ಹಳಿಯಾಳ: ಪಶು ಸಂಗೋಪನಾ ಹಾಗೂ ಪಶು ವೈದ್ಯ ಇಲಾಖೆಯಲ್ಲಿ ದುಡ್ಡು ನೀಡದೆ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಸಾಕಷ್ಟು ದೂರು ಗಳು ಬರುತ್ತಿವೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದರು.
ಮಿನಿ ವಿಧಾನಸೌಧದ ಸಭಾಭವನದಲ್ಲಿ ನಡೆದ ತಾಪಂ ತ್ತೈಮಾಸಿಕ ಕೆಡಿಸಿ ಸಭೆಯಲ್ಲಿ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಪಶು ಸಂಗೋಪನಾ ಇಲಾಖೆ ಅಧಿಕಾರಿ ಡಾ| ನದಾಫ್ ಇಲಾಖೆಯ ಪ್ರಗತಿ ಹೇಳುತ್ತಿದ್ದಾಗ ಮಧ್ಯ ಪ್ರವೇಶಿಸಿದ ಶಾಸಕರು ರೈತರಿಂದ ಬರುತ್ತಿರುವ ದೂರುಗಳ ಕುರಿತು ಹೇಳಿದರು. ಅಲ್ಲದೇ ಈ ಕುರಿತು ಸಭೆಯಲ್ಲಿದ್ದ ಎಸಿ ಅಭಿಜಿನ್‌ಗೆ ತನಿಖೆ ನಡೆಸುವಂತೆ ಸೂಚಿಸಿದರು. ಭ್ರಷ್ಟಾಚಾರ ಕಂಡು ಬಂದರೇ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದರು.
ತಾಲೂಕಿನಲ್ಲಿ ಸಂಭವಿಸಿರುವ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳು, ಬೆಳೆಗಳ ಕುರಿತು ಸರಿಯಾದ ಸಮೀಕ್ಷೆ ಆಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಒಮ್ಮೆ ಸರ್ಕಾಕ್ಕೆ ವರದಿ ಹೋದ ಬಳಿಕ ಏನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಮಾಧಾನದಿಂದ ಜವಾಬ್ದಾರಿಯುತವಾಗಿ ಹಾಗೂ ಪಾರದರ್ಶಕವಾಗಿ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿ. ಹೊರತು ತರಾತುರಿಯಲ್ಲಿ ಬೇಡ ಎಂದರು.
ಮಳೆ, ನೆರೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಕನಿಷ್ಠ 25 ಸಾವಿರ ರೂ. ಪರಿಹಾರ ಧನ ನೀಡುವ ರಾಜ್ಯ ಸರ್ಕಾರದ ನೂತನ ಆದೇಶವನ್ನು ಸ್ವಾಗತಿಸುವುದಾಗಿ ಹೇಳಿದ ಅವರು, ಈ ಆದೇಶ ತಕ್ಷಣ ಜಾರಿಗೆ ಬರಬೇಕು. ಈಗಾಗಲೇ ತಡವಾಗಿರುವ ಕಾರಣ ವಿಳಂಬವಾಗದಂತೆ ಅರ್ಹರಿಗೆ ಶೀಘ್ರವೇ ಪರಿಹಾರದ ಮೊತ್ತ ಸಿಗುವಂತಾಗಬೇಕು. ಬಾಕಿ ಉಳಿದ ಮೊತ್ತವನ್ನು ಅವರ ಖಾತೆಗಳಿಗೆ ಜಮಾ ಮಾಡಲು ಕ್ರಮ ಕೈಗೊಳ್ಳುವಂತೆ ಎಸಿ ಅಭಿಜಿನ್‌ಗೆ ಸೂಚಿಸಿದರು.
ಕೆಸರೊಳ್ಳಿ ನಾಕಾ ಪ್ರದೇಶದ ನಿರಾಶ್ರಿತರಿಗೆ ಒಂದು ವಾರದ ಒಳಗಾಗಿ ಕೆಸರೊಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಜಾಗ ಗುರುತಿಸಿ ಸೂರು ಒದಗಿಸುವ ಕಾರ್ಯವಾಗಬೇಕೆಂದು ತಾಲೂಕಾಡಳಿತಕ್ಕೆ ಸೂಚಿಸಿದ ದೇಶಪಾಂಡೆ ಅಧಿಕಾರಿಗಳು ತಮ್ಮ ಬಳಿ ಆಗದ ಕೆಲಸಗಳ ಕುರಿತು ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವಿಪ ಸದಸ್ಯ ಘೊಕ್ಲೃಕರ್ ಗಮನಕ್ಕೆ ತರಬೇಕು. ಅದನ್ನು ಮಾಡದೇ ಸುಮ್ಮನೆ ಕೂತರೆ ಹೇಗೆ ಎಂದು ಪ್ರಶ್ನಿಸಿದರು.
ಶೀಘ್ರವೇ ಹಾಳಾದ ರಸ್ತೆಗಳ ದುರಸ್ತಿ ಮಾಡುವಂತೆ ಪಿಡಬ್ಲೂಡಿ ಅಧಿಕಾರಿ ಕುಲಕರ್ಣಿಗೆ ಹಾಗೂ ತಹಶೀಲ್ದಾರ್ ಬಳಿ ಇರುವ ವಿಶೇಷ ಅನುದಾನವನ್ನು ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಲು ವಿವಿಧ ಇಲಾಖೆಗಳಿಗೆ ಬಿಡುಗಡೆಗೊಳಿಸುವಂತೆ ತಹಶೀಲ್ದಾರ್ ವಿದ್ಯಾಧರ ಗುಳಗುಳಿಗೆ ಸೂಚಿಸಿದರು.
ಜಿಪಂ ಉಪಾದ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಲಕ್ಷ್ಮೀ ಕೊರ್ವೆಕರ, ಮಹೇಶ್ರಿ ಮಿಶ್ಯಾಳಿ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಸದಸ್ಯರಾದ ದೇಮಾಣಿ ಶೀರೋಜಿ, ಗಿರಿಶ ಟೋಸುರ, ಜಾವಳೆಕರ, ಪುರಸಭೆ ಸದಸ್ಯರು, ಎಲ್ಲಾ ಅಧಿಕಾರಿಗಳು ಇದ್ದರು.