Advertisement

ಕುಂಚಾವರಂನಲ್ಲಿ ಕಾಟೇಜ್‌-ಜಂಗಲ್‌ ಲಾಡ್ಜ್

05:43 PM Jun 28, 2022 | Team Udayavani |

ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯ ಪ್ರದೇಶದಲ್ಲಿರುವ ಚಂದ್ರಂಪಳ್ಳಿ ಜಲಾಶಯದ ಬಳಿ ಕಾಟೇಜ್‌ ಮತ್ತು ಜಂಗಲ್‌ ಲಾಡ್ಜ್ ನಿರ್ಮಾಣಕ್ಕಾಗಿ 2 ಕೋಟಿ ರೂ. ಮಂಜೂರು ಮಾಡಲಾಗುವುದು. ಅಲ್ಲದೇ ಅತೀ ಶೀಘ್ರವಾಗಿ ತಾಲೂಕಿನಲ್ಲಿ ಕುಂಚಾವರಂ, ಚಂದ್ರಂಪಳ್ಳಿ ಗ್ರಾಮದಲ್ಲಿ ಅರಣ್ಯ ಕಾಲೇಜು ಮಂಜೂರಿಗೊಳಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಸಚಿವ ಉಮೇಶ ಕತ್ತಿ ತಿಳಿಸಿದರು.

Advertisement

ತಾಲೂಕಿನ ಪೋಲಕಪಳ್ಳಿ ಗ್ರಾಮದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗ ಮತ್ತು ತಾಲೂಕು ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಿಂದ ನಿರ್ಮಿಸಿದ ಸಾಲು ಮರದ ತಿಮ್ಮಕ್ಕನ ವೃಕ್ಷೊದ್ಯಾನದ (ಉದ್ಯಾನವನ) ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಬೀದರ ಮತ್ತು ಕಲಬುರಗಿ ಜಿಲ್ಲೆಗಳು ಅತಿ ಬಿಸಿಲು ಪ್ರದೇಶಗಳು ಆಗಿವೆ. ಈ ಭಾಗದಲ್ಲಿ ಹಸರೀಕರಣ ಸೌಂದರೀಕರಣ ಆಗಬೇಕಾಗಿದೆ. ಚಂದ್ರಂಪಳ್ಳಿ ಜಲಾಶಯ ಹತ್ತಿರ ಕಾಟೇಜ್‌ ನಿರ್ಮಿಸಲು ಸರಕಾರದಿಂದ 2 ಕೋಟಿ ರೂ. ನೀಡಲಾಗುವುದು.ಹಿಂದುಳಿದ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿ ಆಗಬೇಕೆಂಬುದು ಸರಕಾರದ ಮುಖ್ಯ ಉದ್ದೇಶವಾಗಿದೆ ಎಂದರು.

ಕುಂಚಾವರಂ ಅರಣ್ಯಪ್ರದೇಶ ವನ್ಯಜೀವಿಧಾಮದಲ್ಲಿರುವ ಸೇರಿಬಿಕನಳ್ಳಿ ತಾಂಡಾವನ್ನು ಬರುವ 6 ತಿಂಗಳಲ್ಲಿ ಸ್ಥಳಾಂತರ ಮಾಡಲಾಗುವುದು. ಅಲ್ಲಿನ ತಾಂಡಾದ ಜನರೊಂದಿಗೆ ಅರಣ್ಯಾ ಧಿಕಾರಿಗಳು ಸಮಾಲೋಚನೆ ನಡೆಸಲಿದ್ದಾರೆ. ತಾಂಡಾದ ಜನರ ಬೇಡಿಕೆಗಳು ಮತ್ತು ಸಮಸ್ಯೆಗಳಿಗೆ ಸರಕಾರದ ಸ್ಪಂದಿಸಿ ಸ್ಥಳಾಂತರ ಮಾಡಲಾಗುತ್ತದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ 31 ಸಾವಿರ ಹೆಕ್ಟೇರ್‌ ಅರಣ್ಯಪ್ರದೇಶ ಆಗಿರುವುದರಿಂದ ಜಂಗಲ್‌ ಲಾಡ್ಜ್ ಮತ್ತು ಕಾಟೇಜ್‌ ಪ್ರಾರಂಭಿಸಲಾಗುವುದು. ಶಿರಸಿ ಮತ್ತು ಮೈಸೂರು ಜಿಲ್ಲೆಯಲ್ಲಿ ಅರಣ್ಯ ಕಾಲೇಜು ಮಾತ್ರ ಇರುತ್ತದೆ.

ನಮ್ಮ ಭಾಗದಲ್ಲಿ ಗಿಡಮರಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಗಿಡ-ಮರಗಳಿದ್ದರೆ ಮಳೆ ಬೆಳೆ ಮತ್ತು ಉತ್ತಮ ಪರಿಸರ ಕಾಣಲು ಸಾಧ್ಯ. ಮುಂದಿನ ವಾರದಲ್ಲಿ ಮತ್ತೆ ಚಿಂಚೋಳಿಗೆ ಭೇಟಿ ನೀಡಲಿದ್ದೇನೆ ಎಂದು ಸಚಿವ ಉಮೇಶ ಕತ್ತಿ ಹೇಳಿದರು.

ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ರಸಗೊಬ್ಬರ ರಾಜ್ಯ ಖಾತೆ ಕೇಂದ್ರ ಸಚಿವ ಭಗವಂತ ಖುಬಾ ಮಾತನಾಡಿ, ಸಾಲು ಮರದ ತಿಮ್ಮಕ್ಕ ಅವರು ಸರಕಾರದಿಂದ ಯಾವುದೇ ಸಹಾಯ ಸಹಕಾರ ಪಡೆಯದೇ ಸಾವಿರಾರು ಸಸಿಗಳನ್ನು ನೆಟ್ಟು ಭವಿಷ್ಯದ ಮಕ್ಕಳಿಗೆ ಕೊಡುಗೆ ನೀಡಿದ್ದಾರೆ. ಗಿಡ-ಮರಗಳ ಬಗ್ಗೆ ಮಳೆ ಬಾರದೇ ಇದ್ದಾಗ ಕಾಡಿನ ಬಗ್ಗೆ ಗೊತ್ತಾಗಲಿದೆ. ತಿಮ್ಮಕ್ಕಳ ಪ್ರೇರಣೆ ನಮಗೆ ಮಾದರಿಯಾಗಿದೆ ಎಂದರು.

Advertisement

ರೈತರಿಗೋಸ್ಕರ ಬೀಜ ಮತ್ತು ರಸಗೊಬ್ಬರ ಕೊರತೆಯಿಲ್ಲ. ಕೇಂದ್ರ ಸರಕಾರದ ಪಿಎಂ ಕಿಸಾನ್‌ ಯೋಜನೆ ಅಡಿಯಲ್ಲಿ ದೇಶದ 81 ಕೋಟಿ ಜನರು ಲಾಭ ಪಡೆದುಕೊಂಡಿದ್ದಾರೆ. ರೈತರಿಗೆ ಪ್ರತಿವರ್ಷ 10 ಸಾವಿರ ರೂ.ನೀಡಲಾಗುತ್ತಿದೆ. ತಾಲೂಕಿನಲ್ಲಿ ಪಿಎಂಜಿವೈ ಮತ್ತು ಸಿಆರ್‌ಎಫ್‌ ಯೋಜನೆ ಅಡಿ ರಸ್ತೆಗಳ ನಿರ್ಮಾಣ ಮಾಡಲಾಗುತ್ತಿದೆ. ರೈತರಿಗೋಸ್ಕರ ಕೇಂದ್ರ ಸರಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಶಾಸಕ ಡಾ|ಅವಿನಾಶ ಜಾಧವ್‌ ಮಾತನಾಡಿ, ನಮ್ಮ ಹಿಂದುಳಿದ ಪ್ರದೇಶ ತೆಲಂಗಾಣ ಗಡಿಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಒಟ್ಟು 35 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ 21 ಸಾವಿರ ಹೆಕ್ಟೇರ್‌ ವನ್ಯಜೀವಿಧಾಮಕ್ಕೆ ಒಳಪಟ್ಟಿದೆ. ಅನೇಕ ವರ್ಷಗಳಿಂದ ಅರಣ್ಯ ಕಾಲೇಜು ಪ್ರಾರಂಭಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಸಚಿವರು ಅರಣ್ಯ ಕಾಲೇಜು ಅತೀ ಶೀಘ್ರವಾಗಿ ಮಂಜೂರಿಗೊಳಿಸಬೇಕು ಎಂದು ಮನವಿ ಮಾಡಿದರು.

ಡಿಎಫ್‌ಒ ಸಂತೋಷಕುಮಾರ ಕೆಂಚಪ್ಪನವರ ಪ್ರಾಸ್ತಾವಿಕ ಮಾತನಾಡಿದರು. ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಅರಣ್ಯಸಂರಕ್ಷಣಾಧಿಕಾರಿ ಎಸ್‌.ವೆಂಕಟೇಶನ್‌, ಜಾಕೀರ ಪಟೇಲ್‌, ಸಿದ್ರಾಮಪ್ಪ ದಂಗಾಪೂರ, ತಹಶೀಲ್ದಾರ್‌ ಅಂಜುಮ ತಬಸುಮ್‌, ಇಒ ಹಂಪಣ್ಣ ಚವ್ಹಾಣ, ಎಂ.ಎಲ್‌. ಭಾವಿಕಟ್ಟಿ, ಚಂದ್ರಶೇಖರ ಗುತ್ತೆದಾರ, ಅಜೀತ ಪಾಟೀಲ, ಶ್ರೀಮಂತ ಕಟ್ಟಿಮನಿ, ಲಕ್ಷ್ಮಣ ಆವಂಟಿ, ಅರಣ್ಯ ಅರಣ್ಯಾ ಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಎಸಿಎಫ್‌ ಸುನೀಲಕುಮಾರ ಚವ್ಹಾಣ ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಲಾಮೂರ ನಿರೂಪಿಸಿದರು. ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸಂಜೀಕುಮಾರ ಚವ್ಹಾಣ ವಂದಿಸಿದರು.

ನನ್ನ ಮಗ ಮುಖ್ಯಮಂತ್ರಿ ಆಗಬಹುದು!
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕೆಂಬುದು ಈ ಭಾಗದ ಜನರ ಅನೇಕ ವರ್ಷಗಳ ಬೇಡಿಕೆ ಇದೆ.ದೇಶದಲ್ಲಿ ಪ್ರಧಾನ ಮಂತ್ರಿ ಮುಂದಿನ ದಿನಗಳಲ್ಲಿ 50 ರಾಜ್ಯಗಳನ್ನು ಹೊಸದಾಗಿ ರಚನೆ ಮಾಡಲಿದ್ದಾರೆ. ಜನಸಂಖ್ಯೆಗುಣವಾಗಿ ರಾಜ್ಯಗಳಾದರೆ ಅಭಿವೃದ್ಧಿ ಆಗಲಿವೆ. ಒಂದು ವೇಳೆ ಉತ್ತರ ಕರ್ನಾಟಕ ಪತ್ಯೇಕವಾಗಿ ರಾಜ್ಯವಾದರೆ ನಾನಂತೂ ಮುಖ್ಯಮಂತ್ರಿ ಆಗುವುದಿಲ್ಲ. ಮುಂದೆ ನನ್ನ ಮಗ ಮುಖ್ಯಮಂತ್ರಿ ಆಗಬಹುದು ಎಂದು ಸಚಿವ ಉಮೇಶ ಕತ್ತಿ ಹಾಸ್ಯ ಚಟಾಕಿ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next