ಕೋಸ್ಟಲ್ವುಡ್‌ನಲ್ಲಿ ಚಾರಿತ್ರಿಕ ದಾಖಲೆ ಮಾಡಿದ ಸಿನೆಮಾಗಳ ಹೆಸರು ಕೆಲವು ಮಾತ್ರ. ಅದರಲ್ಲಿ ಒಂದು ಎಂಬ ಸ್ಥಾನ ಪಡೆದಿರುವ ಸಿನೆಮಾ ‘ಪಡ್ಡಾಯಿ’. 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ತುಳು ಸಿನೆಮಾಕ್ಕೆ ಜೀವಕಲೆ ನೀಡಿದ್ದು ‘ಪಡ್ಡಾಯಿ’. ತೆರೆ ಮೇಲೆ ಸಾಕಷ್ಟು ದಿನ ನಿಲ್ಲದಿದ್ದರೂ, ದಾಖಲೆ ಹಾಗೂ ಪ್ರಶಸ್ತಿಗಳ ಮೂಲಕ ಪಡ್ಡಾಯಿ ಮನೆಮಾತಾಗಿದೆ.
ಸಿನೆಮಾ ಬಂದು 1 ವರ್ಷದ ಅನಂತರ ಸಿನೆಮಾ ತಂಡ ಮತ್ತೆ ಒಂದಾಗಿದೆ. ಸಿನೆಮಾದ ಬಗ್ಗೆ ಏನನ್ನೋ ಮಾಡಬೇಕು ಎಂದುಕೊಂಡು ಪುಸ್ತಕವೊಂದನ್ನು ಸಿದ್ಧಪಡಿಸಿದೆ. ಇದರಲ್ಲಿ ಪಡ್ಡಾಯಿಯ ಕಥೆ ಇದೆ ಹಾಗೂ ಪಡ್ಡಾಯಿಯ ಚಿತ್ರಕಥೆಯೂ ಇದೆ. ಸಾಮಾನ್ಯವಾಗಿ ಕಥೆ ಹಾಗೂ ಚಿತ್ರಕಥೆಗೆ ಭಿನ್ನವಿರುತ್ತದೆ. ಈ ಸಾಮಾನ್ಯ ಸಂಗತಿಗಳನ್ನು ಕೆಲವೊಮ್ಮೆ ಅರ್ಥಮಾಡಿಕೊಳ್ಳದೆ ಕೆಲವರು ವಿಫಲರಾಗುತ್ತಾರೆ. ಹೀಗಾಗಿಯೋ ಏನೋ ಸಿನೆಮಾ ಆಸಕ್ತಿಯ ಮನಸ್ಸುಗಳಿಗೆ ಆಪ್ತವಾಗುವ ನೆಲೆಯಲ್ಲಿ ಪಡ್ಡಾಯಿಯ ಪುಸ್ತಕವನ್ನು ಸಿದ್ಧಪಡಿಸಲಾಗಿದೆ. ಸಿನೆಮಾವೊಂದು ರೂಪುಗೊಂಡ ಬಗೆಯನ್ನು ಪುಸ್ತಕದಲ್ಲಿ ವಿಭಿನ್ನ ನೆಲೆಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ವಿಶೇಷವೆಂದರೆ ಸಿನೆಮಾದ ಕಥೆ ಹಾಗೂ ಚಿತ್ರಕಥೆಯನ್ನು ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡುವುದು ಇದು ಮೊದಲು ಅಂದರೂ ತಪ್ಪಲ್ಲ.
ಕಡಲ ತೀರದ ಮೀನುಗಾರರ ಕಥೆಯನ್ನು ಆಧರಿಸಿ ಕಾರ್ಕಳದ ನಿತ್ಯಾನಂದ ಪೈ ನಿರ್ಮಾಣ ಹಾಗೂ ಅಭಯಸಿಂಹ ನಿರ್ದೇಶಿಸಿದ ಸಿನೆಮಾವೇ ‘ಪಡ್ಡಾಯಿ’. ಪ್ರಸಿದ್ಧ ನಾಟಕಕಾರ ಶೇಕ್ಸ್‌ಪಿಯರ್ ರಚಿಸಿದ ‘ಮ್ಯಾಕ್‌ಬೆತ್’ ನಾಟಕದಿಂದ ಸ್ಫೂರ್ತಿ ಪಡೆದು ‘ಪಡ್ಡಾಯಿ’ ರೆಡಿ ಮಾಡಲಾಗಿತ್ತು. ಕರಾವಳಿ ಮೀನುಗಾರಿಕಾ ಕುಟುಂಬದ ಕಥಾನಕವನ್ನು ಈ ಚಿತ್ರದಲ್ಲಿ ವಿಭಿನ್ನವಾಗಿ ಸೆರೆಹಿಡಿಯಲಾಗಿತ್ತು. ಮೊಗವೀರ ಸಮುದಾಯದ ಬದುಕು ಬವಣೆಯನ್ನು ವಿಭಿನ್ನವಾಗಿ ಕಟ್ಟಿಕೊಡಲಾಗಿದೆ. ಅದರಲ್ಲೂ ತುಳುನಾಡಿನ ನೇಮ, ಕೋಲ, ಯಕ್ಷಗಾನ ಸೇರಿದಂತೆ ಎಲ್ಲಾ ಪ್ರಕಾರಗಳು ಇಲ್ಲಿವೆ. ಹೀಗಾಗಿ ಇದು ಪಕ್ಕಾ ತುಳುನಾಡಿನ ಕಥೆ. ಒಂದು ಗಂಟೆ 40 ನಿಮಿಷ ಅವಧಿಯ ಸಿನೆಮಾವಿದು. ಮೋಹನ್ ಶೇಣಿ, ಬಿಂದು ರಕ್ಷಿದಿ, ಗೋಪಿನಾಥ್ ಭಟ್, ಚಂದ್ರಹಾಸ್ ಉಳ್ಳಾಲ್, ರವಿ ಭಟ್, ಸದಾಶಿವ ಧರ್ಮಸ್ಥಳ, ಶ್ರೀನಿಧಿ ಆಚಾರ್, ಅವಿನಾಶ್ ರೈ, ಮಲ್ಲಿಕಾ ಜ್ಯೋತಿಗುಡ್ಡೆ, ವಾಣಿ ಪೆರಿಯೋಡಿ, ಸಂತೋಷ್ ಶೆಟ್ಟಿ, ಪ್ರಭಾಕರ್ ಕಾಪಿಕಾಡ್ ಮುಂತಾದವರು ಅಭಿನಯಿಸಿದ್ದಾರೆ.
‘ತುಳುವಿನಲ್ಲಿ ‘ಪಡ್ಡಾಯಿ’ ಅಂದರೆ ಪಶ್ಚಿಮ ಎಂದರ್ಥ. ಕರಾವಳಿ ಭಾಗದಲ್ಲಿ ಮೀನುಗಾರರು, ಪಶ್ಚಿಮದ ಕಡಲಿಗೆ ಮೀನುಗಾರಿಕೆಗೆ ಹೋಗುವುದನ್ನು ‘ಪಡ್ಡಾಯಿ’ಗೆ ಹೋಗುವುದು ಎಂದೇ ಹೇಳುತ್ತಾರೆ. ಇಂತಹ ಜನಜೀವನದಲ್ಲೂ ಪಾಶ್ಚಾತ್ಯ ಕಲ್ಪನೆಗಳ ನೆರಳಿನಿಂದ ಮೀನುಗಾರಿಕಾ ಜೀವನದಲ್ಲಿ ಬದಲಾವಣೆ ಎದುರಾಗಿದೆ. ಆ ಸಮುದಾಯದ ಇಂತಹ ಚಿತ್ರಣವೇ ಪಡ್ಡಾಯಿ ಸಿನೆಮಾ. ಮಲ್ಪೆಯ ಪಡುಕೆರೆಯಲ್ಲಿ 19 ದಿನ ಈ ಚಿತ್ರಕ್ಕಾಗಿ ಶೂಟಿಂಗ್ ನಡೆಸಲಾಗಿತ್ತು. ಉಳಿದಂತೆ ಮಂಗಳೂರು, ಉಡುಪಿಯಲ್ಲಿ ಚಿತ್ರೀಕರಣವಾಗಿದೆ. ಮೀನುಗಾರ ಕುಟುಂಬ ಮಾತನಾಡುವ ತುಳುವಿನ ಶೈಲಿ ಹಾಗೂ ಅವರ ಹಾವಭಾವದ ಅಧ್ಯಯನಕ್ಕಾಗಿ ಒಂದು ವಾರ ಈ ಸಿನೆಮಾದ ಎಲ್ಲಾ ಕಲಾವಿದರನ್ನು ಮಲ್ಪೆಯ ಮೀನುಗಾರ ಕುಟುಂಬದ ಜತೆಗೆ ಇದ್ದು ಅರಿತುಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಜತೆಗೆ ತುಳುವಿನಲ್ಲಿ ಮೊದಲ ಬಾರಿಗೆ ಸಿಂಕ್ ಸೌಂಡ್‌ನಲ್ಲಿ ಈ ಸಿನೆಮಾ ಮಾಡಲಾಗಿದೆ.
– ದಿನೇಶ್ ಇರಾ