ಅಥಣಿ: ಪಿ.ಎಸ್.ಐ ಹುದ್ದೆ ನೇಮಕದಲ್ಲಿ ಅಕ್ರಮವಾಗಿದ್ದರೆ ಭ್ರಷ್ಟಾಚಾರದಲ್ಲಿ ಭಾಗಿಯಾದವರು ಯಾವುದೇ ಉನ್ನತ ಹುದ್ದೆಯಲ್ಲಿದ್ದರೂ ಕ್ರಮ ಜರುಗಿಸಲೇಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಗುರುವಾರ ಅಥಣಿಯಲ್ಲಿ ಅಪ್ಪಸಾಬ ಅವತಾಡೆ ಅವರ ಮನೆಯಲ್ಲಿ ತಮ್ಮ ಆಪ್ತರು ಮತ್ತು ಬಿಜೆಪಿ ಮುಖಂಡರ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ. ಯಾವತ್ತು ರಮೇಶ ಜಾರಕಿಹೊಳಿ ನುಡಿದಂತೆ ನಡೆದಿದ್ದಾನೆ. ನಾನು ಬಿಟ್ಟ ಬಾಣ ಹಿಂದೆ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ವರಿಷ್ಠರ ನಿರ್ಣಯಕ್ಕೆ ಬದ್ಧನಾಗಿದ್ದೇನೆ. ತಿಳಿಸಿದಂತೆ ನಡೆದುಕೋಳ್ಳುತ್ತೇನೆ. ಬೋಮ್ಮಾಯಿ ನೇತೃತ್ವದಲ್ಲಿ 2023ರ ಚುನಾವಣೆ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ಈಗಾಗಲೇ ತಾವು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಹಲವು ಬಾರಿ ಹೇಳಿದ್ದಾರೆ ಅಷ್ಟೇ ಅಲ್ಲದೆ ತಮ್ಮ ಬಳಿಯೂ ಅವರು ಸಚಿವ ಸ್ಥಾನ ನನಗೆ ಬೇಡ. ಅಥಣಿ ಕ್ಷೇತ್ರಕ್ಕೆ ನೀರಾವರಿ ಯೋಜನೆಗಳನ್ನು ನೀಡಿ ರೈತರು ಮತ್ತು ಕ್ಷೇತ್ರದ ಜನರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಕೇಳಿದ್ದಾರೆ ಎಂದು ತಿಳಿಸಿದರು.
ಮೇ ತಿಂಗಳಿನಲ್ಲಿ ಗೋಕಾದಲ್ಲಿ ಅಮೀತ ಶಾ ಅವರ ಕಾರ್ಯಕ್ರಮ ಮತ್ತು ಕಾರ್ಯಕರ್ತರ ಸಮಾವೇಶ, ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ಅಹಿಂದ ಸಮಾವೇಶಕ್ಕೆ 5 ಲಕ್ಷ ಜನ ಸೇರಿಸುವ ಉದ್ದೇಶವಾಗಿದ್ದು ಅದಕ್ಕಾಗಿ ಪೂರ್ವಭಾವಿ ಸಭೆ ಇದಾಗಿದೆ. ಇನ್ನು ಕಾಗವಾಡ ಕ್ಷೇತ್ರದ ಶಾಸಕರಾದ ಶ್ರೀಮಂತ ಪಾಟೀಲರಿಗೆ ಶೀಘ್ರದಲ್ಲೇ ಶುಭ ಸುದ್ದಿ ಬರಲಿದೆ ಎನ್ನುವ ಮೂಲಕ ಪರೋಕ್ಷವಾಗಿ ಶ್ರೀಮಂತ ಪಾಟೀಲರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ಅಲ್ಲದೆ ನನಗೆ ಹೇಳಲು ತುಂಬಾ ವಿಷಯಗಳಿವೆ. ಆದರೆ ರಾಷ್ಟೀಯ ಪಕ್ಷದಲ್ಲಿ ಇರುವುದರಿಂದ ಹೈಕಮಾಂಡ್ ಆದೇಶದಂತೆ ಕೆಲಸ ಮಾಡಬೇಕಾಗುತ್ತದೆ ಎಂದರು. ಆಧಾರ ಇದ್ದರೆ ಮಾತ್ರ ಆರೋಪ ಮಾಡಬೇಕು. ಪ್ರಿಯಾಂಕ ಖರ್ಗೆ ಅವರು ಆಧಾರ ರಹಿತ ಆರೋಪ ಮಾಡುತ್ತಿದ್ದು ಅವರು ನಮ್ಮ ಹಳೆ ಗುರುವಿನ ಮಗನಾಗಿದ್ದರಿಂದ ಅವರ ಬಗ್ಗೆ ನನಗೆ ಗೌರವವಿದೆ. ಸಿ.ಐ.ಡಿ ಮೂರು ವೇಳೆ ನೋಟಿಸ್ ಜಾರಿ ಮಾಡಿದರೂ ಈವರೆಗೆ ಹಾಜರಾಗದೇ ಗೈರಾಗಿರುವುದು ಏಕೆ ಎಂದರು.
ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ಶೀತಲಗೌಡ ಪಾಟೀಲ, ಅಮುಲ ನಾಯಿಕ, ನಿಂಗಪ್ಪಾ ನಂದೇಶ್ವರ, ನಾನಾಸಾಬ ಅವತಾಡೆ, ಅನೀಲ ಸೌಧಾಗರ, ಅಶೋಕ ಯಲಡಗಿ, ಮಲ್ಲಿಕಾರ್ಜುನ ಅಂದಾನಿ, ತಿಪ್ಪಣ್ಣ ಬಜಂತ್ರಿ ಸೇರಿದಂತೆ ಅನೇಕರು ಇದ್ದರು.