ಬೆಳಗಾವಿ: ವಿಧಾನ ಪರಿಷತ್ ನ ವಾಯುವ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ಮುಗಿದಿದ್ದು, ಬಿಜೆಪಿಯ ಹನುಮಂತ ನಿರಾಣಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿಗಿಂತ 34,693 ಹೆಚ್ಚು ಮತಗಳನ್ನು ಪಡೆದ ನಿರಾಣಿ ಗೆಲುವಿನ ನಗೆ ಬೀರಿದ್ದಾರೆ.
ಬಿಜೆಪಿ ಅಭ್ಯರ್ಥಿ ನಿರಾಣಿ 44,815 ಮತ ಪಡೆದರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಸಂಕ ಅವರು 10,112 ಮತಗಳನ್ನಷ್ಟೇ ಪಡೆದರು. ಚುನಾವಣೆಯಲ್ಲಿ ಒಟ್ಟು 65,922 ಮತಗಳು ಚಲಾವಣೆಯಾಗಿದ್ದು, 9006 ಮತಗಳು ತಿರಸ್ಕೃತವಾಗಿದೆ.
ವಿಧಾನ ಪರಿಷತ್ ನ ಎರಡು ಶಿಕ್ಷಕರ ಮತ್ತು ಎರಡು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಇದುವರೆಗೆ ಮೂರು ಕ್ಷೇತ್ರಗಳ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಿದೆ. ಪಶ್ಚಿಮ ಶಿಕ್ಷಕರ ಕ್ಷೆತ್ರದಲ್ಲಿ ಬಿಜೆಪಿಯ ಬಸವರಾಜ ಹೊರಟ್ಟಿ ಅವರು ಸತತ ಎಂಟನೇ ಬಾರಿ ಗೆಲುವಿನ ದಾಖಲೆ ಬರೆದಿದ್ದಾರೆ. ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಪ್ರಕಾಶ ಹುಕ್ಕೇರಿ ಅವರು 11,460 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ಬಿಜೆಪಿಯ ಅರುಣ ಶಹಾಪೂರ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ:ಕಡಿಮೆ ಚಾ ಕುಡೀರಿ; ದೇಶ ಬಚಾವ್ ಮಾಡಿ: ಪಾಕಿಸ್ಥಾನ ಸರಕಾರದಿಂದ ಜನರಿಗೆ ಮನವಿ
ಸದ್ಯ ದಕ್ಷಿಣ ಪದವೀಧರ ಕ್ಷೇತ್ರದ ಫಲಿತಾಂಶ ಬಾಕಿ ಉಳಿದಿದೆ. ಮತ ಎಣಿಕೆ ಮುಂದುವರಿದಿದ್ದು, ಕಾಂಗ್ರೆಸ್ ನ ಮಧು ಜಿ ಮಾದೇಗೌಡ ಮುನ್ನಡೆಯಲ್ಲಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬಲ ವರ್ಧನೆ ಮಾಡಿಕೊಂಡಿದೆ. ಬಿಜೆಪಿ ಒಂದು ಮತ್ತು ಜೆಡಿಎಸ್ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಬಸವರಾಜ ಹೊರಟ್ಟಿ ಅವರು ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದರು.