Advertisement

ಫೆರ್ನಾಂಡೀಸ್‌ಗೆ ಭ್ರಷ್ಟಾಚಾರದ ಕೊಳಕು ಲೇಪಿಸಿದ್ದು ಕ್ರೂರ ವ್ಯವಸ್ಥೆ

06:38 AM Feb 15, 2019 | |

ಬೆಂಗಳೂರು: ಸಮಾಜವಾದಿ ಗುಣಗಳನ್ನು ಮೈಗೂಡಿಸಿಕೊಂಡು ಭ್ರಷ್ಟಾಚಾರದ ವಿರುದ್ಧ ರಾಷ್ಟ್ರವ್ಯಾಪಿ ಹೋರಾಟ ನಡೆಸಿದ ಜಾರ್ಜ್‌ ಫೆರ್ನಾಂಡೀಸ್‌ ಅವರಿಗೆ ಈ ಕ್ರೂರ ವ್ಯವಸ್ಥೆ ಭ್ರಷ್ಟಾಚಾರದ ಕೊಳಕು ಲೇಪಿಸಿತು ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಬೇಸರ ವ್ಯಕ್ತಪಡಿಸಿದರು.

Advertisement

ಶಾಸಕರ ಭವನದಲ್ಲಿ ಜಾರ್ಜ್‌ ಫೆರ್ನಾಂಡೀಸ್‌ ಅಭಿಮಾನಿಗಳ ಬಳಗ ಗುರುವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ನಿಷ್ಠಾವಂತ ಕಾಂಗ್ರೆಸ್ಸಿಗ, ಹೀಗಾಗಿ ಜಾರ್ಜ್‌ ಫೆರ್ನಾಂಡೀಸ್‌ ಅವರೊಂದಿಗೆ ಅಷ್ಟೊಂದು ಒಡನಾಟ ಇರಲಿಲ್ಲ.

ಆದರೂ ಜಾರ್ಜ್‌ ಫೆರ್ನಾಂಡೀಸ್‌ ಅವರ ಹೋರಾಟ ಭಾಷಣಗಳಿಗೆ ಮಾರು ಹೋಗಿದ್ದೇ. ದೆಹಲಿ, ಬಿಹಾರ ಸೇರಿದಂತೆ ಹಲವು ಕಡೆಗಳಲ್ಲಿ ಅವರನ್ನು ಭೇಟಿ ಮಾಡಿದ್ದೆ. ಜತಗೆ ಬೆಂಗಳೂರಿನಲ್ಲಿ ಜಾರ್ಜ್‌ ಫೆರ್ನಾಂಡೀಸ್‌ ಅವರು ಹಮ್ಮಿಕೊಳ್ಳುತ್ತಿದ್ದ ಸಭೆಗಳಲ್ಲಿ ಭಾಗವಹಿಸುತ್ತಿದ್ದೆ’ ಎಂದು ಹೇಳಿದರು.

ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿ ಅವರು ಸ್ಪರ್ಧಿಸಿದ್ದಾಗ ನಾನು ಇಂದಿರಾಗಾಂಧಿ ಅವರ ಪರ ಪ್ರಚಾರ ಮಾಡಿದೆ. ಅವರು ವೀರೇಂದ್ರ ಪಾಟೀಲ್‌ ಅವರ ಪರ ಪ್ರಚಾರ ಮಾಡಿದರು. ಅವರು ಇಟ್ಟ ಹೆಜ್ಜೆಯಿಂದ ಎಂದೂ ಹಿಂದೆಸರಿದವರಲ್ಲ. ಹೋರಾಟ ಮಾಡುತ್ತಲೇ ಮುಂದೆ ಬಂದರು ಎಂದು ತಿಳಿಸಿದರು.

ಕೋಕಾ ಕೋಲಾ ಬಿಟ್ಟಿದ್ದೇನೆ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ, ನಾನು ಜಾರ್ಜ್‌ ಫೆರ್ನಾಂಡೀಸ್‌ ಅವರ ಹೋರಾಟಗಳಿಗೆ ಮಾರು ಹೋಗಿದ್ದೆ. ಅವರು ಕೇಂದ್ರ ಸಚಿವರಾಗಿದ್ದಾಗ ಕೋಕಾ ಕೋಲಾ ಕಂಪನಿ ಭಾರತದಿಂದ ತೊಲಗಿಸಬೇಕು ಎಂದು ಕರೆ ನೀಡಿದ್ದರು. ಆ ಹಿನ್ನೆಲೆಯಲ್ಲಿಯೇ ಅಂದಿನಿಂದ ಇಂದಿನವರೆಗೆ ನಾನು ಕೋಕಾ ಕೋಲಾ ಸೇವಿಸಿಲ್ಲ ಎಂದರು.

Advertisement

ಲೋಕದಳ ಪಕ್ಷದಿಂದ ಮೈಸೂರು ಲೋಕಸಭೆ ಕ್ಷೇತ್ರಕ್ಕೆ ಜಾರ್ಜ್‌ ಫೆರ್ನಾಂಡೀಸ್‌ ಅವರು ನನ್ನ ಚುನಾವಣಾ ಕಣಕ್ಕೆ ಇಳಿಸಿದ್ದರು. ನನಗೆ ಇಷ್ಟ ಇರಲಿಲ್ಲ. ಆದರೂ ಚುನಾವಣೆಗಾಗಿ ನನಗೆ 1.ಲಕ್ಷ ರೂ. ನೀಡಿದ್ದಲ್ಲದೆ ಪ್ರಚಾರ ಕೂಡ ಮಾಡಿದ್ದರು. ಜತಗೆ ರೈತ ನಾಯಕ ನಂಜುಂಡಸ್ವಾಮಿ ಅವರು ಹಳೇ ಕಾರು ಕೊಟ್ಟಿದ್ದರು. ಅದು ಎಲ್ಲಿಬೇಕೂ ಅಲ್ಲಿ ನಿಲ್ಲುತ್ತಿತ್ತು.

ಚುನಾವಣೆ ಸ್ಪರ್ಧಿಸಲು ಇಷ್ಟವಿಲ್ಲದ ಕಾರಣ ನಾನು ನಾಗರಹೊಳೆ ಸೇರಿದಂತೆ ಅಲ್ಲಿಲ್ಲಿ ತಪ್ಪಿಸಿಕೊಂಡು ಕಾಲಹರಣ ಮಾಡಿದೆ ಎಂದು ಸ್ಮರಿಸಿಕೊಂಡರು. ಜಾರ್ಜ್‌ ಫೆರ್ನಾಂಡೀಸ್‌ ಅವರ ಮನೆಯಿದ್ದ ಜಾನ್ಸನ್‌ ಮಾರುಕಟ್ಟೆ ವ್ಯಾಪ್ತಿಯ ರಸ್ತೆಗೆ ಅವರ ಹೆಸರು ಅಥವಾ ಪುತ್ಥಳಿ ಸ್ಥಾಪಿಸುವ ಸಂಬಂಧ ಪಾಲಿಕೆಯೊಂದಿಗೆ ಮಾತನಾಡುವುದಾಗಿ ಹೇಳಿದರು.

ಆರೋಗ್ಯ ಸಚಿವ ಶಿವಾನಂದ ಪಾಟೀಲ್‌, ಬಿಜೆಪಿ ಮುಖಂಡ ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ ಎಚ್‌. ಆಂಜನೇಯ, ಬಿ.ಸೋಮಶೇಖರ್‌, ಜಾರ್ಜ್‌ ಫೆರ್ನಾಂಡಿಸ್‌ ಸಹೋದರ ಮೈಕೇಲ್‌ ಫೆರ್ನಾಂಡಿಸ್‌ ಮಾತನಾಡಿದರು. ಶಾಸಕ ಕುಮಾರ ಬಂಗಾರಪ್ಪ ಉಪಸ್ಥಿತರಿದ್ದರು.

ಡಾ.ರಾಜ್‌ಕುಮಾರ್‌ ಸೆಳೆಯುವ ಯತ್ನ: ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಡಾ.ರಾಜ್‌ಕುಮಾರ್‌ ಅವರನ್ನು ರಾಜಕಾರಣಕ್ಕೆ ಕರೆತರುವ ಬಗ್ಗೆ ಜಾರ್ಜ್‌ ಫೆರ್ನಾಂಡೀಸ್‌ ಅವರಿಗೆ ಆಸೆಯಿತ್ತು. ಅದಕ್ಕಾಗಿ ನಾನು ಮೈಸೂರಿನಲ್ಲಿ ಸುಜಾತಾ ಹೋಟೆಲ್‌ಗೆ ರಾಜ್‌ಕುಮಾರ್‌ ಅವರನ್ನು ಕರೆಯಿಸಿ ಭೇಟಿ ಮಾಡಿದೆ. ಜಾರ್ಜ್‌ ಅವರು ಅಮ್ಮವರ ಹತ್ತಿರ (ಪಾರ್ವತಮ್ಮ ರಾಜ್‌ಕುಮಾರ್‌) ಮಾತಾಡಿ ಒಪ್ಪಿಸಿ ಅಂದಿದ್ದರು. ಆದರೆ ಆ ಆಸೆ ಈಡೇರಲಿಲ್ಲ ಎಂದು ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next