ಲಕ್ನೋ : “ನೂರು ಕೋಟಿ ಭಾರತೀಯರ ರಕ್ತದ ಆಳದಲ್ಲಿ ಭ್ರಷ್ಟಾಚಾರ ಹರಿಯುತ್ತಿದೆ’ ಎಂದು ಉತ್ತರ ಪ್ರದೇಶ ಕ್ಯಾಬಿನೆಟ್ ಸಚಿವ ಓಂ ಪ್ರಕಾಶ್ ರಾಜಭಾರ್ ಹೇಳಿರುವುದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತೀವ್ರ ಇರಿಸುಮುರಿಸು ಉಂಟುಮಾಡಿದೆ.
ಹಮೀರ್‌ಪುರ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಚಿವ ರಾಜಭಾರ್ ಅವರು, “ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಅಷ್ಟು ಸುಲಭವಲ್ಲ; ಏಕೆಂದರೆ ಇದು ದೇಶಾದ್ಯಂತ ಅತಿಯಾಗಿ ಹರಡಿಕೊಂಡಿರುವ ಪಿಡುಗಾಗಿದೆ’ ಎಂದು ಹೇಳಿದರು. ಭ್ರಷ್ಟಾಚಾರ ಎನ್ನುವುದು ಎಷ್ಟು ಆಳವಾಗಿದೆ ಎಂದರೆ ಅದು ನೂರು ಕೋಟಿ ಭಾರತೀಯರ ರಕ್ತದಾಳದಲ್ಲಿ ಹರಿಯುತ್ತಿದೆ ಎಂದವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಈಚೆಗೆ ಫ್ಲೈ ಓವರ್ ಕುಸಿದು ಹಲವು ಡಜನ್ ಜೀವಗಳು ಬಲಿಯಾದುದನ್ನು ಉಲ್ಲೇಖೀಸಿ ಮಾತನಾಡಿದ ರಾಜಭಾರ್, ಸಮಾಜದಿಂದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಕಷ್ಟು ಸಮಯ ತಗಲುತ್ತದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಭ್ರಷ್ಟಾಚಾರದ ವಿರುದ್ದ ಖುದ್ದಾಗಿ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ ಎಂದು ರಾಜಭಾರ್ ಹೇಳಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು ಎಸ್‌ಸಿ/ಎಸ್‌ಟಿ ಸಮುದಾಯದ ಕಾನೂನುಸಮ್ಮತ ಬೇಡಿಕೆಗಳತ್ತ ಯಾವುದೇ ಧ್ಯಾನ ನೀಡುತ್ತಿಲ್ಲ ಎಂದು ರಾಜಭಾರ್ ಆರೋಪಿಸಿದರು.
ಇದೇ ಸಚಿವರು ಈ ಹಿಂದೆ ಸಿಎಂ ಯೋಗಿ ಆದಿತ್ಯನಾಥ್ ಸರಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಹೇಳಿದ್ದರು.
ರಾಜಭಾರ್ ಅವರ ಈ ಮಾತುಗಳು ಅಗ್ಗದ ಪ್ರಚಾರ ಪಡೆಯುವ ಉದ್ದೇಶದ್ದಾಗಿದೆ ಎಂದು ಬಿಜೆಪಿ ಹೇಳಿದೆ.