ಸಿನೆಮಾದ ಆಡಿಯೋ ರಿಲೀಸ್ ಅನ್ನು ಅದ್ಧೂರಿಯಾಗಿ ಮಾಡುವ ಕಾಲವೊಂದಿತ್ತು. ಆದರೆ ಕೆಲವು ಆಡಿಯೋ ರಿಲೀಸ್ ಮಾಡಿದ್ದು ಗೊತ್ತೇ ಆಗುವುದಿಲ್ಲ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಆಡಿಯೋ ರಿಲೀಸ್ ಸದ್ದು ಮಾಡುತ್ತದೆ. ಆದರೆ ಚಿತ್ರದ ಟೀಸರ್ ರಿಲೀಸ್ ದೊಡ್ಡ ಸುದ್ದಿಯಾಗುವುದೇ ಇಲ್ಲ. ಕೇವಲ ಸೋಶಿಯಲ್ ಮೀಡಿಯಾ ಮೂಲಕವಷ್ಟೇ ಟೀಸರ್ ರಿಲೀಸ್ ಆಗಿ ಬಿಡುತ್ತವೆ. ಆದರೆ ಈಗ ಸ್ಯಾಂಡಲ್ ವುಡ್ ಮಾದರಿಯಲ್ಲಿ ಚಿತ್ರವೊಂದರ ಟೀಸರ್ ಬಿಡುಗಡೆಯಾಗಿ ಸದ್ದು ಮಾಡಿದೆ.
ಟೀಸರ್ ರಿಲೀಸ್ ಆದ ಅನಂತರ ಸಿನೆಮಾ ಟಾಕೀಸ್‌ನಲ್ಲಿ ರಿಲೀಸ್ ಆಗುವುದು ಸಾಮಾನ್ಯ. ಹೀಗಾಗಿ ಸಿನೆಮಾ ಬಿಡುಗಡೆಗೂ ಮುನ್ನ ಟಾಕೀಸ್ ಹೋಗುವ ಪ್ರಮೇಯವಿರುವುದಿಲ್ಲ. ಆದರೆ, ಇನ್ನೇನು ರಿಲೀಸ್‌ಗೆ ಸಿದ್ಧವಾಗಿರುವ ಕಟಪಾಡಿ ಕಟ್ಟಪ್ಪೆ ಸಿನೆಮಾ ಒಂದು ಚೇಂಜ್ ಹವಾ ಸೃಷ್ಟಿಸಿದೆ. ಸಿನೆಮಾ ನೋಡುವ ಮುನ್ನ ಟೀಸರ್ ನೋಡಲು ಟಾಕೀಸ್‌ಗೆ ಹೋಗುವಂತೆ ಮಾಡಿದೆ.
ಬುಧವಾರ ‘ಕಟಪಾಡಿ ಕಟ್ಟಪ್ಪೆ’ ಸಿನೆಮಾದ ಟೀಸರ್ ಮಂಗಳೂರಿನ ಸಿನೆಪೊಲಿಸ್‌ನಲ್ಲಿ ರಿಲೀಸ್ ಆಗಿದೆ. ಕೋಸ್ಟಲ್‌ವುಡ್‌ನಲ್ಲಿ ಇದೊಂದು ಅಪರೂಪದ ಕ್ಷಣ. ರಕ್ಷಿತ್ ಶೆಟ್ಟಿಯವರ ‘ಉಳಿದವರು ಕಂಡಂತೆ’ ಸಿನೆಮಾದ ಟೀಸರ್ ರಿಲೀಸ್ ಗೆ ಪ್ರೋಗ್ರಾಮ್ ಮಾಡಲಾಗಿತ್ತು. ಇನ್ನೇನು ರಿಲೀಸ್‌ನ ಹೊಸ್ತಿಲಲ್ಲಿರುವ ‘ದಿ ವಿಲನ್’ ಸಿನೆಮಾದ ಟೀಸರ್ ರಿಲೀಸ್ ಕೂಡ ಸಾಕಷ್ಟು ಸದ್ದು ಮಾಡಿತ್ತು. ಸಿನೆಮಾ ಇಂಡಸ್ಟ್ರಿಯಲ್ಲಿ ಇದೊಂದು ವಿಭಿನ್ನ ಪ್ರಯತ್ನ ಎಂದೇ ಬಣ್ಣಿಸಲಾಗಿತ್ತು. ಈಗ ತುಳುವಿನಲ್ಲೂ ಇಂತಹ ಪ್ರಯತ್ನ ಬಂದಿರುವುದು ವಿಶೇಷ. 1 ನಿಮಿಷದ ಈ ಟೀಸರ್‌ಗಾಗಿ ಸಿನೆಪೊಲೀಸ್‌ನ ಎರಡು ಥಿಯೇಟರ್ ಅನ್ನು ಬುಕ್ ಮಾಡಲಾಗಿತ್ತು. ಟೀಸರ್ ಬಗ್ಗೆ ಉತ್ತಮ ಅಭಿಪ್ರಾಯ ಕೂಡ ಬಂದಿದೆ. ಹೆಚ್ಚಾ ಕಡಿಮೆ ಈ ಸಿನೆಮಾ ಡಿಸೆಂಬರ್ ವೇಳೆಗೆ ರಿಲೀಸ್‌ನ ಪ್ಲ್ಯಾನ್‌ನಲ್ಲಿದೆ.
ಉತ್ತರ ಪ್ರದೇಶದಲ್ಲೂ ರಿಲೀಸ್!
ನಿರ್ಮಾಪಕ ರಾಜೇಶ್ ಬ್ರಹ್ಮಾವರ ಹೇಳುವ ಪ್ರಕಾರ, 208 ಥಿಯೇಟರ್‌ನಲ್ಲಿ ಈ ಸಿನೆಮಾ ರಿಲೀಸ್ ಮಾಡುವ ಯೋಚನೆಯಿದೆ. ಉತ್ತರಪ್ರದೇಶ, ಗುಜರಾತ್, ಗೋವಾ, ನಾಗಾಲ್ಯಾಂಡ್, ಮುಂಬಯಿ ಸಹಿತ ದೇಶದ ಬೇರೆ ಬೇರೆ ಭಾಗಗಳಲ್ಲಿ ಸಿನೆಮಾ ಬಿಡುಗಡೆಗೆ ಯೋಚಿಸಲಾಗಿದೆ ಎಂದಿದ್ದಾರೆ.
ತೆಲುಗು, ತಮಿಳು ಗೊತ್ತಿಲ್ಲದಿದ್ದರೂ, ತುಳುನಾಡಿನಲ್ಲಿ ಎಷ್ಟೋ ಜನರು ಆ ಚಿತ್ರವನ್ನು ನೋಡುತ್ತಾರೆ. ಅದೇ ರೀತಿ ಬೇರೆ ಬೇರೆ ರಾಜ್ಯದಲ್ಲಿ ನಮ್ಮ ಭಾಷೆಯ ಬಗ್ಗೆ ಗೊತ್ತಿರುವವರ ಜತೆಗೆ ಹಾಗೂ ನಮ್ಮ ಭಾಷಿಕರಿಂದ ಸಹಕಾರ ಪಡೆದು ಬೇರೆ ಬೇರೆ ರಾಜ್ಯಗಳಲ್ಲಿ ಸಿನೆಮಾ ರಿಲೀಸ್ ಮಾಡುವ ಯೋಚನೆ ಮಾಡಲಾಗಿದೆ ಎನ್ನುತ್ತಾರೆ ಅವರು.
ದಿನೇಶ್ ಇರಾ