Advertisement

ಬೆಳಗಾವಿ: ರಾಜ್ಯಗಳಲ್ಲಿ ಈಚೆಗೆ ನಡೆದ ಕೊಲೆ ಪ್ರಕರಣಗಳ ಮೇಲಿನ ಚರ್ಚೆಯು ಆಡಳಿತ ಪಕ್ಷ ಮತ್ತು ವಿಪಕ್ಷದ ನಡುವಿನ “ಧರ್ಮದ ವಾಕ್ಸಮರ’ಕ್ಕೆ ಮೇಲ್ಮನೆ ಸಾಕ್ಷಿಯಾಯಿತು.

Advertisement

ಆಯಾ ಪಕ್ಷಗಳ ಆಡಳಿತದಲ್ಲಿ ನಡೆದ ಕೊಲೆ ಪ್ರಕರಣಗಳನ್ನು ಪ್ರಸ್ತಾವಿಸಿದ ಎರಡೂ ಪಕ್ಷಗಳ ನಾಯಕರ ಆರೋಪ- ಪ್ರತ್ಯಾರೋಪಗಳು ತಾರಕಕ್ಕೇರಿ ಕೊನೆಗೆ ಸದನವನ್ನು ಗುರುವಾರಕ್ಕೆ ಮುಂದೂಡಲಾಯಿತು.

ನಿಯಮ 330ರ ಅಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತ ಚರ್ಚೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಬುದ್ಧಿವಂತರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಇತ್ತೀಚಿನ ಬೆಳವಣಿಗೆಗಳಿಂದ ಧರ್ಮದ ಅಮಲಿನಲ್ಲಿ ತೇಲುತ್ತಿದೆ. ಒಂದು ಕೋಮಿನ ಆರೋಪಿಗಳ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಿದರೆ, ಅಂಥದ್ದೇ ಪ್ರಕರಣಗಳಲ್ಲಿ ಮತ್ತೂಂದು ಕೋಮಿನವರ ವಿರುದ್ಧ ದುರ್ಬಲ ಸೆಕ್ಷನ್‌ಗಳನ್ನು ಹಾಕಲಾಗುತ್ತದೆ. ಸರಕಾರದ ಈ ರೀತಿಯ ಧೋರಣೆಗಳಿಂದಲೇ ಈ ಕೊಲೆಗಳಾಗುತ್ತಿವೆ ಎಂದು ನೇರ ಆರೋಪ ಮಾಡಿದರು.

ಟಿಪ್ಪು ಜಯಂತಿಗೆ ಎಷ್ಟು ಹತ್ಯೆಯಾದವು?
ಇದಕ್ಕೆ ತಿರುಗೇಟು ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಧರ್ಮದ ಆಧಾರದಲ್ಲಿ ಕೇಸುಗಳನ್ನು ಹಾಕುವುದಿಲ್ಲ; ಅಪರಾಧದ ಆಧಾರದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಈ ರಾಜ್ಯದಲ್ಲಿ ಎಲ್ಲ ಧರ್ಮದವರಿಗೂ ಒಂದೇ ಕಾನೂನು. ಪೊಲೀಸರು ನಾವು-ನೀವು ಹೇಳಿದಂತೆ ಪ್ರಕರಣ ದಾಖಲಿಸುವುದಿಲ್ಲ. ಅಷ್ಟಕ್ಕೂ ಪಿಎಫ್ಐ ಇಷ್ಟು ಬೆಳೆಯಲು ಯಾರು ಕಾರಣ? ಟಿಪ್ಪು ಜಯಂತಿಯಿಂದ ಎಷ್ಟು ಕೊಲೆಗಳಾದವು ಎಂದು ತರಾಟೆಗೆ ತೆಗೆದುಕೊಂಡರು.

ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಿದ್ದರಾಮಯ್ಯ ಅವಧಿಯಲ್ಲಿ ಹಿಂದೂಗಳ ಸರಣಿ ಕೊಲೆಗಳಾದವು. ಅವರು ಯಾವೊಂದು ಕುಟುಂಬಕ್ಕೆ ಸಾಂತ್ವನ ಹೇಳುವುದು ಒತ್ತಟ್ಟಿಗಿರಲಿ, ಹತ್ಯೆಯಾದ ಎಂದು ಘೋಷಿಸಲೂ ಇಲ್ಲ. ಪರಿಹಾರ ದೂರದ ಮಾತು. 175 ಪ್ರಕರಣಗಳನ್ನು ಹಿಂ ಪಡೆದು, 1,600 ಆರೋಪಿಗಳನ್ನು ಬಿಡುಗಡೆ ಮಾಡಲಾಯಿತು.

Advertisement

ಅವರೆಲ್ಲರೂ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ವಿಪಕ್ಷದ ಮುಖ್ಯ ಸಚೇತಕ ಪ್ರಕಾಶ್‌ ರಾಠೊಡ್‌ ಮಾತನಾಡಿ, ಚುನಾವಣೆ ದೃಷ್ಟಿಯಿಂದ ಬಿಜೆಪಿ ಸರಕಾರ ಮತ್ತು ತನ್ನ ಅಂಗ ಸಂಸ್ಥೆಗಳಿಂದ ಈ ಕೊಲೆ ಪ್ರಕರಣಗಳು ಮತ್ತು ಪಕ್ಷಪಾತಿ ಧೋರಣೆ ಆಗುತ್ತಿದೆ. ಇದು ಮುಂದೆಯೂ ಆಗಲಿದೆ ಎಂದರು.

ಬಿಜೆಪಿಯ ಭಾರತಿ ಶೆಟ್ಟಿ ಮಾತನಾಡಿ, ಅಪರಾಧ ಹಿಂದೂ ಮಾಡಿದರೂ ತಪ್ಪು, ಮುಸ್ಲಿಂ ಮಾಡಿದರೂ ತಪ್ಪು. ಆ ಕೃತ್ಯಗಳನ್ನು ಪೋಷಣೆ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು. ನಜೀರ್‌ ಅಹಮ್ಮದ್‌ ಮಾತನಾಡಿ, ಒಂದು ಸಮಾಜವನ್ನು ಗುರಿಯಾಗಿಟ್ಟುಕೊಂಡು ಟೀಕಿಸುವುದು ಎಷ್ಟು ಸರಿ? ಯಾವ ಸಂದೇಶ ನಾವು ಸಮಾಜಕ್ಕೆ ನೀಡುತ್ತಿದ್ದೇವೆ? ಎರಡೂ ಪಕ್ಷಗಳ ಸದಸ್ಯರ ಸಭೆ ಕರೆದು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸಲಹೆ ಮಾಡಿದರು.

ನಿಮ್ಮದು ರೌಡಿ ರಾಜ್ಯವಾಗಿತ್ತೇ?
ರಾಜ್ಯದಲ್ಲಿ 2017 ಚುನಾವಣ ವರ್ಷ. ಆಗ ಒಂದೇ ವರ್ಷದಲ್ಲಿ 30 ಸಾವಿರ ಜನರನ್ನು ರೌಡಿ ಪಟ್ಟಿಯಲ್ಲಿ ಸೇರಿಸಲಾಯಿತು. ಅದರಲ್ಲಿ ಬಹುತೇಕರು ಹಿಂದೂಗಳೇ ಆಗಿದ್ದರು. ಹಾಗೆ ಮಾಡಲು ನಿಮಗೆ (ವಿಪಕ್ಷ ಕಾಂಗ್ರೆಸ್‌ಗೆ) ನಾಚಿಕೆ ಆಗುವುದಿಲ್ಲವೇ?’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತರಾಟೆಗೆ ತೆಗೆದುಕೊಂಡರು.
ಚುನಾವಣೆ ವರ್ಷ ಆಗಿದ್ದರಿಂದಲೇ ಆ ವರ್ಷ ಅಷ್ಟೊಂದು ಜನರನ್ನು ರೌಡಿಗಳ ಲಿಸ್ಟ್‌ಗೆ ಸೇರಿಸಲಾಯಿತು. ಮರ್ಯಾದಸ್ಥರನ್ನೆಲ್ಲ ಪಟ್ಟಿಗೆ ಸೇರಿಸಲಾಯಿತು. ಹಾಗಾದರೆ ನಿಮ್ಮದು ರೌಡಿ ರಾಜ್ಯವಾಗಿತ್ತಾ ಎಂದು ಕೇಳಿದರು.
ಯಾವುದೇ ನೋಟಿಸ್‌ ನೀಡಿದರೂ ಉತ್ತರ ನೀಡಲು ನಾವು ಸಿದ್ಧ. ಯಾವ ಚರ್ಚೆಗೂ ತಯಾರಿದ್ದೇವೆ ಎಂದೂ ಸಚಿವರು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next