Advertisement
ಮೊದಲೇ ಹೇಳಿದಂತೆ ಬಣ್ಣದ ಲೋಕದ ಮೇಲೆ ಆಸಕ್ತಿ ಹೊಂದಿದ್ದ ಚಿರಶ್ರೀಗೆ ಕಾಲೇಜು ದಿನಗಳಲ್ಲೇ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗುತ್ತದೆ. ಅದು “ರಂಭಾರೊಟ್ಟಿ’ ಚಿತ್ರದ ಮೂಲಕ. ಈ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಅಧಿಕೃತವಾಗಿ ಬಣ್ಣದ ಲೋಕಕ್ಕೆ ಚಿರಶ್ರೀ ಎಂಟ್ರಿಕೊಡುತ್ತಿದ್ದಾರೆ. ಕೆಲವರ ಕನಸು ಮೊದಲ ಸಿನಿಮಾಕ್ಕೇ ಕಮರಿ ಹೋಗುತ್ತದೆ. ಇಷ್ಟಪಟ್ಟು ಮಾಡಿದ ಸಿನಿಮಾಗಳು ಕೈ ಹಿಡಿಯದಿರುವ ಮೂಲಕ ಬಂದ ದಾರಿಯಲ್ಲೇ ವಾಪಾಸ್ ಹೋಗುವ ಪರಿಸ್ಥಿತಿ ಬರುತ್ತದೆ. ಆದರೆ, ಚಿರಶ್ರೀ ಮಾತ್ರ ಆ ವಿಷಯದಲ್ಲಿ ಅದೃಷ್ಟವಂತೆ. ಏಕೆಂದರೆ “ರಂಭಾರೊಟ್ಟಿ’ ಚಿತ್ರಕ್ಕೆ ಹಾಗೂ ಚಿರಶ್ರೀಯ ನಟನೆಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುವ ಮೂಲಕ ಮತ್ತೂಂದು ಸಿನಿಮಾದಲ್ಲಿ ಅವಕಾಶ ಸಿಗುತ್ತದೆ. ಅದು “ಪವಿತ್ರ’. ಇದು ಚಿರಶ್ರೀ ನಟಿಸಿದ ತುಳು ಸಿನಿಮಾ. ಈ ಸಿನಿಮಾದಲ್ಲೂ ಚಿರಶ್ರೀಗೆ ಒಳ್ಳೆಯ ಪಾತ್ರ ಸಿಕ್ಕಿದ್ದು, ಸಿನಿಮಾದ ಬಗ್ಗೆಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. “ಸಿನಿಮಾ ಬಗ್ಗೆ ಕನಸು ಕಂಡಿದ್ದ ನನಗೆ “ರಂಭಾರೊಟ್ಟಿ’ ಹಾಗೂ “ಪವಿತ್ರ’ ಚಿತ್ರಗಳಲ್ಲಿ ಒಳ್ಳೆಯ ಪಾತ್ರ ಸಿಕ್ಕಿತು. ಆ ಮೂಲಕ ನನ್ನ ಸಿನಿ ಬದುಕು ಆರಂಭವಾಯಿತು. ಈಗ ತುಳು, ಕನ್ನಡ, ತಮಿಳು ಹಾಗೂ ತೆಲುಗು ಸಿನಿಮಾಗಳಿಂದಲೂ ಅವಕಾಶವಿದೆ.ಸದ್ಯ “ಓ ಮಂಜುನಾಥ’ ಎಂಬ ತುಳು ಸಿನಿಮಾ ಒಪ್ಪಿಕೊಂಡಿದ್ದೇನೆ’ ಎನ್ನುವುದು ಚಿರಶ್ರೀ ಮಾತು. ಮೊದಲ ಬಾರಿಗೆ ಕ್ಯಾಮರಾ ಎದುರಿಸಿದಾಗ ಸಹಜವಾಗಿಯೇ ಚಿರಶ್ರೀಗೆ ಭಯವಾಯಿತು. ಆದರೆ, ಈಗ ಒಂದಷ್ಟು ಸಿನಿಮಾಗಳನ್ನು ಮಾಡಿರುವುದರಿಂದ ಆ ಭಯ ದೂರವಾಗಿದ್ದು, ಆರಾಮವಾಗಿ ನಟಿಸುತ್ತೇನೆ ಎನ್ನುತ್ತಾರೆ ಚಿರಶ್ರೀ.
Related Articles
Advertisement
ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಬೇಕೆಂಬ ಕನಸು ಕಂಡಿದ್ದ ಚಿರಶ್ರೀಗೆ ಈಗ ಒಂದಷ್ಟು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದೆ. “ಗೋಲ್‌ಮಾಲ್ ಬ್ರದರ್’, “ಹುಲಿರಾಯ’, “ಉಡುಂಬಾ’, “ಫಕೀರ’, “ಕರಿಗಂಬಳಿಯಲ್ಲಿ ಮಿಡಿನಾಗ’ ಚಿತ್ರಗಳಲ್ಲಿ ಚಿರಶ್ರೀ ನಾಯಕಿಯಾಗಿ ನಟಿಸಿದ್ದಾರೆ. “ಹುಲಿರಾಯ’ ಚಿತ್ರದಲ್ಲಿ ಅರಣ್ಯಾಧಿಕಾರಿಯ ಮಗಳಾಗಿ ನಟಿಸಿದ್ದು, ಆ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. “ಈಗ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಮೂರು ಸಿನಿಮಾಗಳಲ್ಲೂ ವಿಭಿನ್ನವಾದ ಪಾತ್ರ ಸಿಕ್ಕಿದೆ. ಪ್ರತಿ ಪಾತ್ರಗಳಿಗೂ ನ್ಯಾಯ ಒದಗಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ’ ಎನ್ನುವುದು ಚಿರಶ್ರೀ ಮಾತು. “ನನಗೆ ಸಾಕಷ್ಟು ಅವಕಾಶಗಳು ಬಂದಿದ್ದು ಸುಳ್ಳಲ್ಲ. ಆದರೆ, ನಾನು ಚಿತ್ರರಂಗಕ್ಕೆ ಹೊಸಬಳು. ಬಂದ ಅವಕಾಶಗಳನ್ನೆಲ್ಲಾ ಕಣ್ಣುಮುಚ್ಚಿ ಒಪ್ಪಿಕೊಂಡರೆ ಮುಂದೆ ನನ್ನ ಕೆರಿಯರ್‌ಗೆ ತೊಂದರೆಯಾಗುತ್ತದೆ. ಹಾಗಾಗಿ, ನನಗೆ ತುಂಬಾ ಇಷ್ಟವಾದ ಮತ್ತು ಈ ಪಾತ್ರಕ್ಕೆ ನಾನು ನ್ಯಾಯ ಒದಗಿಸಬಲ್ಲೆ ಎಂಬ ನಂಬಿಕೆ ಇದ್ದ ಪಾತ್ರಗಳನ್ನಷ್ಟೇ ಒಪ್ಪಿಕೊಂಡಿದ್ದೇನೆ. ನನಗೆ ಏಕಾಏಕಿ ಸಿನಿಮಾ ಮೇಲೆ ಸಿನಿಮಾ ಮಾಡಿ ಪಟ್ಟಿ ಬೆಳೆಸಿಕೊಳ್ಳುವ ಆಸೆ ಇಲ್ಲ. ನಿಧಾನವಾಗಿಯಾದರೂ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು’ ಎನ್ನುವುದು ಚಿರಶ್ರೀ ಮಾತು. ಚಿರಶ್ರೀಗೆ ತೆಲುಗು ಹಾಗೂ ತಮಿಳು ಚಿತ್ರಗಳಿಂದಲೂ ಆಫರ್ ಬಂದಿದ್ದು, ಒಂದು ತೆಲುಗು ಹಾಗೂ ಎರಡು ತಮಿಳು ಸಿನಿಮಾಗಳಲ್ಲಿ ಚಿರಶ್ರೀ ನಟಿಸಿದ್ದಾರೆ. ಮುಂದೆ ಆ ಚಿತ್ರರಂಗದಲ್ಲಿ ಕ್ಲಿಕ್ ಆದರೆ ಅಲ್ಲೇ ಸೆಟ್ಲ ಆಗುವ ಆಲೋಚನೆ ಚಿರಶ್ರೀಗಂತೂ ಇಲ್ಲ. “ನನಗೆ ಎಲ್ಲಾ ಭಾಷೆಯ ಚಿತ್ರಗಳಲ್ಲಿ ನಟಿಸಬೇಕೆಂಬ ಆಸೆ ಇದೆ. ಕನ್ನಡ, ತುಳು ಸಿನಿಮಾಗಳಿಗೆ ಮೊದಲ ಆದ್ಯತೆ. ಏಕೆಂದರೆ, ನನಗೆ ಮೊದಲು ಅವಕಾಶ ಕೊಟ್ಟ ಚಿತ್ರರಂಗವಿದು’ ಎನ್ನುವುದು ಚಿರಶ್ರೀ ಮಾತು. ಬಹುತೇಕ ಎಲ್ಲಾ ನಟಿಯರಂತೆ ಚಿರಶ್ರೀಗೂ ಒಂದು ಆಸೆ ಇದೆ. ಅದೇನೆಂದರೆ ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸಬೇಕೆಂಬುದು. ಅವರ ಆ ಆಸೆ ಈಡೇರುತ್ತಾ ಕಾದು ನೋಡಬೇಕು. ಬರಹ: ರವಿಪ್ರಕಾಶ್ ರೈ; ಚಿತ್ರಗಳು: ಸಂಗ್ರಹ