ಹೊಸದಿಲ್ಲಿ : ಕಳೆದ ಒಂದು ವರ್ಷದಲ್ಲಿ ಸಾರ್ವಜನಿಕ ಸೇವೆಗಳಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಮೀಕ್ಷೆಗೆ ಒಳಪಟ್ಟ ದೇಶದ 20 ರಾಜ್ಯಗಳ ಪೈಕಿ ಕರ್ನಾಟಕ ನಂ.1 ಭ್ರಷ್ಟ ರಾಜ್ಯ (ಶೇ.77) ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಕರ್ನಾಟಕವನ್ನು ಅನುಸರಿಸಿರುವ ಇತರ ಅತ್ಯಂತ ಭ್ರಷ್ಟ ರಾಜ್ಯಗಳೆಂದರೆ ಆಂಧ್ರ ಪ್ರದೇಶ (ಶೇ.74), ತಮಿಳು ನಾಡು (ಶೇ.68), ಮಹಾರಾಷ್ಟ್ರ (ಶೇ.57), ಜಮ್ಮು ಕಾಶ್ಮೀರ (ಶೇ.44) ಮತ್ತು ಪಂಜಾಬ್ (ಶೇ.42),
2005ರಲ್ಲಿ ಸಾರ್ವಜನಿಕ ಸೇವೆಗಳಲ್ಲಿನ ಭ್ರಷ್ಟಾಚಾರದಲ್ಲಿ ಬಿಹಾರ ಶೇ.74ರ ಪ್ರಮಾಣದಲ್ಲಿ ನಂಬರ್ 1 ಸ್ಥಾನದಲ್ಲಿತ್ತು. ಅನಂತರದ ಸ್ಥಾನಗಳಲ್ಲಿ ಜಮ್ಮು ಕಾಶ್ಮೀರ (ಶೇ.69), ಒಡಿಶಾ (ಶೇ.60), ರಾಜಸ್ಥಾನ (ಶೇ.59) ಮತ್ತು ತಮಿಳು ನಾಡು (ಶೇ.59) ಇದ್ದವು.
ಸಾರ್ವಜನಿಕ ಸೇವೆಗಳಲ್ಲಿ ಅತ್ಯಂತ ಕಡಿಮೆ ಭ್ರಷ್ಟಾಚಾರ ಇರುವ ರಾಜ್ಯಗಳಾಗಿ ಹಿಮಾಚಲ ಪ್ರದೇಶ (ಶೇ.3), ಕೇರಳ (ಶೇ.4) ಹಾಗೂ ಛತ್ತೀಸ್‌ಗಢ (ಶೇ.13) ಮೂಡಿ ಬಂದಿವೆ.
ಸಮಾಧಾನಕರ ಅಂಶವೆಂದರೆ ಭಾರತದಲ್ಲಿ ಸಣ್ಣ ಪುಟ್ಟ ಭ್ರಷ್ಟಾಚಾರ ಸಾಕಷ್ಟು ಕಡಿಮೆಯಾಗಿದೆ. ಆದರೆ ಕಳೆದ ವರ್ಷ ಸಾರ್ವಜನಿಕ ಸೇವೆಗಳನ್ನು ಪಡೆದುಕೊಳ್ಳಲು ಕುಟುಂಬಗಳು ಕನಿಷ್ಠ 10 ರೂ.ಗಳಿಂದ ತೊಡಗಿ ನೀಡಿರುವ ಲಂಚದ ಪ್ರಮಾಣ 6,350 ಕೋಟಿ ರೂ. ಆಗಿರುವುದು ಸಮಿಕ್ಷೆಯಲ್ಲಿ ಕಂಡು ಬಂದಿದೆ.
ಇಂಡಿಯನ್ ಕರಪ್‌ಶನ್ ಸ್ಟಡಿ (ಸಿಎಂಎಸ್ – ಐಸಿಎಸ್) 2017 ನಡೆಸಿರುವ ಸಮೀಕ್ಷೆ ಪ್ರಕಾರ ದೇಶದ ಮೂರನೇ ಒಂದಂಶ ಕುಟುಂಬಗಳು ಕಳೆದ ವರ್ಷದಲ್ಲಿ ಕನಿಷ್ಠ ಒಂದು ಬಾರಿಯಾದರೂ ಲಂಚ ನೀಡಿವೆ. 2005ರಲ್ಲಿ ಲಂಚ ನೀಡಲ್ಪಟ್ಟ ಪ್ರಕರಣಗಳು ಶೇ.53.
2005ರ ಮಟ್ಟಕ್ಕೆ ಹೋಲಿಸಿದರೆ ಜನರು ಪೊಲೀಸ್ ಮತ್ತು ನ್ಯಾಯಾಂಗ ಸೇರಿದಂತೆ ಸಾರ್ವಜನಿಕ ಸೇವೆಗಳಿಗಾಗಿ ನೀಡಿರುವ ಲಂಚ ಕಳೆದ ವರ್ಷ ಗಮನಾರ್ಹವಾಗಿ ಕಡಿಮೆಯಾಗಿದೆ.