಿದು ಇಸ್ರೋ ನಿಯಂತ್ರಣ ಕೊಠಡಿಗೆ ರವಾನಿಸಿತ್ತು.

ಬಳಿಕ ಜುಲೈ 26, 29ರಂದು ಮತ್ತು ಆಗಸ್ಟ್ 02ನೇ ತಾರೀಖುಗಳಂದು ಕ್ರಮವಾಗಿ ಚಂದ್ರಯಾನ-2 ನೌಕೆಯ ಎರಡನೇ, ಮೂರನೇ ಮತ್ತು ನಾಲ್ಕನೇ ಹಂತದ ಭೂಕಕ್ಷೆ ಏರಿಸುವ ಕಾರ್ಯ ಯಶಸ್ವಿಯಾಗಿತ್ತು.

ಜುಲೈ24ರಂದು ಚಂದ್ರಯಾನ-2 ನೌಕೆಯನ್ನು ಭೂಕಕ್ಷೆಯಿಂದ ಏರಿಸುವ ಪ್ರಥಮ ಹಂತದ 48 ಸೆಕೆಂಡುಗಳ ಕಾರ್ಯಾಚರಣೆಯನ್ನು ಇಸ್ರೋ ವಿಜ್ಞಾನಿಗಳ ತಂಡ ಯಶಸ್ವಿಯಾಗಿ ನಡೆಸಿದ್ದರು.

GSLV MK III-M1 ಮೂರು ಹಂತಗಳನ್ನು ಹೊಂದಿದ್ದು ಒಟ್ಟು 43.3 ಮೀಟರ್ ಎತ್ತರದ ರಾಕೆಟ್ ಇದಾಗಿತ್ತು. 3850 ಕೆ.ಜಿ. ತೂಕವಿದ್ದ ಈ ರಾಕೆಟ್ ಉಡ್ಡಯನಗೊಂಡ 16 ನಿಮಿಷಗಳಲ್ಲಿ ಭೂಕಕ್ಷೆಯನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು.

ಜುಲೈ 22ರ ಸೋಮವಾರ ಮಧ್ಯಾಹ್ನ 2.43ರ ಸುಮಾರಿಗೆ ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ವಾಹನವನ್ನು ಹೊತ್ತ ‘ಬಾಹುಬಲಿ’ ಹೆಸರಿನ GSLV MK III-M1 ರಾಕೆಟ್ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಆಗಸಕ್ಕೆ ಚಿಮ್ಮಿತ್ತು.

ಬಳಿಕ ಜುಲೈ 22ರಂದು ಚಂದ್ರಯಾನ -2ರ ಮರು ಉಡ್ಡಯನ ನಿಗದಿಯಾಗಿತ್ತು.

ಜುಲೈ 15ರಂದು ನಿಗದಿಯಾಗಿದ್ದ ಚಂದ್ರಯಾನ-2ರ ರಾಕೆಟ್ ಉಡ್ಡಯನ ಕಾರ್ಯ ತಾಂತ್ರಿಕ ಕಾರಣಗಳಿಂದಾಗಿ ರದ್ದುಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next