ಮಲೆನಾಡು, ಹೆಸರಿಗೆ ತಕ್ಕಂತೆ ಮಲೆಗಳ ನಾಡು, ಯಾರಿಗೂ ಬೇಡವೆಂದೆನಿಸದ ಭೂಲೋಕದ ಸುಂದರ ತಾಣ ನಮ್ಮ ಮಲೆನಾಡು. ಮಲೆನಾಡು ಅರ್ಥಾತ್ ಮಳೆಯ ನಾಡು. ಕೇವಲ ಮಳೆಗೆಂದು ಹೆಸರುವಾಸಿಯಾಗಿಲ್ಲ, ತನ್ನಲ್ಲಿರುವ ಸುಂದರ ನಿಸರ್ಗದ ಕೊಡುಗೆಯಿಂದ ಎಲ್ಲೋ ದೂರದಲ್ಲಿರುವ ನಿಸರ್ಗ ಪ್ರೇಮಿಗಳನ್ನು ತನ್ನತ್ತ ಕೈ ಬೀಸಿ ಕರೆಯುತ್ತಿರುವ ಭೂಲೋಕದ ಸ್ವರ್ಗವೇ ನಮ್ಮ ಮಲೆನಾಡು.
ಮಲೆನಾಡಿಗೆ ಪ್ರವೇಶ ಮಾಡಿದೊಡನೆ ನಮ್ಮನ್ನು ಯಾವುದೇ ವಾದ್ಯವೃಂದವಾಗಲೀ ಅಥವಾ ಯಾವುದೇ ಮಾನವ ನಿರ್ಮಿತ ಗೋಪುರಗಳ ಸ್ವಾಗತ ದೊರೆಯುವುದಿಲ್ಲ, ಬದಲಾಗಿ ಸುಂದರ ನೈಸಗಿಕ ಸಂಪತ್ತು ಹಾಗೂ ಆ ನಿಸರ್ಗ ಸಂಪತ್ತನ್ನೇ ನಂಬಿರುವ ಜೀವ ಸಂಕುಲಗಳು ನಮ್ಮನ್ನು ಸುಂದರವಾದ ಪ್ರಕೃತಿಯ ಮಡಿಲಿಗೆ ಬರಮಾಡಿಕೊಳ್ಳುತ್ತವೆ. ಮಳೆಗಾಲದಲ್ಲಿ ಮಲೆನಾಡಿನ ಸೌಂದರ್ಯ ಇಮ್ಮಡಿಗೊಳ್ಳುವುದಂತೂ ಸತ್ಯ. ಅದನ್ನು ನೋಡುವುದು ಕಣ್ಣಿಗೆ ಒಂದು ರೀತಿಯ ಹಬ್ಬವೇ ಸರಿ. ಮಳೆಗಾಲದಲ್ಲಿ ಭೂಮಿಯ ಹಸಿ ಮೈಗೆ ಹನಿ ಹನಿಯಾಗಿ ಉದುರುವ ಆ ಮಳೆ ಹನಿಗಳು, ಮಳೆಯ ಬರುವಿಕೆಗೆ ಕಾದು ಕುಳಿತಿರುವ ಭೂಮಿ, ಮಳೆಹನಿ ಧರೆಗಿಳಿದು ಭೂಮಿಯನ್ನು ತೊಯ್ದ ಬಳಿಕ ಚಿಗುರೊಡೆದು ಬೆಳೆಯುವ ವಿವಿಧ ಪ್ರಬೇಧದ ಸಸ್ಯರಾಶಿಗಳು ಬೆಳೆದು ಇಡಿಯ ಭೂಮಂಡಲಕ್ಕೆ ಹಸಿರು ಸೀರೆಯನ್ನು ಉಡಿಸಿದಂತೆ ಕಂಡುಬರುತ್ತದೆ. ಇದೇ ಸಂದರ್ಭದಲ್ಲಿ ಮಣ್ಣಿನ ಮಕ್ಕಳಾದ ರೈತರ ಸಂಭ್ರಮ, ಸೂರ್ಯನೇ ಮರೆಯಾದಂತೆ ಕಾಣುವ ಆ ಮಳೆಯ ನಡುವಲ್ಲಿ ರೈತರು ಗದ್ದೆಗಳ ಕಡೆಗೆ ಕೆಲಸಕ್ಕೆ ಹೋಗುವುದನ್ನು ನೋಡುವ ಸಂಭ್ರಮವೇ ಇನ್ನೊಂದು ರೀತಿಯ ಆನಂದ. ವ್ಹಾ! ನಿಜಕ್ಕೂ ಮಲೆನಾಡು ಭೂಲೋಕದ ಸ್ವರ್ಗವೇ ಸರಿ.
ಮಲೆನಾಡಿನ ಪ್ರಕೃತಿ ಎಷ್ಟೊಂದು ಸಹಕಾರಿ ಎಂದರೆ, ಜನರಿಗೆ ಬೇಕಾಗುವ ಎಲ್ಲಾ ರೀತಿಯ ಆವಶ್ಯಕತೆಗಳನ್ನು ಮಲೆನಾಡು ಪೂರೈಸು ತ್ತಿದೆ. ಮಳೆಗಾಲಕ್ಕೂ ಮೊದಲು ಮಲೆನಾಡಿನ ಜನ ಮಳೆಗಾಲಕ್ಕೆ ತಯಾರಾಗಬೇಕಾಗಿರುತ್ತದೆ. ಅದಕ್ಕೆಂದೇ ಅವರು ಮಲೆನಾಡಿನ ಕಾಡುಗಳ ಮೇಲೆ ಅವಲಂಬಿತರಾಗಿರುತ್ತಾರೆ. ಮಳೆಗಾಲ ಶುರುವಾಗುವ ಮೊದಲೇ ದನದ ಹಟ್ಟಿಗೆಂದು ಕಾಡುಗಳಲ್ಲಿ ಬಿದ್ದಂತಹ ಎಲೆಗಳನ್ನು ಸಂಗ್ರಹಿಸುವುದು, ಉರುವಲಿಗಾಗಿ ಕಟ್ಟಿಗೆಗಳನ್ನು ಕೂಡಿಡುವುದು ಮಾಡುತ್ತಾರೆ. ಇದೆಲ್ಲದರ ಜೊತೆಗೆ ಆ ಸಂದರ್ಭದಲ್ಲಿ ಸಿಗುವಂತಹ ಮಾವು, ಹಲಸು ಮುಂತಾದ ಹಣ್ಣುಗಳು ಹಸಿವನ್ನು ತಣಿಸುತ್ತವೆ. ಇದನ್ನೆಲ್ಲ ನೆನೆಸಿಕೊಂಡರೆ ಬಾಯಲ್ಲಿ ನೀರೂರುವುದಂತೂ ಖಂಡಿತ. ಮಳೆಗಾಲಕ್ಕೂ ಮೊದಲು ಮಳೆಗಾಲಕ್ಕೆಂದೇ ಮನೆ ಮಂದಿಯೆಲ್ಲ ಒಟ್ಟು ಸೇರಿ ಮಾಡಿ ಡಬ್ಬದಲ್ಲಿ ಕೂಡಿಟ್ಟ ಹಲಸಿನ ಹಪ್ಪಳ, ಸಂಡಿಗೆ, ಚಿಪ್ಸ್ ಮೊದಲಾದ ತಿಂಡಿಗಳನ್ನು ಮಳೆಗಾಲದಲ್ಲಿ ಸುರಿಯುವ ಜಡಿಮಳೆಯ ಸಂದರ್ಭದಲ್ಲಿ ಬಿಸಿ ಬಿಸಿ ಕಾಫಿಯೊಡನೆ ತಿನ್ನುತ್ತ ಕೂತರೆ ಎಂಥವನೂ ಕೂಡ ಮೈಮರೆತು ತಾನು ಸ್ವರ್ಗದ ಮಡಿಲಲ್ಲೇ ಇದ್ದೇನೆ ಎಂದು ಭಾವಿಸುವುದಂತೂ ಸುಳ್ಳಲ್ಲ.
ಮಲೆನಾಡೆಂದರೆ ಹಾಗೇ, ಪ್ರಕೃತಿ ನಮಗೆ ಗೊತ್ತಿಧ್ದೋ ಗೊತ್ತಿಲ್ಲದೆಯೋ ಅದರೊಳಗಡೆ ನಮ್ಮನ್ನು ಬೆರೆಸಿಬಿಡುತ್ತದೆ. ಇನ್ನು ಅಲ್ಲೇ ಉಳಿದು ಪ್ರಕೃತಿಯ ಮಡಿಲಲ್ಲಿ ದುಡಿಯುವ ಯುವಕರನ್ನು ಕೇಳಿದರೆ ಅವರಿಂದ ಬರುವ ಏಕೈಕ ಉತ್ತರವೆಂದರೆ, “”ಯಾರದೋ ಕೈಕೆಳಗೆ ಯಾಕೆ ದುಡಿಯಬೇಕು, ಬದಲಾಗಿ, ಇಲ್ಲೇ ಕೃಷಿ ಮಾಡಿಕೊಂಡು ಇದ್ದುಬಿಡೋದು” ಎಂದು. ಏಕೆಂದರೆ ಪ್ರಕೃತಿ ಮತ್ತು ಕೃಷಿ ನಮ್ಮನ್ನು ಎಂದಿಗೂ ಬೇರೆಯವರ ಗುಲಾಮರಾಗಲು ಬಿಡುವುದಿಲ್ಲ. ಇದರ ಪರಿಣಾಮವಾಗಿಯೇ ಮಲೆನಾಡಿನಲ್ಲಿ ಭತ್ತ, ಅಡಿಕೆ, ಕಾಫಿ, ಮೆಣಸು ಹಾಗೆಯೇ ಚಹಾ ಬೆಳೆಗಳೂ ಬೆಳೆಯಲ್ಪಡುತ್ತವೆ. ಮಲೆನಾಡು ಕೇವಲ ಕೃಷಿಯಿಂದ ಮಾತ್ರ ಗುರುತಿಸಿಕೊಂಡಿಲ್ಲ ಬದಲಾಗಿ ಶಿಕ್ಷಣ, ತಂತ್ರಜ್ಞಾನ ಹಾಗೂ ಇತರೆ ವಿವಿಧ ಕ್ಷೇತ್ರಗಳ ಸಾಧಕರಿಂದಲೂ ಹೆಸರು ಪಡೆದುಕೊಂಡಿರುತ್ತದೆ.
ಮಲೆನಾಡು ನಮ್ಮ ಕರುನಾಡಿಗೆ ಅದ್ಭುತ ಕವಿಗಳನ್ನು ಕೊಟ್ಟಿದೆ. ಪ್ರಕೃತಿಯ ಸೃಷ್ಟಿಯನ್ನು ವರ್ಣಿಸಿದ ರಾಷ್ಟ್ರಕವಿ ಕುವೆಂಪು ಜನಿಸಿದ್ದು ಇದೇ ಮಲೆನಾಡಿನ ಮಡಿಲಲ್ಲಿ. ಕವಿ ಕುವೆಂಪು ನದಿ ತಟದಲ್ಲಿ ಕುಳಿತು ಬರೆದ ಕವಿತೆಯೊಂದರಲ್ಲಿ ಪಕ್ಷಿಗಳ ಹಾರಾಟವನ್ನು ದೇವರ ರುಜು ಎಂದು ಭಾವಿಸಿದ್ದಾರೆ. ಏಕೆಂದರೆ ಆ ನಿಸರ್ಗ, ಆ ಬಾನು ಹಾಗೂ ಪ್ರತಿಯೊಂದು ಜೀವಸಂಕುಲವೂ ಆತನ ಸೃಷ್ಟಿ. ಹಾಗಾಗಿ, ಆತನೇ ಇದು ನನ್ನದು ಎಂದು ಆ ಪಕ್ಷಿಗಳ ರೂಪದಲ್ಲಿ ನೀಲಿ ಬಾನಿಗೆ ರುಜು ಮಾಡಿದ್ದಾನೆ ಎಂದು ಬರೆಯುತ್ತಾರೆ. ಕುವೆಂಪು ಅವರ ಮಾತಿನಂತೆ ಇಲ್ಲಿನ ಜನರೂ ಕೂಡ ಎಂದಿಗೂ ಪ್ರಕೃತಿ ತಮ್ಮ ಸ್ವಂತದೆಂದು ಭಾವಿಸಿಲ್ಲ. ಹಾಗಾಗಿಯೇ ಅದು ಇಂದಿಗೂ ಸುರಕ್ಷಿತವಾಗಿದೆ.
ಮಲೆನಾಡು ಮಳೆಯಿಂದ ಎಷ್ಟು ಸುಂದರವಾಗಿ ಕಂಗೊಳಿಸುತ್ತದೆಯೋ ಅಷ್ಟೇ ಕಷ್ಟಗಳನ್ನು ಇಲ್ಲಿಯ ಜನ ಅನುಭವಿಸುತ್ತಾರೆ. ಎಲ್ಲೋ ಕಾಡಿನ ಮಧ್ಯೆ ಇರುವ ಮನೆಯ ಮೇಲೆ ದೊಡ್ಡ ಮರಗಳು ಬೀಳುವುದು, ಇನ್ನು ವಿದ್ಯುತ್ ಕಂಬಗಳು ಕಾಡಿನ ಮಧ್ಯೆ ಹಾದುಬರುವುದರಿಂದ ಗಾಳಿ-ಮಳೆಗೆ ಅವು ಮುರಿದು ಬಿದ್ದು ವಾರಗಟ್ಟಲೆ ವಿದ್ಯುತ್ ಇಲ್ಲದೇ ಇರುವುದು, ಹಳ್ಳ-ಕೊಳ್ಳಗಳು ತುಂಬಿಕೊಂಡು ಕಾಲು ಸೇತುವೆಗಳು ಮುರಿದು ಬೀಳುವುದು, ನದಿಯ ನೀರಿನ ರಭಸಕ್ಕೆ ಸಿಕ್ಕಿ ಸಾಯುವವರೆಷ್ಟೋ? ಗದ್ದೆಗಳಿಗೆ ನೀರು ತುಂಬಿ ಬೆಳೆ ನಾಶ, ಕೊಯಲ್ಲಿನ ಸಮಯದಲ್ಲೂ ಮಳೆ… ಹೇಳುತ್ತಾ ಹೊರಟರೆ ಮಲೆನಾಡಿಗರ ಕಷ್ಟದ ಜೀವನದ ಪಟ್ಟಿ ಮುಗಿಯುವುದೇ ಇಲ್ಲ. ಅದೆಲ್ಲ ಏನೇ ಇದ್ದರೂ ಮಲೆನಾಡಿಗರು ಅವುಗಳಿಗೆ ಎಂದೂ ಎದೆಗುಂದಿದವರೇ ಅಲ್ಲ. ಅವರನ್ನು ಯಾವ ದೇಶ ಕೈ ಬೀಸಿ ಕರೆದರೂ ನಮಗೆ ನಮ್ಮ ಮಲೆನಾಡೇ ಸ್ವರ್ಗ ಎಂದು ಹೇಳುತ್ತಾರೆ ಅವರು.
ಅಭಿಷೇಕ್ ಎಸ್. ಜನಿಯಾ
ದ್ವಿತೀಯ ಬಿ. ಎ.
ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು