Advertisement
ಉಪಚುನಾವಣೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಎಸ್.ರಾಜು ಪೂಜಾರಿ, ಉಡುಪಿಯ ಭುಜಂಗ ಶೆಟ್ಟಿ, ಕಾರ್ಕಳದ ಡಿ.ಆರ್. ರಾಜು, ಉದಯ ಶೆಟ್ಟಿ ಮುನಿಯಾಲು, ಬಂಟ್ವಾಳದ ಚಂದ್ರಪ್ರಕಾಶ ಶೆಟ್ಟಿ ತುಂಬೆ ಅವರ ಹೆಸರು ಕೇಳಿ ಬಂದಿದ್ದವು. ಕೆಪಿಸಿಸಿ ಸಲ್ಲಿಸಿದ್ದ ಅಭ್ಯರ್ಥಿಗಳ ಪೈಕಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜು ಪೂಜಾರಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ರಾಜು ಪೂಜಾರಿ ಅವರು ಅ. 3ರಂದು ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ 12 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಉಭಯ ಜಿಲ್ಲೆಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಸಹಕಾರಿ, ರಾಜಕೀಯ ರಂಗದಲ್ಲಿ ಸಕ್ರಿಯ
ಇವರು ಬಿ.ಕಾಂ. ಪದವೀಧರ. ಆಸ್ಕರ್ ಫೆರ್ನಾಂಡಿಸ್ ಮತ್ತು ರಾಜೇಂದ್ರ ಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ರಾಜು ಪೂಜಾರಿ ಬೈಂದೂರು ಸಮೀಪದ ಯಡ್ತರೆ ಗ್ರಾಮದವರು. ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷರಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಗ್ರಾ.ಪಂ.ಸದಸ್ಯರಾಗಿ, ತಾ.ಪಂ. ಸದಸ್ಯರಾಗಿ, ಜಿ. ಪಂ.ಸದಸ್ಯರಾಗಿ, ಜಿ.ಪಂ.ಅಧ್ಯಕ್ಷರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವಿ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ 15 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಅವರು ಮರವಂತೆ – ಬಡಾಕೆರೆ ಸಹಕಾರಿ ಸೇವಾ ಸಂಘದ ಅಧ್ಯಕ್ಷರಾಗಿ 25 ವರ್ಷ ಪೂರೈಸಿದ್ದಾರೆ. ಶ್ರೀರಾಮ ಸೌಹಾರ್ದ ಸೊಸೈಟಿ ಅಧ್ಯಕ್ಷರಾಗಿ, ಸಾಗರ್ ಸೊಸೈಟಿ ನಿರ್ದೇಶಕರಾಗಿದ್ದಾರೆ.
ಉಡುಪಿ ಜಿಲ್ಲೆಗೆ ಪ್ರಾತಿನಿಧ್ಯ
ಬಿಜೆಪಿಯು ದ.ಕ. ಜಿಲ್ಲೆಯ ಕಿಶೋರ್‌ಕುಮಾರ್ ಬೊಟ್ಯಾಡಿಯವರಿಗೆ ಟಿಕೆಟ್ ನೀಡಿದ್ದು, ಕಾಂಗ್ರೆಸ್ ಉಡುಪಿ ಜಿಲ್ಲೆಗೆ ಪ್ರಾತಿನಿಧ್ಯ ನೀಡಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು, ಪರಿಷತ್ ಸದಸ್ಯರು ಇಲ್ಲದಿರುವುದು ಕೂಡ ರಾಜು ಪೂಜಾರಿ ಆಯ್ಕೆಗೆ ಒಂದು ಕಾರಣ ಇರಬಹುದು ಎನ್ನಲಾಗಿದೆ.
Related Articles
Advertisement