ಮಾಸ್ತಿ: ವಿದ್ಯಾರ್ಥಿ ನಿಲಯಗಳಿಗೆ ಅಳವಡಿಸಿರುವ ಮಳೆ ನೀರು ಕೊಯ್ಲು ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದರ ಜೊತೆಗೆ ಕಳಪೆ ಗುಣಮಟ್ಟದ್ದಾಗಿ ರುತ್ತದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖಾ ತಂಡದ ಅಧಿಕಾರಿಗಳು ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವರದಿ ನೀಡಲು ಆದೇಶ: ಮಾಸ್ತಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಗೆ ಒಳಪಟ್ಟ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ 2014-15ನೇ ಸಾಲಿನಲ್ಲಿ ಮಳೆ ನೀರು ಕೊಯ್ಲು ಅಳವಡಿಸಲಾಗಿತ್ತು. ಇದನ್ನು ಗಮನಿಸಿದ ಮಾಸ್ತಿ ಕ್ಷೇತ್ರದ ಜಿಪಂ ಸದಸ್ಯ ಎಚ್.ವಿ. ಶ್ರೀನಿವಾಸ್ ಅವರು ಜಿಪಂ ಸಾಮಾನ್ಯ ಸಭೆಗಳಲ್ಲಿ ವಿದ್ಯಾ ರ್ಥಿ ನಿಲಯಗಳಿಗೆ ಅಳವಡಿಸಿರುವ ಮಳೆ ನೀರು ಕೊಯ್ಲು ಕಾಮಗಾರಿಯಲ್ಲಿ ಬಾರಿ ಅವ್ಯವ ಹಾರ ನಡೆದಿದೆ. ಕಾಮಗಾರಿ ಕಳಪೆ ಗುಣಮಟ್ಟದ್ದಾಗಿ ರುತ್ತದೆ ಎಂದು ಆರೋಪ ಮಾಡುತ್ತಿದ್ದರು. ಈ ಹಿನ್ನೆಲೆ ಯಲ್ಲಿ ಅಧಿಕಾರಿಗಳ ತಂಡ ನಿಯೋಜನೆ ಮಾಡಿ, ಪರಿಶೀಲಿಸಿ ವರದಿ ನೀಡುವಂತೆ ಆದೇಶಿಸಲಾಗಿತ್ತು.
ಪರಿಶೀಲನೆ: ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಒಳಪಡುವ ಮಾಲೂರು ತಾಲೂಕಿನ ಶಿವಾರಪಟ್ಟಣ, ಚಿಕ್ಕಕುಂತೂರು ಬಾಲಕರ ವಿದ್ಯಾರ್ಥಿ ನಿಲಯ, ಮಾಸ್ತಿ ಗ್ರಾಮದ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಗ್ರಾಮೀಣ ಕುಡಿವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇಇ ಜಿ.ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಶಿವಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಳೆ ಮಾಡಲಾಗುವುದು: ಬಳಿಕ ಮಾತನಾಡಿದ ಎಇಇ ಜೆ.ನಾರಾಯಣಸ್ವಾಮಿ, ಮಾಲೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಕಟ್ಟಡಗಳಿಗೆ ಬೆಂಗಳೂರಿನ ನಿರ್ಮಿತಿ ಕೇಂದ್ರದವರು ನಾಲ್ಕೈದು ವರ್ಷಗಳ ಹಿಂದೆ ಮಳೆ ನೀರು ಕೊಯ್ಲು ಕಾಮಗಾರಿ ಕೈಗೊಂಡಿದ್ದಾರೆ. ಮಾಲೂರು ತಾಲೂಕಿನಲ್ಲಿ ನಾಲ್ಕು ಕಟ್ಟಡಗಳಿವೆ. ಇದನ್ನು ಪರಿಶೀಲಿಸಲು ತಂಡ ರಚನೆ ಮಾಡಿ ವರದಿ ನೀಡಬೇಕೆಂದು ನೇಮಿಸಲಾಗಿದೆ. 2014-15ನೇ ಸಾಲಿನಲ್ಲಿ ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿ ಅಂದಾಜು ಪಟ್ಟಿ ಮತ್ತಿತರ ಕುರಿತು ತಾಳೆ ಮಾಡಲಾಗುವುದು ಎಂದು ಪರಿಶೀಲಿಸಿದ ಬಳಿಕ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹ: ಮಾಸ್ತಿ ಕ್ಷೇತ್ರದ ಜಿಪಂ ಸದಸ್ಯ ಎಚ್.ವಿ.ಶ್ರೀನಿವಾಸ್ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಕೋಟ್ಯಂತರ ರೂ.ವೆಚ್ಚದಲ್ಲಿ ಎಸ್ಸಿ, ಎಸ್‌ಟಿ ಹಾಸ್ಟೆಲ್‌ಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಕೆಲವೊಂದು ಹಾಸ್ಟೆಲ್‌ಗಳಲ್ಲಿ ಕಳಪೆ ಕಾಮಗಾರಿ ಕೈಗೊಳ್ಳಲಾಗಿದೆ. ಈ ವಿಷಯವಾಗಿ ಜಿಪಂ ಸಾಮಾನ್ಯ ಸಭೆಯಲ್ಲಿ ಮೂರು ವರ್ಷದ ಹಿಂದೆ ಪ್ರಸ್ತಾಪ ಮಾಡಲಾಗಿತ್ತು. ಎಲ್ಲಾ ಜಿಪಂ ಸದಸ್ಯರು ಸೇರಿ ಈ ಕುರಿತಂತೆ ಸಮಾಜ ಕಲ್ಯಾಣ ಇಲಾಖೆ ಯವರಿಗೂ ಗಮನಕ್ಕೆ ತರಲಾಗಿತ್ತು ಎಂದರು.
ಗಮನಕ್ಕೆ ತರದೇ ಕಾಮಗಾರಿ: ಬೆಂಗಳೂರಿನಿಂದ ಏಕಾಏಕಿ ಬಂದ ಅಧಿಕಾರಿಗಳು ಹಾಸ್ಟೆಲ್‌ಗಳ ಮಾಹಿತಿ ಪಡೆದಿದ್ದಾರೆ. ನೇರವಾಗಿ ಕಾಮಗಾರಿ ಕೈಗೊಂಡಿದ್ದಾರೆ. ಜಿಲ್ಲಾಧಿಕಾರಿಗಳು, ಸಿಇಒ, ಶಾಸಕರು, ಎಂಪಿ, ಜಿಪಂ ಸದಸ್ಯರು, ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಜಿಲ್ಲೆಯ ಅಧಿಕಾರಿಗಳು ಸೇರಿದಂತೆ ಯಾರ ಗಮನಕ್ಕೂ ತರದೆ ಕಾಮಗಾರಿ ಕೈಗೊಳ್ಳಲಾಗಿದೆ. ಈ ವಿಷಯವನ್ನು ಜಿಪಂ ಸಭೆಯಲ್ಲೂ ಪ್ರಸ್ತಾಪಿಸಲಾಗಿದೆ. ಕಳಪೆ ಕಾಮಗಾರಿ ವಿಷಯವಾಗಿಯೂ ಚರ್ಚೆ ನಡೆದಿತ್ತು ಎಂದರು. ಈ ಸಂದರ್ಭದಲ್ಲಿ ಮಾಸ್ತಿ ಗ್ರಾಮ ಪಂಚಾಯಿತಿ ಪಿಡಿಒ ಕಿಶೋರ್‌ಕುಮಾರ್ ಇನ್ನಿತರರು ಹಾಜರಿದ್ದರು.