Advertisement

ಕೆರಳಿದ ಮಲೆ ಭಕ್ತರು

06:00 AM Oct 20, 2018 | |

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಶಬರಿಮಲೆ ದೇಗುಲಕ್ಕೆ ಪ್ರವೇಶಿಸಲು ಮುಂದಾಗಿದ್ದ ಇಬ್ಬರು ಮಹಿಳೆಯರಿಗೆ ಸಾವಿರಾರು ಭಕ್ತರ ಪ್ರತಿಭಟನೆಯ ಬಿಸಿ ಮುಟ್ಟಿದ್ದರಿಂದ ಅವರು ದೇಗುಲ ಪ್ರವೇಶಿಸದೆ ಹಿಂದಿರುಗಿದ್ದಾರೆ. ಈ ನಡುವೆ, ದೇಗುಲದ ಸಂಪ್ರದಾಯ ಮುರಿಯಲು ಯತ್ನಿಸಿದಲ್ಲಿ ತಾವು ಗರ್ಭ ಗುಡಿ ಮುಚ್ಚುವುದಾಗಿ ಪ್ರಧಾನ ತಂತ್ರಿಗಳು ಬೆದರಿಕೆ ಹಾಕಿದ್ದಾರೆ.

Advertisement

ಪ್ರತ್ಯೇಕ ಪೊಲೀಸ್‌ ಬಂದೋಬಸ್ತ್ಗಳಲ್ಲಿ ಪಂಪಾ ತಲುಪಿದ್ದ ಆಂಧ್ರಪ್ರದೇಶದ ಪತ್ರಕರ್ತೆ, ಇಪ್ಪತ್ತರ ಹರೆಯದ ಎಸ್‌. ಕವಿತಾ ಜಕ್ಕಲ್‌ ಹಾಗೂ ಕೇರಳದ ಸಾಮಾಜಿಕ ಕಾರ್ಯಕರ್ತೆ ರಹನಾ ಫಾತಿಮಾ ಅಲ್ಲಿ ಒಟ್ಟಾಗಿ ಸೇರಿ ಅಯ್ಯಪ್ಪ ದೇಗುಲದ ಕಡೆಗೆ ಸಾಗಿದ್ದರು. ಸುಮಾರು 300 ಪೊಲೀಸರು ಈ ಇಬ್ಬರನ್ನೂ ಸುತ್ತುವರಿದಿದ್ದರು. ಮುನ್ನಚ್ಚರಿಕೆ ಕ್ರಮವಾಗಿ, ಮಹಿಳೆಯರಿಗೆ ಹೆಲ್ಮೆಟ್‌ ಹಾಗೂ ಜಾಕೆಟ್‌ಗಳನ್ನು ಹಾಕಲಾಗಿತ್ತು. ತಲೆಗೆ ಹೆಲ್ಮೆೆಟ್‌ ಹಾಕಿದ್ದರಿಂದಾಗಿ ಇರುಮುಡಿಯನ್ನು ಹೆಗಲಿಗೆ ಕಟ್ಟಲಾಗಿತ್ತು.

ಮೆಟ್ಟಿಲು ಬಳಿ ಭಾರೀ ವಿರೋಧ
ಮಹಿಳೆಯರ ಪ್ರವೇಶ ವಿರೋಧಿಸಿ ಹಲವಾರು ಮಹಿಳಾ ಸಂಘಟನೆಗಳು, ದೇಗುಲದ ಸಾವಿರಾರು ಭಕ್ತರು ನಡೆಸಿದ ಪ್ರತಿಭಟನೆಯ ನಡುವೆಯೂ ದೇಗುಲದಿಂದ 5 ಕಿ.ಮೀ. ದೂರವಿರುವ ಪಂಪಾದಿಂದ ಬಿಗಿ ಪೊಲೀಸ್‌ ಬಂದೋಬಸ್ತ್ ಜತೆಗೆ ದೇಗುಲದ ಕಡೆಗೆ ಸಾಗಿದ್ದ ಈ ಇಬ್ಬರು ಮಹಿಳೆಯರು, ದೇಗುಲದ ಪವಿತ್ರ 18 ಮೆಟ್ಟಿಲುಗಳಿರುವ ನಡಪಂಥಲ್‌’ವರೆಗೆ ತಲುಪಿದರು. ಆದರೆ‌ ಅಲ್ಲಿ ಪ್ರತಿಭಟನಕಾರರಿಂದ ತೀವ್ರ ವಿರೋಧ ವ್ಯಕ್ತವಾಯಿತು. “ಸ್ವಾಮಿಯೇ ಅಯ್ಯಪ್ಪ’ ಮಂತ್ರಘೋಷ ಮುಗಿಲು ಮುಟ್ಟಿತು. ಪ್ರಾಣ ಕೊಟ್ಟೇವು ದೇಗುಲ ಪ್ರವೇಶಿಸಲು ಬಿಡೆವು ಎಂಬ ಎಚ್ಚರಿಕೆ ಹಾಕಿದರು. ಆಗ ಮುಂದೆ ಭುಗಿಲೇಳಬಹುದಾದ ಅವಾಂತರಗಳ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿ ಎಸ್‌. ಶ್ರೀಜಿತ್‌ ಅವರು, ಮಹಿಳೆಯರಿಗೆ ವಿವರಿಸಿದರು. ಆಗ ಅವರಿಬ್ಬರೂ “ನಡಪಂಥಲ್‌’ನಿಂದ ಹಿಂದಿರುಗಲು ಸಮ್ಮತಿಸಿದರು. ಅವರು ಅಲ್ಲಿಂದ ಹಿಂದಕ್ಕೆ ತೆರಳಿದ ಬೆನ್ನಲ್ಲೇ ಪ್ರತಿಭಟನೆಯೂ ತಣ್ಣಗಾಯಿತು. ಇವೆಲ್ಲದರ ಬೆನ್ನಲ್ಲೇ ಮೇರಿ ಸ್ವೀಟಿ (46) ಎಂಬ ಮಹಿಳೆಯೊಬ್ಬರು ಶಬರಿ ಮಲೆ ಯಾತ್ರೆ ಕೈಗೊಂಡಿದ್ದು, ಅವರಿಗೂ ದೇಗುಲ ಪ್ರವೇಶಿಸಲು ಸಾಧ್ಯವಾಗಿಲ್ಲ. ಅಲ್ಲದೆ, ಫಾತಿಮಾ ಅವರ ಕೊಚ್ಚಿಯಲ್ಲಿರುವ ಮನೆ ಯನ್ನು ಪ್ರತಿಭಟನಕಾರರು ಧ್ವಂಸಗೊಳಿಸಿದ್ದಾರೆ.

ಬಾಗಿಲಿಗೆ ಬೀಗ ಜಡಿದು ಹೋಗುವೆ
ದೇಗುಲದ ಪ್ರಧಾನ ತಂತ್ರಿ ಕಾಂತರಾರು ರಾಜೀವರಾರು ಅವರು, ದೇಗುಲದ ಸಂಪ್ರದಾಯ ಮುರಿಯಲು ಯತ್ನಿಸಿದಲ್ಲಿ ತಾವು ದೇಗುಲಕ್ಕೆ ಬೀಗ ಜಡಿದು, ಕೀಲಿ ಕೈಯ್ಯನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಿ ಹೊರಟು ಹೋಗುತ್ತೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next