ಅರಕಲಗೂಡು: ಲಕ್ಷಾಂತರ ಹಣ ಲೂಟಿ ಮಾಡಿದ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲು ಮೀನಮೇಷ, ಅಕ್ರಮ ದಾಖಲೆಗಳ ನಾಶ ಮಾಡಲು ಕಾಲಾವಕಾಶ ನೀಡಿರುವ ಅರಣ್ಯ ಇಲಾಖೆ ಮುಖ್ಯ ಕಾರ್ಯ ದರ್ಶಿ ವಿರುದ್ಧ ಶಾಸಕ ಎ.ಟಿ. ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರಕಲಗೂಡು ವಿಧಾನಸಭಾ ಕ್ಷೇತ್ರವನ್ನು ಹಸಿರು ವಲಯವನ್ನಾಗಿ ನಿರ್ಮಿಸುವ ಮೂಲಕ ಪರಿಸರದಲ್ಲಾಗುತ್ತಿರುವ ಋತುಗಳ ಬದಲಾವಣೆ ತಡೆಯಲು ಕ್ಷೇತ್ರದ ಸರ್ಕಾರಿ ಖಾಲಿ ಜಾಗಗಳಲ್ಲಿ, ನಾಲಾಬದಿಗಳಲ್ಲಿ, ಶಾಲಾ ಆವರಣಗಳಲ್ಲಿ ಹಾಗೂ ಅರಣ್ಯಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಹಸಿರು ವಲಯಗಳನ್ನಾಗಿ ಮಾಡಲು ಎರಡು-ಮೂರು ವರ್ಷ ಗಳಿಂದ ಸತತವಾಗಿ ಶ್ರಮಿಸುತ್ತಾ ಬಂದಿದ್ದೇವೆ ಎಂದರು.
ಆದರೆ ಇತ್ತೀಚೆಗೆ ನಿಯೋಜನಗೊಂಡು ತಾಲೂಕಿಗೆಬಂದ ತಾಲೂಕು ವಲಯ ಅರಣ್ಯಾಧಿಕಾರಿ ಅರುಣ ತನ್ನ ಕಾರ್ಯ ದಿನದಿಂದಲೇ ಸುಳ್ಳು ದಾಖಲೆ ಸೃಷ್ಟಿಸಿ ತಾಲೂಕಿನ ಗೊಬ್ಬಳಿ ಮೀಸಲು ಅರಣ್ಯ ಪ್ರದೇಶ, ಕಣಿವೆಕಾವಲು ಪ್ರದೇಶ ಮತ್ತು ಇತರೆ ಸ್ಥಳಗಳಲ್ಲಿ ಕಾಮಗಾರಿ ಮಾಡಲಾಗಿದೆ ಎಂದು ಬಿಲ್ಲುಗಳನ್ನು ಸೃಷ್ಟಿಸಿ ಬೆಂಗಳೂರು ನಗರದ ಹತ್ತಿರವಿರುವ ಅತ್ತಿಬೆಲೆ ಗುತ್ತಿಗೆದಾರ ಎಂ.ಸಿ.ಅಂಜುಹುಸೆನ ಅವರು ಅರಕಲಗೂಡು ತಾಲೂಕಿಗೆ ಭೇಟಿಯನ್ನು ನೀಡಿಲ್ಲ ಹಾಗೂ ಯಾವುದೇ ಕಾಮಗಾರಿ ಪೂರೈಸಿಲ್ಲ, ಆದರೂ ಸಹ ಹಣವನ್ನು ಅವರ ಹೆಸರಿನಲ್ಲಿ ಡ್ರಾ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಅಧಿಕಾರಿ ತಾಲೂಕಿನ ಅರಣ್ಯ ಅಧಿಕಾರಿಯಾಗಿ ಅಧಿಕಾರ ಹಸ್ತಾಂತರ ಮಾಡಿಕೊಂಡಿದ್ದರೂ, ಸುಳ್ಳು ದಾಖಲೆ ಗಳಿಗೆ ಸಹಿ ಮಾಡಿ ಗುತ್ತಿಗೆದಾರನಿಗೆ ಹಣ ಪಾವತಿಸಿರುವುದು ಇವರ ಅಕ್ರಮಕ್ಕೆ ಸಾಕ್ಷಿಯಾಗಿದೆ. ಈ ವ್ಯಕ್ತಿಗೆ ಅರಣ್ಯ ಇಲಾಖಾ ಅಧಿಕಾರಿಗಳಾದ ಎಸಿಎಫ್, ಸಿಸಿಎಎಫ್, ಡಿಎಫ್ಒ ಅವರು ಸಹ ಅಕ್ರಮಕ್ಕೆ ಸಾಥ್ ನೀಡಿರುವುದು ಆತನ ಸುಳ್ಳು ಬಿಲ್ಲುಗಳೇ ಸಹಿ ಮಾಡಿರುವುದೇ ಸಾಕ್ಷಿಯಾಗಿದೆ. ಆದ್ದರಿಂದ ಇಂಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಈ ಪ್ರಕರಣ ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಈ ವೇಳೆ ತಹಶೀಲ್ದಾರ್ ರೇಣುಕುಮಾರ್ ಇದ್ದರು.