Advertisement
ಕಾಲೇಜು ಶಿಕ್ಷಣ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಿರುವ ಸಂಘದ ಪದಾಧಿಕಾರಿಗಳು, ಕೌನ್ಸೆಲಿಂಗ್‌ಗಾಗಿ ಬೆಂಗಳೂರಿಗೆ ಹೋಗಿ ಬರುವುದು ಬೇಸಿಗೆ ದಿನಗಳಲ್ಲಿ ಕಷ್ಟ ಸಾಧ್ಯ. ಆದ್ದರಿಂದ ಕಲಬುರಗಿಯಲ್ಲಿಯೇ ನಡೆಸಿ ಎಂದು ಒತ್ತಾಯಿಸಿದ್ದಾರೆ. ಈಗಾಗಲೇ ಕಾಲೇಜು ಶಿಕ್ಷಣ ಇಲಾಖೆ ಅಧ್ಯಾಪಕರ ವರ್ಗಾವಣೆಗೆ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ.
Related Articles
Advertisement
ಪ್ರತಿವರ್ಷ ವರ್ಗಾವಣೆಗೆ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಅಧ್ಯಾಪಕರ ಮಕ್ಕಳ ಶಿಕ್ಷಣ ಹಾಗೂ ಉನ್ನತ ಶಿಕ್ಷಣದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸಂವಿಧಾನದ 371(ಜೆ) ತಿದ್ದುಪಡಿಯಾಗಿ ಮೂರು ವರ್ಷ ಕಳೆದರೂ ಕಾಲೇಜು ಶಿಕ್ಷಣ ಇಲಾಖೆ ಸ್ಥಳೀಯ ವೃಂದ ರಚಿಸದೆ ಇರುವುದು ಹೈದ್ರಾಬಾದ ಕರ್ನಾಟಕದ ಬಗ್ಗೆ ಇಲಾಖೆ ಹೊಂದಿರುವ ತಾರತಮ್ಯ ಧೋರಣೆ ತೋರುತ್ತದೆ.
ಇದನ್ನು ಅಧ್ಯಾಪಕರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ. ಹೈದ್ರಾಬಾದ ಕರ್ನಾಟಕ ಪ್ರದೇಶದ ಅಧ್ಯಾಪಕರ ವರ್ಗಾವಣೆಗೆ ಕರ್ನಾಟಕ ಆಡಳಿತ ನ್ಯಾಯ ಪೀಠ (ಕೆಎಟಿ) ನೀಡಿರುವ ತಡೆಯಾಜ್ಞೆ ಶೀಘ್ರವೇ ತೆರವುಗೊಳಸಬೇಕು. ಹೈಕ ಹೊರತು ಪಡಿಸಿ ಇರುವ ಶೇ.8ರಷ್ಟು ಹುದ್ದೆಗಳಗೆ ಹೈದ್ರಾಬಾದ ಕರ್ನಾಟಕದವರನ್ನು ವರ್ಗಾವಣೆ ಮಾಡಬೇಕು.
ಕೌನ್ಸೆಲಿಂಗ್ ನಡೆಸುವ ದಿನಾಂಕ, ಸ್ಥಳ ಮತ್ತು ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ಮುಂಚಿತವಾಗಿ ಪ್ರಕಟಿಸಿ ಅಧ್ಯಾಪಕರಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸಬೇಕು. ಆದ್ದರಿಂದ ವಿಭಾಗೀಯ ಕೇಂದ್ರವಾದ ಕಲಬುರಗಿಯಲ್ಲೇ ಹೈದ್ರಾಬಾದ ಕರ್ನಾಟಕ ಭಾಗದ ಕಾಲೇಜು ಅಧ್ಯಾಪಕರ ವರ್ಗಾವಣೆಗೆ ಕೌನ್ಸೆಲಿಂಗ್ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಅಧ್ಯಾಪಕರ ಸಂಘದ ಅಧ್ಯಕ್ಷ ಡಾ| ಶರಣಪ್ಪ ಸೈದಾಪುರ, ಕಾರ್ಯದರ್ಶಿ ಡಾ| ಶ್ರೀಮಂತ ಹೋಳ್ಕರ್, ಡಾ| ಮಲ್ಲಿಕಾರ್ಜುನ ಶೆಟ್ಟಿ, ಡಾ| ಚಿನ್ನಾ ಆಶಪ್ಪ, ಡಾ| ನಾಗಪ್ಪ ಗೋಗಿ, ಪ್ರೊ| ಮಹಮದ್ ಯೂನುಸ್, ಡಾ| ನುಝಹತ್ ಫಾತಿಮಾ, ಪ್ರೊ| ರವಿ ನಾಯಕ, ಡಾ| ಪ್ರಭುಶೆಟ್ಟಿ , ಗುರುಪಾದಯ್ಯ ಮಠಪತಿ ಮತ್ತಿತರರು ಈ ಸಂದರ್ಭದಲ್ಲಿದ್ದರು.