Advertisement

ಆಸ್ಪತ್ರೆ ಆಹಾರ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ; ತನಿಖೆಗೆ ಕಾಂಗ್ರೆಸ್ ಆಗ್ರಹ

03:59 PM Jun 14, 2022 | Suhan S |

ಸಾಗರ: ಇಲ್ಲಿನ ಉಪವಿಭಾಗೀಯ ಆಸ್ಪತ್ರೆ ಮತ್ತು ತಾಯಿಮಗು ಆಸ್ಪತ್ರೆಗೆ ಸರಬರಾಜು ಮಾಡುವ ಆಹಾರ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದ್ದು ಶಾಸಕರು ತಕ್ಷಣ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮಕ್ಕೆ ಆದೇಶ ಮಾಡಬೇಕು ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶಬಾಬು ಒತ್ತಾಯಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆಸ್ಪತ್ರೆಗಳಿಗೆ 33 ರೂಪಾಯಿಗೆ ನೀಡುತ್ತಿದ್ದ ಆಹಾರವನ್ನು ಈಗ 190 ರೂಪಾಯಿಗೆ ಸರಬರಾಜು ಮಾಡಲು ಟೆಂಡರ್ ನೀಡಲಾಗಿದೆ. ಇದರಿಂದ ಸರ್ಕಾರಕ್ಕೆ ದೊಡ್ಡಮಟ್ಟದಲ್ಲಿ ನಷ್ಟ ಉಂಟಾಗಲಿದೆ ಎಂದು ಹೇಳಿದರು.

ಉಪವಿಭಾಗೀಯ ಆಸ್ಪತ್ರೆಯಲ್ಲಿ ಕಾಗೋಡು ತಿಮ್ಮಪ್ಪ ಅವರು ಅಧಿಕಾರದಲ್ಲಿದ್ದಾಗ ಸುಸಜ್ಜಿತವಾದ ಅಡುಗೆಕೋಣೆ ನಿರ್ಮಿಸಿ ಕೊಟ್ಟಿದ್ದಾರೆ. ಅಡುಗೆ ಮಾಡಲು ಇಬ್ಬರು ಸಿಬ್ಬಂದಿಗಳಿದ್ದಾರೆ. ಆದರೆ ಉಪವಿಭಾಗೀಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಪರಪ್ಪ ಅಡುಗೆ ಕೋಣೆ ಸುಸಜ್ಜಿತವಾಗಿಲ್ಲ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಕೊಟ್ಟಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ. ಸಾಗರದಲ್ಲಿ ಗುಣಮಟ್ಟದ ಆಹಾರ ತಯಾರಿಸುವವರು ಇದ್ದಾಗ್ಯೂ ಡಾ. ಪರಪ್ಪ ಅವರು ಕಡೂರಿನ ವ್ಯಕ್ತಿಯೊಬ್ಬರಿಗೆ ಆಹಾರ ಸರಬರಾಜು ಮಾಡಲು ಟೆಂಡರ್ ನೀಡಿದ್ದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿದರು.

ಟೆಂಡರ್ ನೀಡಿದ ವ್ಯಕ್ತಿ ಸಾಗರದ ಬಿಜೆಪಿ ಮುಖಂಡರೊಬ್ಬರಿಗೆ ಒಳಗುತ್ತಿಗೆ ನೀಡಿದ್ದಾನೆ. ಬಿಜೆಪಿ ಮುಖಂಡರು ತಮ್ಮ ಹೋಟೆಲ್‌ನಲ್ಲಿ ಆಹಾರ ತಯಾರು ಮಾಡಿ ರೋಗಿಗಳಿಗೆ ವಿತರಣೆ ಮಾಡುತ್ತಿದ್ದಾರೆ. ಗುತ್ತಿಗೆದಾರರನ್ನು ಬದಲಾವಣೆ ಮಾಡಿದ್ದು ಆರೋಗ್ಯ ರಕ್ಷಾ ಸಮಿತಿಯಲ್ಲಿ ಚರ್ಚೆ ಮಾಡಿಲ್ಲ. ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರಾದ ಶಾಸಕರಿಗೆ, ಕಾರ್ಯದರ್ಶಿಯಾಗಿರುವ ಉಪವಿಭಾಗಾಧಿಕಾರಿಗಳಿಗೆ ಟೆಂಡರ್ ಕಡೂರಿನವರಿಗೆ ಕೊಟ್ಟಿದ್ದು ಬಹುಶಃ ಅರಿವಿಗೆ ಬಂದಿಲ್ಲ ಎಂದು ಕಾಣುತ್ತದೆ. ತಕ್ಷಣ ಈ ಕುರಿತು ತನಿಖೆ ನಡೆಯಬೇಕು. ಡಾ. ಪರಪ್ಪ ಆಹಾರ ವಿತರಣಾ ಯೋಜನೆಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆಸಿದ್ದಾರೆ. ಹಾಲಿ ನೀಡಿರುವ ಟೆಂಡರ್ ರದ್ದುಪಡಿಸಬೇಕು. ಸರ್ಕಾರಕ್ಕೆ ನಷ್ಟ ಮಾಡಿದ ಸಿವಿಲ್ ಸರ್ಜನ್, ಅವರಿಗೆ ಬೆಂಬಲ ನೀಡಿದವರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಪರಿಶಿಷ್ಟ ವಿಭಾಗದ ಅಧ್ಯಕ್ಷ ಎಲ್.ಚಂದ್ರಪ್ಪ,  ಪ್ರಮುಖರಾದ ಡಿ.ದಿನೇಶ್, ಸಂತೋಷ್, ಗಣಾಧೀಶ್, ನಿತ್ಯಾನಂದ ಶೆಟ್ಟಿ, ಸಂಜಯ್ ಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next